ಕರ್ನಾಟಕ

‘ಆಯುಷ್ಮಾನ್‌ ಭಾರತ್‌’ನಲ್ಲಿ ಆರೋಗ್ಯ ಕರ್ನಾಟಕ ವಿಲೀನ: ಡಿಕೆಶಿ

Pinterest LinkedIn Tumblr


ಬೆಂಗಳೂರು: ರಾಜ್ಯ ಸರಕಾರವು ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಡಿ ಪ್ರತಿ ಬಡ ಕುಟುಂಬಗಳ (ಬಿಪಿಎಲ್) ಆಸ್ಪತ್ರೆ ವೆಚ್ಚದ ಮಿತಿಯನ್ನು ವಾರ್ಷಿಕ 5 ಲಕ್ಷ ರೂಪಾಯಿಗಳಿಗೆ ವಿಸ್ತರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಆರೋಗ್ಯ ಕರ್ನಾಟಕ ಯೋಜನೆಯಡಿ ಈ ಮಿತಿ ಎರಡು ಲಕ್ಷ ರೂಪಾಯಿ ಇತ್ತು. ಅದೇ ರೀತಿ ಎಪಿಎಲ್ ಕುಟುಂಬಗಳಿಗೂ ವಾರ್ಷಿಕ 1.50 ಲಕ್ಷ ರೂಪಾಯಿ ನೀಡಲಾಗುವುದು. ಈ ಯೋಜನೆ ಕಳೆದ ಅಕ್ಟೋಬರ್ 30 ರಿಂದ ಜಾರಿಗೆ ಬಂದಿದೆ. ಕೇಂದ್ರ ಸರಕಾರದ ಜತೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಲಾಗಿದೆ ಎಂದು ಹೇಳಿದರು.

ಕೇಂದ್ರದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯದ ಆರೋಗ್ಯ ಕರ್ನಾಟಕ ಯೋಜನೆ ಸಂಯೋಜಿಸಿ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಡಿ ಒಟ್ಟು 1.15 ಕೋಟಿ ಬಿಪಿಎಲ್ ಹಾಗೂ 19 ಲಕ್ಷ ಎಪಿಎಲ್ ಕುಟುಂಬಗಳು ಅರ್ಹತೆ ಪಡೆದಿವೆ. ರಾಜ್ಯದ 385 ಸರಕಾರಿ ಹಾಗೂ 531 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇದಲ್ಲದೆ ಗಡಿಭಾಗದ ರೋಗಿಗಳಿಗೆ ಅನುಕೂಲವಾಗುವಂತೆ ನೆರೆಯ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಗೋವಾದ 36 ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ವಿವರಿಸಿದರು.

ಬಿಪಿಎಲ್ ಕುಟುಂಬಗಳಿಗೆ ಕೇಂದ್ರದ ಪಾಲು ಶೇಕಡಾ 60 ಹಾಗೂ ರಾಜ್ಯದ ಪಾಲು ಶೇಕಡಾ 40 ರಷ್ಟಿದೆ. ಉಳಿದ ಕುಟುಂಬಗಳ ಶೇಕಡಾ 100 ರಷ್ಟು ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುತ್ತದೆ. ಈ ಮೊದಲು ನೆರವು ಸಿಗುತ್ತಿದ್ದ 1516 ವಿಧದ ಚಿಕಿತ್ಸೆಗಳಲ್ಲಿ ಕೆಲವು ಸಣ್ಣಪುಟ್ಟವುಗಳನ್ನು ರದ್ದು ಮಾಡಿ ಹೊಸದಾಗಿ 630 ಚಿಕಿತ್ಸೆಗಳನ್ನು ಸೇರಿಸಲಾಗಿದೆ. ಇದರಲ್ಲಿ 169 ತುರ್ತು ಚಿಕಿತ್ಸೆಗಳೂ ಸೇರಿವೆ. ಈಗ ಒಟ್ಟಾರೆ 1614 ಸ್ವರೂಪದ ಚಿಕಿತ್ಸೆಗಳಿಗೆ ಈ ನೆರವು ಸಿಗುತ್ತಿದೆ. ಕಳೆದ ಅಕ್ಟೋಬರ್ 30 ರಿಂದ ಈಚೆಗೆ 2391 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆರೋಗ್ಯ ಕರ್ನಾಟಕ ಯೋಜನೆಯಡಿ ಈವರೆಗೂ 1.49 ಲಕ್ಷ ಕುಟುಂಬಗಳು ಸೌಲಭ್ಯ ಪಡೆದಿವೆ ಎಂದರು.

ನೇರವಾಗಿ ಖಾಸಗಿ ಆಸ್ಪತ್ರೆಗೂ ಹೋಗಬಹುದು:
ಆರೋಗ್ಯ ಕಾರ್ಡ್ ಇರಲಿ, ಬಿಡಲಿ ಎಲ್ಲರೂ ಈ ಯೋಜನೆ ನೆರವು ಪಡೆಯಬಹುದಾಗಿದೆ. ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಯಾರಿಗೂ ಚಿಕಿತ್ಸೆ ನಿರಾಕರಿಸುವಂತಿಲ್ಲ. ಆದರೂ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆಧಾರ್ ಅಥವಾ ಪಡಿತರ ಚೀಟಿ ತೋರಿಸಿ, 30 ರುಪಾಯಿ ಶುಲ್ಕ ತುಂಬಿ ಬೆಂಗಳೂರು ಒನ್ ಮತ್ತಿತರ ಕಡೆ ಕಾರ್ಡ್ ಪಡೆಯಬಹುದಾಗಿದೆ. ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಅಗತ್ಯವೆನಿಸಿದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು. ಒಂದೊಮ್ಮೆ ಪ್ರಕರಣ ಗಂಭೀರವಾಗಿದ್ದರೆ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೂ ಹೋಗಿ ಚಿಕಿತ್ಸೆ ಪಡೆಯಬಹುದು. ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲಿ ಎಂಬ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯದ ಪೈಕಿ ಯಾವುದು ಹೆಚ್ಚೋ ಆ ಚಿಕಿತ್ಸಾ ದರವನ್ನು ಆಸ್ಪತ್ರೆಗಳಿಗೆ ನಿಗದಿ ಮಾಡಲಾಗಿದೆ.

ಅಕ್ಟೋಬರ್ 30 ರಂದೇ ಕೇಂದ್ರದ ಜತೆ ಗೊತ್ತುವಳಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಘೋಷಣೆ ಮಾಡಿರಲಿಲ್ಲ ಎಂದರು.

ಐಟಿ ಉದ್ಯೋಗಿಗಳೂ ಚಿಕಿತ್ಸೆಗೆ ಅರ್ಹರು:
ಹೊರರಾಜ್ಯದವರಿಗೂ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಯಾರಾದರೂ ಚಿಕಿತ್ಸೆ ನಿರಾಕರಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರ ಆಹವಾಲು ಸ್ವೀಕಾರಕ್ಕೂ ವ್ಯವಸ್ಥೆ ಮಾಡಲಾಗುವುದು. ಆಸ್ಪತ್ರೆಗಳಿಗೂ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ, ಮಾರ್ಗದರ್ಶನ ನೀಡಲು ಇದೇ 20 ರಂದು ಸರಕಾರಿ ಹಾಗೂ 27 ರಂದು ಖಾಸಗಿ ಆಸ್ಪತ್ರೆಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

Comments are closed.