ರಾಷ್ಟ್ರೀಯ

ತನ್ನ ತಾಯಿಗೆ ಬುದ್ಧಿ ಹೇಳಲು ದೂರು ನೀಡಿದ 3 ವರ್ಷದ ಬಾಲಕಿ!

Pinterest LinkedIn Tumblr


ಗೋರಖ್​ಪುರ: ದೊಡ್ಡವರನ್ನು ನೋಡಿ ಮಕ್ಕಳು ಕಲಿಯುತ್ತಾರೆ ಎಂಬ ಮಾತೊಂದಿದೆ. ಆದರೆ, ಉತ್ತರ ಪ್ರದೇಶದ ಪುಟ್ಟ ಪೋರಿ ತನ್ನ ವರ್ತನೆಯ ಮೂಲಕ ಎಲ್ಲ ತಂದೆ-ತಾಯಂದಿರಿಗೆ ಒಳ್ಳೆಯ ಸಂದೇಶವನ್ನು ನೀಡಿದ್ದಾಳೆ. ಅಷ್ಟಕ್ಕೂ ಆಕೆ ಮಾಡಿದ್ದೇನು ಎಂದು ಯೋಚಿಸುತ್ತಿದ್ದೀರಾ? ಹೇಳ್ತೀವಿ ಕೇಳಿ…

ಉತ್ತರಪ್ರದೇಶದ ಗೋರಖ್‍ಪುರ ಜಿಲ್ಲೆಯಲ್ಲಿ ಒಂದು ಪುಟ್ಟ ಗ್ರಾಮ. ಸಂತ ಕಬೀರ್​ನಗರ ಎಂಬ ಆ ಊರಿನ ಮಕ್ಸೂದ್​ ಖಾನ್​ ಹಾಗೂ ಅಸ್ಮಾ ಖಾನ್​ ದಂಪತಿಗೆ ಇಬ್ಬರು ಮಕ್ಕಳು. ಒಬ್ಬ ಇನ್ನೂ ವರ್ಷ ತುಂಬದ ಮಗ. ದೊಡ್ಡಮಗಳು 3 ವರ್ಷದ ಫಾಲಕ್.
ಆ ಚಿಕ್ಕ ಗುಡಿಸಲಿನ ಫಾಲಕ್​ ಎಂಬ ಹುಡುಗಿಯ ಒಂದು ನಡೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಅಮ್ಮ ನನ್ನನ್ನು ಶಾಲೆಗೆ ಕಳುಹಿಸುವುದಿಲ್ಲ. ನೀವು ಎಲ್ಲರಿಗೂ ಬುದ್ಧಿ ಹೇಳುತ್ತೀರಂತಲ್ಲ.. ಬಂದು ನನ್ನ ಅಮ್ಮನಿಗೂ ಬುದ್ಧಿ ಹೇಳಿ. ನನಗೆ ಮನೆಯಲ್ಲೇ ಕೂರಲು ಇಷ್ಟವಿಲ್ಲ ಎಂದು ಮನೆಯ ಬಳಿ ಇರುವ ಪಂಚಪೋಕ್ರಿ ಪೊಲೀಸ್​ ಠಾಣೆಗೆ ಹೋಗಿ ಅಮ್ಮನ ವಿರುದ್ಧವೇ ದೂರು ನೀಡಿ ಬಂದಿದ್ದಾಳೆ ಈ ಪುಟ್ಟ ಹುಡುಗಿ!

3 ವರ್ಷವೆಂದರೆ ಇನ್ನೂ ಆಡುವ ವಯಸ್ಸು. ಯಾವುದು ಸರಿ, ಯಾವುದು ತಪ್ಪು ಎಂದು ಕೂಡ ತಿಳಿಯದ ವಯಸ್ಸು. ಆದರೆ, ಈ ಹುಡುಗಿ ತಮ್ಮ ಪೊಲೀಸ್​ ಠಾಣೆಗೆ ಬಂದು ಧೈರ್ಯವಾಗಿ ಅಮ್ಮನ ವಿರುದ್ಧ ಮುದ್ದುಮುದ್ದಾಗಿ ಆಕ್ಷೇಪ ಮಾಡಿರುವುದನ್ನು ನೋಡಿ ಸ್ವತಃ ಪೊಲೀಸರು ಕೂಡ ಇವಳಿಗೆ ಫ್ಯಾನ್​ ಆಗಿದ್ದಾರೆ.

ಅಮ್ಮನಿಗೆ ಸ್ವಲ್ಪ ಬುದ್ಧಿ ಹೇಳಿ:

ಫಾಲಕ್​ ಎಂಬ ಈ ಬಾಲಕಿಯ ಅಪ್ಪ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವರು ಮನೆಗೆ ಬರುವುದು ರಾತ್ರಿಯ ನಂತರವೇ. ತನ್ನ ಮನೆಯ ಕತೆಯನ್ನು ಪೊಲೀಸರ ಎದುರು ತೊದಲು ನುಡಿಯಲ್ಲಿ ಹೇಳಿರುವ ಫಾಲಕ್, ‘ಅಮ್ಮ ಬೆಳಗ್ಗೆಯಿಂದ ಸಂಜೆಯವರೆಗೂ 7 ತಿಂಗಳ ತಮ್ಮನನ್ನು ಆಡಿಸುತ್ತಾ ಇರುತ್ತಾಳೆ. ನನ್ನನ್ನು ಒಣಹುಲ್ಲಿನ ಮೇಲೆ ಮಲಗಿಸುತ್ತಾಳೆ. ನನಗೆ ಆಟವಾಡಲೂ ಯಾರೂ ಜೊತೆಗಿಲ್ಲ. ನನಗೆ ಶಾಲೆಗೆ ಹೋಗಬೇಕು ಎಂದು ಆಸೆ. ಆದರೆ, ಅಮ್ಮ ಶಾಲೆಗೆ ಕಳಿಸುತ್ತಿಲ್ಲ. ಅಮ್ಮನಿಗೆ ನೀವೇ ಸ್ವಲ್ಪ ಬುದ್ಧಿ ಹೇಳಿ’ ಎಂದು ದೂರು ನೀಡಿದ್ದಾಳೆ.

ಆ ಮಗುವಿನ ಮಾತನ್ನು ಕೇಳಿ ಕರಗಿದ ಅಲ್ಲಿನ ಪೊಲೀಸ್​ ಸಿಬ್ಬಂದಿ ಆಕೆಯನ್ನು ಎತ್ತಿಕೊಂಡು ಆಕೆಯ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ಅಲ್ಲದೆ, ಮಗುವನ್ನು ಶಾಲೆಗೆ ಕಳುಹಿಸುವಂತೆ ಅಸ್ಮಾ ಖಾನ್​ಗೆ ಬುದ್ಧಿವಾದವನ್ನೂ ಹೇಳಿದ್ದಾರೆ.

ಹಳ್ಳಿಯವರ ಬಳಿ ಕೇಳಿಕೊಂಡು ಠಾಣೆಗೆ ಹೋಗಿದ್ದಳು:

ಅಮ್ಮನ ಮೇಲೆ ಕೋಪ ಮಾಡಿಕೊಂಡು ಮನೆಯಿಂದ ಹೊರಗೆ ಹೊರಟಿದ್ದ ಫಾಲಕ್​ ದಾರಿಯುದ್ದಕ್ಕೂ ಸಿಕ್ಕಿದವರ ಬಳಿ ‘ಪೊಲೀಸ್​ ಎಲ್ಲಿ ಸಿಗ್ತಾರೆ?’ ಎಂದು ಕೇಳಿಕೊಂಡು ಹೋಗಿದ್ದಾರೆ. ಟಿವಿಯಲ್ಲೆಲ್ಲ ಪೊಲೀಸರ ಬಗ್ಗೆ ನೋಡಿದ್ದ ಫಾಲಕ್​ ತನ್ನ ತಾಯಿಗೆ ಬುದ್ಧಿ ಹೇಳುವಂತೆ ಕೇಳಲು ಮನೆಯಿಂದ 300 ಮೀ. ದೂರವಿರುವ ಪೊಲೀಸ್​ ಠಾಣೆಯನ್ನು ಹುಡುಕಿಕೊಂಡು ಹೋಗಿದ್ದಾಳೆ ಎಂದು ಟೈಮ್ಸ್​ ಆಫ್​ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಈ ಬಗ್ಗೆ ಮಾತನಾಡಿರುವ ಪಂಚಪೋಕ್ರಿ ಪೊಲೀಸ್​ ಠಾಣೆಯ ಎಸ್​ಐ ಜಿತೇಂದ್ರ ಯಾದವ್​, ಸ್ವಲ್ಪವೂ ಭಯವಿಲ್ಲದೆ ನಮ್ಮ ಠಾಣೆಗೆ ಬಂದ ಪುಟ್ಟ ಬಾಲಕಿಯನ್ನು ನೋಡಿ ಆಶ್ಚರ್ಯವಾಯಿತು. ನನ್ನ ಸರ್ವಿಸ್​ನಲ್ಲಿ ನಾನು ಕಂಡ ಅತ್ಯಂತ ಚಿಕ್ಕ ದೂರುದಾರಳು ಈ ಬಾಲಕಿ. ಆಕೆಗೆ ಪೊಲೀಸರೆಂದರೆ ಭಯವೇ ಇರಲಿಲ್ಲ. ತನ್ನನ್ನು ಶಾಲೆಗೆ ಕಳುಹಿಸುವಂತೆ ಅಮ್ಮನಿಗೆ ಹೇಳಿ ಎಂದು ಕೇಳಿಕೊಂಡಾಗ ನಮಗೆ ಏನು ಹೇಳಬೇಕೋ ತಿಳಿಯಲಿಲ್ಲ. ಆಕೆಯ ಈ ಕಾರ್ಯ ಎಲ್ಲ ಅಪ್ಪ-ಅಮ್ಮನಿಗೂ ಸಂದೇಶವಾಗಲಿ ಎಂದು ಹೇಳಿದ್ದಾರೆ.

ಬುದ್ಧಿವಾದ ಹೇಳಿದ ಪೊಲೀಸರು:

ಫಾಲಕ್​ ಜೊತೆಗೆ ಆಕೆಯ ಮನೆಗೆ ಹೋದ ಪೊಲೀಸರು ಆಕೆಯನ್ನು ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ. ಹಾಗೇ, ಮಗನಂತೆಯೇ ಆಕೆಯನ್ನೂ ಪ್ರೀತಿಯಿಂದ ನೋಡಿಕೊಳ್ಳಿ ಎಂದು ಹೇಳಿದ್ದಾರೆ. 7 ತಿಂಗಳ ಮಗು ಇರುವುದರಿಂದ ಮಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ ಎಂದು ಫಾಲಕ್​ಳ ಅಮ್ಮ ಪೊಲೀಸರಿಗೆ ಭರವಸೆ ನೀಡಿದ್ದಾರೆ.

ಹಾಗೇ, ತನ್ನ ಅಮ್ಮ ತನ್ನನ್ನು ಶಾಲೆಗೆ ಕಳುಹಿಸುತ್ತಾಳೆ ಎಂದು ಗೊತ್ತಾದ ನಂತರ ಬಹಳ ಖುಷಿಯಾಗಿರುವ ಫಾಲಕ್​ ತಾನು ಚೆನ್ನಾಗಿ ಓದಿ ಡಾಕ್ಟರ್​ ಆಗುತ್ತೇನೆ. ಪೊಲೀಸ್​ ಅಂಕಲ್​ ತುಂಬ ಒಳ್ಳೆಯವರು. ನಾನು ಇನ್ನು ದಿನವೂ ಶಾಲೆಗೆ ಹೋಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.

Comments are closed.