ಕರ್ನಾಟಕ

ನನ್ನ ಮಾತು ನಡೆಯಲೇ ಇಲ್ಲ. ಹೀಗಾಗಿ ನನಗೂ ನೋವಾಗಿದೆ: ಮಲ್ಲಿಕಾರ್ಜುನ ಖರ್ಗೆ

Pinterest LinkedIn Tumblr


ಕಲಬುರಗಿ: ‘ಸಂಪುಟ ವಿಸ್ತರಣೆ ವೇಳೆ ಕಲಬುರಗಿ ಜಿಲ್ಲೆಗೆ ಮತ್ತೂಂದು ಸಚಿವ ಸ್ಥಾನ ದೊರಕಿಸಬೇಕು ಎಂದು ನಾನು ಪ್ರಯತ್ನಿಸಿದ್ದೆ. ಆದರೆ ಕೊನೆ ಹಂತದಲ್ಲಿ ನನ್ನ ಪ್ರಯತ್ನ ಫಲ ನೀಡಲಿಲ್ಲ. ನನ್ನ ಮಾತು ನಡೆಯಲೇ ಇಲ್ಲ. ಹೀಗಾಗಿ ನನಗೂ ನೋವಾಗಿದೆ. ಆದರೆ, ಅದನ್ನು ಬಹಿರಂಗಪಡಿಸುವಂತಿಲ್ಲ’ ಎಂದು ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಿಂದ ಡಾ| ಅಜಯಸಿಂಗ್‌ ಹಾಗೂ ಡಾ| ಉಮೇಶ ಜಾಧವ ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಶಿಫಾರಸು ಮಾಡಿದ್ದೆ. ಆದರೆ ಕೊನೆ ಹಂತದಲ್ಲಿ ನನ್ನ ಪ್ರಯತ್ನ ವಿಫಲವಾಗಿದೆ. ಆದರೂ, ನಾನು ಒತ್ತಾಯ ಮಾಡಿದ ಪರಿಣಾಮ ಡಾ.ಅಜಯಸಿಂಗ್‌ಗೆ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಡಾ| ಉಮೇಶ ಜಾಧವಗೆ ನಿಗಮದ ಅಧ್ಯಕ್ಷರಾಗಿ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದರು.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗದ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸಹಜ. ಸಂಪುಟ ವಿಸ್ತರಣೆಗೆ ಶಾಸಕರ ಆಯ್ಕೆ ನಿರ್ಣಯ ಕೈಗೊಂಡ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಎಐಸಿಸಿಐ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಅವರೇ ಅಸಮಾಧಾನ ಸರಿಪಡಿಸಬೇಕು ಎಂದರು.

ಕಲಬುರಗಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ನಾಯಕರನ್ನು ಕೇಳಿದ್ದೆ. ಆದರೆ, ರಾಜ್ಯ ನಾಯಕರು ತಾವು ಹೈಕಮಾಂಡ್‌ ಕೇಳಿಯೇ ಸಂಪುಟ ವಿಸ್ತರಣೆ ಮಾಡಿದ್ದಾಗಿ ಹೇಳಿದ್ದಾರೆ. ಆದ್ದರಿಂದ ನಾವೆಲ್ಲ ಹೈಕಮಾಂಡ್‌ ನಿರ್ಣಯಕ್ಕೆ ಬದಟಛಿರಾಗಿರಬೇಕು. ಸಚಿವ ಸ್ಥಾನ ಸಿಗದಿದ್ದಾಗ ತಮ್ಮ ಅಸಮಾಧಾನ ಹೊರ ಹಾಕುವುದು ಸಹಜ. ಅದಕ್ಕೆ ನನಗೇನೂ ಬೇಸರವಿಲ್ಲ ಎಂದರು.

ಮೋದಿ ಹೇಳಿಕೆ ಅಸಂಬದ್ಧ
ವಂಶಪಾರಂಪರ್ಯ ಆಡಳಿತ ಮುಂದುವರಿಸಲು ಕಾಂಗ್ರೆಸ್‌ ಪಕ್ಷ, ಪ್ರತಿಪಕ್ಷಗಳನ್ನೆಲ್ಲ ಒಂದುಗೂಡಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಮೈತ್ರಿಕೂಟ ರಚಿಸಲು ಮುಂದಾಗಿದೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ಅಸಂಬದ್ಧವಾದುದು. ಕಾಂಗ್ರೆಸ್‌ ವಂಶಪಾರಂಪರ್ಯ ಆಡಳಿತ ಮುಂದುವರಿಸಬೇಕು ಎಂದಿದ್ದರೆ 10 ವರ್ಷಗಳ ಕಾಲ ಡಾ.ಮನಮೋಹನ ಸಿಂಗ್‌ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತಿರಲಿಲ್ಲ ಎಂದು ಖರ್ಗೆ ಹೇಳಿದರು.

Comments are closed.