ಕರ್ನಾಟಕ

ದತ್ತಜಯಂತಿ: 3 ದಿನ ದತ್ತಪೀಠದ ಸುತ್ತ ಹೈ ಅಲರ್ಟ್ ಘೋಷಣೆ

Pinterest LinkedIn Tumblr


ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿ ಹಿನ್ನೆಲೆ ಮುನ್ನೆಚರಿಕಾ ಕ್ರಮವಾಗಿ 2 ದಿನಗಳ ಕಾಲ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ.

ಹಿಂದು-ಮುಸ್ಲಿಂ ಸಮುದಾಯದ ವಿವಾದಿತ ಪ್ರದೇಶವಾದ ದತ್ತಾತ್ರೇಯ ಪೀಠದಲ್ಲಿ ಬಜರಂಗದಳ ಹಾಗೂ ವಿಹೆಚ್​ಪಿ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿಗೆ ಕಾಫಿ ನಾಡಿನಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಡಿ. 20 ಮಧ್ಯರಾತ್ರಿಯಿಂದ ಡಿ. 22ರವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಡಿ. 21ರಂದು ನಗರದಲ್ಲಿ ಬೃಹತ್ ಶೋಭಯಾತ್ರೆ ಹಾಗೂ 22ರಂದು ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ನಿಮಿತ್ತ ದತ್ತಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆ ಯಾವುದೇ ಆಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಜಿಲ್ಲೆಯಾದ್ಯಂತ ಬಿಗಿಭದ್ರತೆ:

ದತ್ತಜಯಂತಿ ಪ್ರಯುಕ್ತ ಚಿಕ್ಕಮಗಳೂರಿನಲ್ಲಿ 3,500ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಓರ್ವ ಎಸ್ಪಿ. ಮೂವರು ಅಡಿಷನಲ್ ಎಸ್ಪಿ, 10 ಡಿವೈಎಸ್ಪಿ, 16 ಇನ್​ಸ್ಪೆಕ್ಟರ್, 120 ಸಬ್ ಇನ್ಸ್ಪೆಕ್ಟರ್, 250 ಎಎಸ್‍ಐ, 450 ಸಿ.ಸಿ. ಟಿವಿ ಜೊತೆಗೆ 35 ಚೆಕ್ ಪೋಸ್ಟ್ ಹಾಗೂ 3,500ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ 10 ಕೆಎಸ್‍ಆರ್​ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಕಾಫಿನಾಡಿನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಡಿಸೆಂಬರ್ 20 ರಿಂದ 22 ರವರೆಗೆ ಕಾಫಿನಾಡಿನಾದ್ಯಂತ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ.

ಚಿಕ್ಕಮಗಳೂರು ಜಿಲ್ಲಾದ್ಯಂತ 450ಕ್ಕೂ ಅಧಿಕ ಸಿಸಿ ಕ್ಯಾಮರಾ ಹಾಕಲಾಗಿದೆ. ಜಿಲ್ಲಾದ್ಯಂತ ಒಟ್ಟು 150ಕ್ಕೂ ಅಧಿಕ ಜನರಿಂದ ಬಾಂಡ್ ಬರೆಸಿಕೊಂಡಿದ್ದು, ಹೊರಜಿಲ್ಲೆಗಳ ಭಕ್ತರಿಂದ ಬಾಂಡ್ ಬರೆಸಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಖಂಡರೇ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಹಾಸನ, ಮಂಗಳೂರು, ಉಡುಪಿ, ಶಿವಮೊಗ್ಗ ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಿದ್ದು, ನಗರ ಸೇರಿದಂತೆ ಜಿಲ್ಲಾದ್ಯಂತ 35 ಚೆಕ್ ಪೋಸ್ಟ್ ತೆರೆದಿದ್ದಾರೆ.

ಡಿಸೆಂಬರ್ 20, 21, 22ರಂದು ಕಾಫಿನಾಡು ಅಕ್ಷರಶಃ ಬೂದಿಮುಚ್ಚಿದ ಕೆಂಡದಂತಿರಲಿದೆ. ‘ಕರ್ನಾಟಕದ ಅಯೋಧ್ಯೆ’ ಎಂದೇ ಕರೆಯಲ್ಪಡುವ ದತ್ತಪೀಠದಲ್ಲಿ ದತ್ತಜಯಂತಿಯ ಸಂಭ್ರಮ ಮನೆಮಾಡಲಿದೆ. ಕಳೆದ ವರ್ಷ ಗೋರಿಗಳು ಧ್ವಂಸವಾಗಿದ್ದರಿಂದ ಈ ಬಾರಿ ಜಿಲ್ಲಾಡಳಿತ ಜಿಲ್ಲೆ ಹಾಗೂ ದತ್ತಪೀಠದಲ್ಲಿ ಕಟ್ಟೆಚ್ಚರ ಘೋಷಿಸಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ 1 ಸಾವಿರ ಪೊಲೀಸರನ್ನು ಹೆಚ್ಚಾಗಿ ನಿಯೋಜಿಸಲಾಗಿದೆ. ಡಿಸೆಂಬರ್ 20ರಂದು ಸಾವಿರಾರು ಮಹಿಳೆಯರಿಂದ ಅನಸೂಯ ಜಯಂತಿ ಇದ್ದರೆ, 21ರಂದು 10 ಸಾವಿರಕ್ಕೂ ಅಧಿಕ ಭಕ್ತರಿಂದ ನಗರದಲ್ಲಿ ಬೃಹತ್ ಶೋಭಯಾತ್ರೆ ನಡೆಯಲಿದೆ. 22ರಂದು 25ರಿಂದ 30 ಸಾವಿರ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಭಕ್ತರು ಭಕ್ತಿಯಿಂದ ತಮ್ಮ ಕಾರ್ಯಕ್ರಮ ಮುಗಿಸಿಕೊಳ್ಳಬೇಕು. ಸಮಾಜದ ಶಾಂತಿ ಕದಡಿ, ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಖಡಕ್ಕಾಗಿ ಎಚ್ಚರಿಸಿದ್ದಾರೆ.

ಒಟ್ಟಾರೆ, ಗುರುವಾರದಿಂದ ಶನಿವಾರದವರೆಗೆ ಕಾಫಿನಾಡು ಚಿಕ್ಕಮಗಳೂರು ಬೂದಿಮುಚ್ಚಿದ ಕೆಂಡದಂತಿರುವುದರಲ್ಲಿ ಎರಡು ಮಾತಿಲ್ಲ. ಆದರೆ, ಜಿಲ್ಲಾಡಳಿತ ಶ್ರದ್ಧಾ- ಭಕ್ತಿಯಿಂದ ಶಾಂತಿಯುತವಾಗಿ ಪೂಜೆ-ಕೈಂಕರ್ಯಗಳನ್ನು ಮುಗಿಸಿಕೊಳ್ಳುವಂತೆ ಮನವಿ ಮಾಡಿದೆ.

Comments are closed.