ಕರ್ನಾಟಕ

ಕೆಜಿಎಫ್​​ನ ಕುಖ್ಯಾತ ರೌಡಿ ತಂಗಂ ಎಂಬ ವ್ಯಕ್ತಿಯ ಜೀವನಾಧಾರಿತ ಕಥೆ!

Pinterest LinkedIn Tumblr

ಬೆಂಗಳೂರು: ಯಶ್​​ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಿತ್ರ​ ಬಿಡುಗಡೆ ಮಾಡದಂತೆ ನ್ಯಾಯಲಯ ಆದೇಶಿಸಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ. ಈ ಮೂಲಕ ಇಂದು ಬಿಡುಗಡೆಯಾಗ ಬೇಕಾಗಿದ್ದ ಕೆಜಿಎಫ್ ಸಿನಿಮಾಕ್ಕೆ ಒಂದು ವಾರಗಳ ಕಾಲ ಬೆಂಗಳೂರಿನ 10ನೇ ಸೆಷನ್ಸ್ ನ್ಯಾಯಾಲಯ ತಡೆ ನೀಡಿದೆ ಎನ್ನಲಾಗುತ್ತಿದೆ.

ಚಿತ್ರ ಬಿಡುಗಡೆಗೆ ತಡೆಗೋಡೆಯಾಗಿರುವುದು ಒಂದು ಕಾಲದಲ್ಲಿ ಕೋಲಾರ ಚಿನ್ನದ ಗಣಿಯನ್ನು ಆಳಿದ ಕುಖ್ಯಾತ ರೌಡಿ ತಂಗಂ. ತಂಗಂ ಇಂದು ಜೀವಂತ ಇಲ್ಲದಿರಬಹುದು, ಆದರೆ ಕೆಜಿಎಫ್​ ಸಿನೆಮಾ ತಂಡವನ್ನು ತಂಗಂ ಕಾಡುತ್ತಿರುವುದಂತೂ ಸುಳ್ಳಲ್ಲ. ಸಿನೆಮಾದ ಒಳಗೆ ತಂಗಂ ಹೀರೋ, ಆದರೆ ತೆರೆಯ ಹಿಂದೆ ಸಿನೆಮಾಗೆ ಆತನೇ ವಿಲನ್​.

ಕೆಜಿಎಫ್​​ನ ಕುಖ್ಯಾತ ರೌಡಿ ತಂಗಂ ಎಂಬ ವ್ಯಕ್ತಿಯ ಜೀವನಾಧಾರಿತ ಕಥೆಯನ್ನು ಸಿನಿಮಾ ಒಳಗೊಂಡಿದೆ. ರೌಡಿ ತಂಗಂ ಸಿನಿಮಾ ಮಾಡಲು ಬೇಕಿರುವ ಹಕ್ಕನ್ನು ನಾನು ಹೊಂದಿದ್ದೇನೆ. ಇದೇ ಕಥೆಯ ಆಧಾರದ ಮೇಲೆ ಕೆಜಿಎಫ್​​ ಸಿನಿಮಾ ಮಾಡಲಾಗಿದೆ ಎಂದು ನ್ಯಾಯಲಯಕ್ಕೆ ವೆಂಕಟೇಶ್​​ ಎಂಬ ನಿರ್ಮಾಪಕರೊಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿ ವಿಚಾರಣೆ ನಡೆಸಿದ ನ್ಯಾಯಾಲಯ 2019 ಜನವರಿ 7ರ ತನಕ ಸಿನಿಮಾ ಬಿಡುಗಡೆ ಮಾಡದಂತೆ ಆದೇಶಿಸಿದೆ.

ಚಿನ್ನದ ನಾಡಲ್ಲಿ ರಕ್ತದೋಕುಳಿ ಹರಿಸಿದ ರೌಡಿ ತಂಗಂ!

1990ರ ದಶಕದಲ್ಲಿ ಕೋಲಾರದ ಕೆಜಿಎಫ್​​ ನಗರದಲ್ಲಿ ರಕ್ತದೋಕುಳಿ ಹರಿಸಿದ್ದ ಕುಖ್ಯಾತ ರೌಡಿಯೇ ತಂಗಂ. 1997 ಡಿಸೆಂಬರ್​​ 27 ರಂದು ಬೆಳಿಗ್ಗೆ ಸುಮಾರು 8.30ಕ್ಕೆ ತಂಗಂ ಹತ್ಯೆ ನಡೆಯುತ್ತದೆ. ಆಂಧ್ರದ ಕುಪ್ಪಂ ಎಂಬಲ್ಲಿ ನಡೆಯುವ ತಂಗಂ ಎನ್​ಕೌಂಟರ್​ಗೆ ಪೊಲೀಸರು ಭಾರೀ ಸಂಚು ರೂಪಿಸಿದ್ದರು ಎನ್ನುತ್ತದೆ ಇತಿಹಾಸದ. ತಂಗಂ ಮತ್ತು ಸಹಚರರ ಗುಂಪು ಆಂದ್ರ ಪ್ರದೇಶದ ಕುಪ್ಪಂ ಎಂಬಲ್ಲಿದ್ಧಾರೆ ಎಂದು ತಿಳಿದು ಕೂಡಲೇ ಎಚ್ಚೆತ್ತ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಎನ್​​ಕೌಂಟರ್​ನಲ್ಲಿ ತಂಗಂನನ್ನು ಕೊಲ್ಲಲಾಗುತ್ತದೆ.

ಕೆಜಿಎಫ್​​ ನಗರದ ಬಿಶಪ್​​ ಕಾಟನ್​​ ಟೌನ್​​ ಪಕ್ಕದಲ್ಲಿ ಸೊರಕ ಪೇಟೆ ಎಂಬ ಏರಿಯಾ ಇದೆ. ಈ ಏರಿಯಾದಲ್ಲಿ ಒಂದು ಸಣ್ಣ ಸ್ಲಂ ಇದೆ, ಅಂದಿಗೂ ಇತ್ತು. ಸುಮಾರು 11 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದರು. ತಮಿಳುನಾಡಿನಿಂದ ಕೆಜಿಎಫ್​ಗೆ ಹೊಟ್ಟೆಪಾಡಿಗಾಗಿ ಬಂದ ಇವರು, ಮೈನಿಂಗ್​ನಲ್ಲಿ ಕೆಲಸ ಮಾಡುತ್ತಿದ್ದರು. ದಿಢೀರನೆ 1980ರ ದಶಕದಲ್ಲಿ ಮೈನಿಂಗ್​​ ನಿಲ್ಲಿಸಲಾಗುತ್ತದೆ. ನೂರಾರು ಮೈಲಿ ದೂರದಿಂದ ಬಂದು ಹೇಗೋ ಒಂದು ಬದುಕು ಕಟ್ಟಿಕೊಂಡಿದ್ದ ತಂಗಂ ಕುಟುಂಬಕ್ಕೆ ಈ ಏಟು ಬಲವಾಗಿ ಬಿದ್ದಿತ್ತು. ನಿಲ್ಲಲು ನೆಲೆಯಿರಲಿಲ್ಲ, ಬದುಕಲು ಅನಿವಾರ್ಯತೆ ಇತ್ತೇ ಹೊರತು ಕೈಯಲ್ಲಿ ಕೆಲಸವಿರಲಿಲ್ಲ. ಕೋಲಾರ ಚಿನ್ನದ ಗಣಿಯ ಅಂತ್ಯ, ರಕ್ತಸಿಕ್ತ ಅಧ್ಯಾಯಕ್ಕೆ ಮುನ್ನುಡಿ ಬರೆದಿತ್ತು.

ತಮ್ಮ ಜೀವನಕ್ಕಾಗಿ ತಂಗಂ ಗ್ಯಾಂಗ್​​ ಕಟ್ಟಿಕೊಂಡು ದಂಧೆಗೆ ಇಳಿಯುತ್ತಾನೆ ಎನ್ನುತ್ತಾರೆ ಹತ್ತಿರದಿಂದ ಬಲ್ಲವರು. ಅದು ಸತ್ಯವೋ ಅಥವಾ ಕಟ್ಟುಕಥೆಯೋ, ಅಥವಾ ತಂಗಂ ನಿರ್ಮಿತ ಸುಳ್ಳಿನ ಕೋಟೆಯೋ ಅದನ್ನು ಸಾಭೀತುಪಡಿಸಲು ತಂಗಂ ಬದುಕಿಲ್ಲ. ಗಣಿ ಮುಚ್ಚಿದ ನಂತರ ತಂಗಂ ಪ್ರತಿ ಹೆಜ್ಜೆಯೂ ಕೋಲಾರದ ಮನೆಮನೆಯಲ್ಲೂ ಅಚ್ಛಳಿಯದೇ ಉಳಿದಿದೆ. ಈಗಲೂ ತಂಗಂ ಮತ್ತು ತಂಗಂ ಅಮ್ಮ ಪೌಳಿ ಹೆಸರು ಕೇಳಿದರೆ ಜನ ನಡುಗುತ್ತಾರೆ. ಅಂದಹಾಗೇ ಗ್ಯಾಂಗ್​ ಹೆಸರು ಕೂಡ ಪೌಳಿ ಗ್ಯಾಂಗ್​.

ನಂತರದ ದಿನಗಳಲ್ಲಿ ಕೆಜಿಎಫ್​​ ನಗರದಲ್ಲಿ 75ಕ್ಕೂ ಅಧಿಕ ಕೊಲೆ, ದರೋಡೆ ಪ್ರಕರಣಗಳನ್ನು ಮಾಡುವ ಮೂಲಕ ಪೌಳಿ ಗ್ಯಾಂಗ್​​ ಕುಖ್ಯಾತಿ ಪಡೆಯುತ್ತದೆ. ಚಿನ್ನದ ಅಂಗಡಿಗಳು, ಮಾಲೀಕರ ಮನೆಗಳನ್ನು ಹುಡುಕಿ ಈ ಗ್ಯಾಂಗ್​ ಟಾರ್ಗೆಟ್​ ಮಾಡುತ್ತಿತ್ತು. ಯಾರೂ ಇಲ್ಲದಾಗ ಮನೆಯೊಳಗೆ ನುಗ್ಗುತ್ತಿದ್ದ ಗ್ಯಾಂಗ್​, ಮನೆಯಲ್ಲಿರುವ ಎಲ್ಲರನ್ನೂ ಕೊಲೆ ಮಾಡಿ ಆಭರಣ, ಹಣ ದೋಚುತ್ತಿದ್ದರು. ಈ ತಂಡದ ಕೃತ್ಯವನ್ನು ಬೇಧಿಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.

ಈ ಗ್ಯಾಂಗ್‌ನ ಭೇಟೆಯಾಡಲು ಮುಂದಾದ ತನಿಖಾ ತಂಡ ಕುಟುಂಬದ 11 ಜನರ ರಹಸ್ಯ ಭೇದಿಸಲು ಮುಂದಾದರು. ಮೊದಲಿಗೆ ವೆಂಕಟೇಶ, ರಮೇಶ್​​, ಮುನಿಕೃಷ್ಣ ಮತ್ತು ಲಕ್ಷ್ಮಿ(ಹೆಸರು ಬದಲಿಸಲಾಗಿದೆ) ಎಂಬುವವರನ್ನು ಬಂಧಿಸಿದ್ದರು. ಈ ಐದೂ ಮಂದಿಗೆ ಸುಮಾರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯಾಗಿತ್ತು. ಆದರೆ, ಒಂದಷ್ಟು ಜನಕ್ಕೆ ಶಿಕ್ಷೆಯಾದರೂ ಇಲ್ಲಿನ ಜನ ತಮ್ಮ ಗೋಲ್ಡ್​​ ಸ್ಮಗ್ಲಿಂಗ್​​ ಮುಂದುವರೆಸಿದರು.

ಈ ಸ್ಲಂನಲ್ಲಿರುವ ಕಿಡಿಗೇಡಿಗಳ ಪೈಕಿ ಪೌಳಿ ಕುಟುಂಬವೂ ಒಂದು. ಪೌಳಿಗೆ ಏಳು ಜನ ಮಕ್ಕಳು. ಇದರಲ್ಲಿ ಐದು ಜನ ಮೋಸ್ಟ್​ ವಾಟೆಂಡ್​​ ಕ್ರಿಮಿನಲ್​ಗಳು. ಈ ಐವರಲ್ಲಿ ನಾಲ್ವರದ್ದು ಒಂದು ಅಧ್ಯಾಯವಾದರೆ, ತಂಗಂನದ್ದೇ ಒಂದು ರಕ್ತಸಿಕ್ತ ಅಧ್ಯಾಯ. ಇವರು ಹೆಜ್ಜೆ ಇಟ್ಟ ಕಡೆಯಲ್ಲೆಲ್ಲಾ ದರೋಡೆ, ಕೊಲೆ, ಕಳ್ಳತನ ಸಾಮಾನ್ಯ ಸಂಗತಿ ಎನ್ನುವಂತಾಗಿತ್ತು.

ಕೋಲಾರ ಗೋಲ್ಡ್​ ಫೀಲ್ಡ್ಸ್​ನಲ್ಲಿ ಸಿಗುವ ಚಿನ್ನದ ಮಾರಾಟ ಮಾಡಿ ಸಾಕಷ್ಟು ಜನ ಬದುಕುತ್ತಾರೆ. ಸುಮಾರು 15ಕ್ಕೂ ಹೆಚ್ಚೂ ಗೋಲ್ಡ್​​ ಗಿರಣಿ ಅಂಗಡಿಗಳಿವೆ. 90ರ ದಶಕದಲ್ಲಿ ಅತಿಹೆಚ್ಚು ಅಂಗಡಿಗಳಿದ್ದವು. ತಂಗಂ ಮತ್ತೆ ತನ್ನ ಗ್ಯಾಂಗ್​ ಬೆಳಿಗ್ಗೆ ಎದ್ದು ಒಂದು ರೌಂಡ್​ ಯಾವಾಗ ಚಿನ್ನದಂಗಡಿ ದೋಚ ಬಹುದೆಂದು ನಿರ್ಧರಿಸುತ್ತಿದ್ದರು. ಬಳಿಕ ಮಧ್ಯರಾತ್ರಿ ಹೋಗಿ ಚಿನ್ನವನ್ನು ದೋಚಿ ಬರುತ್ತಿದ್ದರು. ಈ ನಡುವೆ ಯಾರೇ ಸಿಕ್ಕರೂ, ಅವರ ಕಥೆ ಅಷ್ಟೇ.

ಹೀಗೆ ಇವರು ಮಾಡಿರುವ ಕೊಲೆಗಳು 75 ಕ್ಕೂ ಹೆಚ್ಚು. ಇಲ್ಲಿ ತಾವು ದೋಚಿದ ಚಿನ್ನವನ್ನು ಸ್ಥಳೀಯ ದುಷ್ಕರ್ಮಿಗಳ ಗುಂಪಿನೊಂದಿಗೆ ಶಿವಾಜಿನಗರ, ಅಲ್ಲಿಂದ ಮುಂಬೈಗೆ ಮಾರಾಟ ಮಾಡುತ್ತಿದ್ದರು. ಹೀಗೆ ತಂಗಂ ಒಬ್ಬನ ಮೇಲೆ ಸುಮಾರು 66 ಕೇಸುಗಳಿವೆ. ಇದನ್ನು ಬೆನ್ನೆತ್ತಿ ಹೊರಟ ಪೊಲೀಸರು, ಈ ಗ್ಯಾಂಗನ್ನು ಹೊಡೆದುರುಳಿಸಲು ಒಂದು ತಂಡವನ್ನು ರಚಿಸಿದರು. ಬಳಿಕ ಕಾರ್ಯಾಚರಣೆಗೆ ಇಳಿದ ಪೊಲೀಸರು, ಮೊದಲಿಗೆ ಪೌಳಿ ಮನೆಯಲ್ಲಿಯೇ ಮೋಸ್ಟ್​ ವಾಂಟೆಡ್​​ ಕ್ರಿಮಿನಲ್ಸ್​​, ನಾಲ್ವರು ಅಣ್ಣ ತಮ್ಮಂದಿರನ್ನು ಹತ್ಯೆಗೈದರು.

ಬಳಿಕ ಪೊಲೀಸರ ಕಣ್ಣುತಪ್ಪಿಸಿ ತಿರುಗಾಡುತ್ತಿದ್ದ ತಂಗಂನನ್ನು ಕೊಲ್ಲಲು ಮುಂದಾದರು. ಪೊಲೀಸರ ತಂಡವೊಂದು ರೌಡಿ ತಂಗಂ ಗ್ಯಾಂಗ್​​ ಮೇಲೆ ದಾಳಿ ನಡೆಸಿದರು. ಆಂಧ್ರದ ಕುಪ್ಪಂ ಎಂಬಲ್ಲಿ ಎನ್​​ಕೌಟರ್​ನಲ್ಲಿ ತಂಗಂ ಹತ್ಯೆ ಮಾಡಲಾಯ್ತು. ಈ ಮುನ್ನ ಪೊಲೀಸ್ ಅಧಿಕಾರಿಗಳು ಮತ್ತು ತಂಗಂ ನಡುವೇ ಮಾತಿನ ಚಕಾಮಕಿ ನಡೆದಿತ್ತು ಎನ್ನಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ತಂಗಂ ಗ್ಯಾಂಗ್​ ಹಾರಿಸಿದ ಗುಂಡಿಗೆ ಪೊಲೀಸ್​ ಸಿಬ್ಬಂದಿಯೊಬ್ಬರು ಹುತಾತ್ಮರಾದರು ಎಂದೂ ಹೇಳಲಾಗುತ್ತದೆ. ಆದರೆ ಪೊಲೀಸರಿಂದ ವಾಪಸ್​ ಹಾರಿದ್ದ ಗುಂಡಿಗೆ ತಂಗಂ ಬಲಿಯಾಗಿದ್ದ.

ಅದೊಂದು ಕಾಲದಲ್ಲಿ ಇಡೀ ವ್ಯವಸ್ಥೆಗೆ ದುಸ್ವಪ್ನವಾಗಿದ್ದ ತಂಗಂ ಈಗ ಕೆಜಿಎಫ್​ ಚಿತ್ರದ ಬಿಡುಗಡೆಯ ಗೊಂದಲಗಳಿಂದ ಮತ್ತೆ ಜೀವ ತಾಳಿದ್ದಾನೆ. ಕೆಜಿಎಫ್​ ಚಿತ್ರ ತಂಡ ಹೇಳುವ ಪ್ರಕಾರ, ಇದು ತಂಗಂ ಕಥೆಯಲ್ಲ. ಆದರೆ ಮೂಲಗಳ ಪ್ರಕಾರ ಇದು ತಂಗಂ ಕಥೆಯೇ. ಒಟ್ಟಿನಲ್ಲಿ ಹಲವು ವರ್ಷಗಳ ನಂತರ ರೌಡಿ ತಂಗಂ ಮತ್ತೆ ಮುನ್ನಲೆಗೆ ಬಂದಿದ್ದಾನೆ. ಅದೂ ರಾಕಿಂಗ್​ ಸ್ಟಾರ್​ ಯಶ್​ ರೂಪದಲ್ಲಿ..!

Comments are closed.