ಕರ್ನಾಟಕ

ಉ.ಕರ್ನಾಟಕದ ನೂತನ ಸಚಿವರಿಂದ ಪ್ರಭಾವಿ ಖಾತೆಗಳಿಗೆ ಪಟ್ಟು

Pinterest LinkedIn Tumblr


ಬೆಂಗಳೂರು: ಸಂಪುಟ ಪುನಾರಚನೆ ಬಳಿಕ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಹೊಸ ತಲೆನೋವು ಶುರುವಾಗಿದೆ. ಈಗಾಗಲೇ ಪುನಾರಚನೆ ವೇಳೆ ಹೆಚ್ಚು ಸ್ಥಾನ ಪಡೆದಿರುವ ಉತ್ತರ ಕರ್ನಾಟಕ ಭಾಗದ ನಾಯಕರು ಪ್ರಭಾವಿ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ತಮಗೆ ‘ಹೆಚ್ಚುವರಿ’ ಖಾತೆಗಳನ್ನು ನೀಡಬೇಡಿ, ಬದಲಾಗಿ ಪ್ರಭಾವಿ ಖಾತೆಗಳನ್ನೇ ನೀಡಿ. ಉತ್ತರ ಕರ್ನಾಟಕಕ್ಕೆ ಆಗಿರುವ ಅಸ ಮಾನತೆಯನ್ನು ಸರಿಪಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ಉಪ ಮುಖ್ಯಮಂತ್ರಿ ಸ್ಥಾನ, ಗೃಹ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಕೃಷಿ, ನಗರಾಭಿವೃದ್ಧಿ ಖಾತೆಗಳೆಲ್ಲವೂ ದಕ್ಷಿಣ ಕರ್ನಾಟಕದವರ ಪಾಲಿನಲ್ಲಿವೆ. ಇವುಗಳಲ್ಲಿ ಕೆಲವು ಖಾತೆಗಳನ್ನಾದರೂ ನಮಗೆ ಕೊಡಿ ಎಂಬುದು ಉತ್ತರ ಕರ್ನಾಟಕದವರ ಬೇಡಿಕೆ.

ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ| ಜಿ. ಪರಮೇಶ್ವರ್‌, ಡಿ.ಕೆ. ಶಿವಕುಮಾರ್‌, ಕೃಷ್ಣ ಬೈರೇಗೌಡ, ಯು.ಟಿ. ಖಾದರ್‌, ಆರ್‌.ವಿ. ದೇಶಪಾಂಡೆ ಸಹಿತ ಕೆಲವರ ಬಳಿ ಹೆಚ್ಚುವರಿಯಾಗಿ ಖಾತೆಗಳಿವೆ. ಇವುಗಳಲ್ಲಿ ಪ್ರಮುಖ ಖಾತೆಗಳನ್ನು ತಮ್ಮಲ್ಲಿಯೇ ಇರಿಸಿ ಹೆಚ್ಚುವರಿಯಾಗಿ ಇರುವ ಖಾತೆಗಳನ್ನು ಬಿಟ್ಟುಕೊಡಲು ಹಿರಿಯ ಸಚಿವರು ಸಿದ್ಧರಿದ್ದಾರೆ. ಪರಮೇಶ್ವರ್‌ ಬಳಿ ಗೃಹ, ಬೆಂಗಳೂರು ನಗರಾಭಿವೃದ್ಧಿ ಹಾಗೂ ಹೆಚ್ಚುವರಿಯಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಇದೆ. ಪರಮೇಶ್ವರ್‌ ಹೆಚ್ಚುವರಿ ಖಾತೆ ಬಿಟ್ಟುಕೊಡಲು ಸಿದ್ಧರಿದ್ದಾರೆ. ಆದರೆ ಓರ್ವರೇ ಎರಡು ಪ್ರಭಾವಿ ಖಾತೆ ಇಟ್ಟುಕೊಂಡರೆ ಸಮಾನ ಹಂಚಿಕೆ ಮಾಡಿದಂತಾಗುವುದಿಲ್ಲ. ಗೃಹ ಖಾತೆಯೇ ಬೇಕಿದ್ದರೆ ಯುವಜನ, ಕ್ರೀಡಾ ಖಾತೆ ಉಳಿಸಿಕೊಂಡು ಬೆಂಗಳೂರು ನಗರಾಭಿವೃದ್ಧಿ ಬಿಟ್ಟುಕೊಡಲಿ ಎಂಬ ಒತ್ತಾಯ ಕೇಳಿಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಪರಮೇಶ್ವರ್‌ ಮಾತ್ರ ಬೆಂಗಳೂರು ನಗರಾಭಿವೃದ್ಧಿ ಖಾತೆ ತಮ್ಮಲ್ಲಿಯೇ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಗೃಹ ಬಿಡಬೇಕಾದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಖಾತೆ ನೀಡುವಂತೆ ಷರತ್ತು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಲ ಸಂಪನ್ಮೂಲ ಖಾತೆ ಮೇಲೆ ನೂತನ ಸಚಿವ ಎಂ.ಬಿ. ಪಾಟೀಲ್‌ ಅವರ ಕಣ್ಣು ಬಿದ್ದಿದೆ. ಸದ್ಯ ಇದು ಡಿ.ಕೆ. ಶಿವಕುಮಾರ್‌ ಬಳಿ ಇದ್ದು, ಅವರೂ ಇದನ್ನೇ ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ ಎಂಬ ಮಾತುಗಳಿವೆ. ಒಂದು ವೇಳೆ ಈ ಖಾತೆ ಬಿಡಬೇಕಾದರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿ ಎಂದು ಪಟ್ಟುಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಎರಡು ಖಾತೆ ಹೊಂದಿರುವ ಕೃಷ್ಣ ಬೈರೇಗೌಡ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಖಾತೆ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಜಲ ಸಂಪನ್ಮೂಲ ಅಥವಾ ಗೃಹ ಖಾತೆ ದೊರೆಯದಿದ್ದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಖಾತೆಯನ್ನಾದರೂ ನೀಡುವಂತೆ ಎಂ.ಬಿ. ಪಾಟೀಲ್‌ ನಾಯಕರ ಮುಂದೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ನೂತನ ಸಚಿವರ ಖಾತೆ ಒತ್ತಾಯದಿಂದ ರಾಜ್ಯ ಕಾಂಗ್ರೆಸ್‌ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆೆ. ಆ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸಮ್ಮುಖದಲ್ಲಿಯೇ ಖಾತೆಗಳ ಹಂಚಿಕೆಗೆ ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಮಂಗಳವಾರ ಇದು ಅಂತಿಮಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ರಾಮಲಿಂಗಾ ರೆಡ್ಡಿ ಅಸಮಾಧಾನ
ಸಚಿವ ಸ್ಥಾನ ಕೈತಪ್ಪಲು ಇಬ್ಬರು ಸಚಿವರು ಪ್ರಮುಖ ಕಾರಣ ಎಂದು ಕಾಂಗ್ರೆಸ್‌ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌ ಮತ್ತು ಕೃಷ್ಣ ಬೈರೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ನೀಡಿ ಎಂದು ಯಾವ ನಾಯಕರನ್ನೂ ಕೇಳಿಲ್ಲ. ಆದರೆ ಹಿರಿಯರು ಎನ್ನುವ ಕಾರಣಕ್ಕೆ ಸಂಪುಟದಿಂದ ಹೊರಗಿಡಲಾಗಿದೆ ಎಂಬ ಮಾತಿನಿಂದ ಬೇಸರವಾಗಿದೆ ಎಂದರು.

ನನ್ನ ಯತ್ನ ಫ‌ಲ ನೀಡಲಿಲ್ಲ :ಮಲ್ಲಿಕಾರ್ಜುನ ಖರ್ಗೆ
‘ಸಂಪುಟ ವಿಸ್ತರಣೆ ವೇಳೆ ಕಲಬುರಗಿ ಜಿಲ್ಲೆಗೆ ಮತ್ತೂಂದು ಸಚಿವ ಸ್ಥಾನ ದೊರಕಿಸಬೇಕು ಎಂದು ನಾನು ಪ್ರಯತ್ನಿಸಿದ್ದೆ. ಆದರೆ ಕೊನೆ ಹಂತದಲ್ಲಿ ನನ್ನ ಪ್ರಯತ್ನ ಫಲ ನೀಡಲಿಲ್ಲ. ನನ್ನ ಮಾತು ನಡೆಯಲೇ ಇಲ್ಲ. ಹೀಗಾಗಿ ನನಗೂ ಬಹಳ ನೋವಾಗಿದೆ’ ಎಂದು ಲೋಕಸಭೆ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆಯಿಂದ ಡಾ| ಅಜಯ ಸಿಂಗ್‌ ಮತ್ತು ಡಾ| ಉಮೇಶ ಜಾಧವ ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಶಿಫಾರಸು ಮಾಡಿದ್ದೆ ಎಂದು ಅವರು ಹೇಳಿದರು.

ರಮೇಶ್‌ ರಾಜೀನಾಮೆ ಇಲ್ಲ?
ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೆ, ಇನ್ನೊಂದೆಡೆ ಸತೀಶ್‌ ಜಾರಕಿಹೊಳಿಗೆ ಮಂತ್ರಿಗಿರಿ ಸಿಕ್ಕಿರುವುದರಿಂದ ನಾನು ರಾಜೀನಾಮೆ ಕೊಟ್ಟು ಏನು ಮಾಡೋದು ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಸಂಪುಟದಲ್ಲಿ ಆಗಿರುವ ಅಸಮಾನತೆಯನ್ನು ಪಕ್ಷದ ಹೈಕಮಾಂಡ್‌ ಗಮನಿಸಿ ಸರಿಪಡಿಸುವ ಕೆಲಸ ಮಾಡಿದೆ. ಅದೇ ರೀತಿ ಖಾತೆಗಳ ಹಂಚಿಕೆಯಲ್ಲಿಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಹೈಕಮಾಂಡ್‌ ಗಮನಕ್ಕೆ ತರಲಾಗಿದೆ. ಅದನ್ನೂ ಸರಿಪಡಿಸುವ ವಿಶ್ವಾಸ ಇದೆ.
– ಎಚ್‌.ಕೆ.ಪಾಟೀಲ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

Comments are closed.