ಕರ್ನಾಟಕ

ಕೃಷಿಗೆ ಇಸ್ರೇಲ್ ಮಾದರಿ ನೀರು ಬಳಕೆಗೆ ರೈತರಿಗೆ ಕರೆ

Pinterest LinkedIn Tumblr


ಬೆಂಗಳೂರು: ಕೃಷಿಯಲ್ಲಿ ಕಡಿಮೆ ನೀರು ಬಳಸಿ ಉತ್ತಮ ಬೆಳವಣಿಗೆ ಕಾಣುವ ನಿಟ್ಟಿನಲ್ಲಿ ಇಸ್ರೇಲ್‌ ಪದ್ಧತಿಯನ್ನು ಅನುಸರಿಸುವುದು ಉತ್ತಮ ಎಂದು ರಾಜ್ಯಪಾಲ ವಜುಭಾಯಿ ವಾಲಾ ರೈತರಿಗೆ ಕರೆ ನೀಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ವಿವಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಕೃಷಿ ಮೇಳ-2018’ ಕ್ಕೆ ಚಾಲನೆ ನೀಡಿ ಗುರುವಾರ ಅವರು ಮಾತನಾಡಿದರು.

”ನೀರು ಮತ್ತು ಸಮಯದ ಸಮರ್ಪಕ ನಿರ್ವಹಣೆಯಿಂದ ಕೃಷಿ ಕ್ಷೇತ್ರದಲ್ಲಿ ಭಾರತ ಇಡೀ ಜಗತ್ತಿನಲ್ಲೇ ಗುರುತಿಸಿಕೊಳ್ಳುವಂತಹ ಸಾಧನೆ ಮಾಡಬಹುದು.

ಭಾರತದಲ್ಲಿ ಮಳೆ ನೀರಿನ ನಿರ್ವಹಣೆಯ ವೈಫಲ್ಯದಿಂದಾಗಿ ಕೃಷಿ ಕ್ಷೇತ್ರದಲ್ಲಿ ಹಿನ್ನೆಡೆಯಾಗುತ್ತಿದೆ. ನಮ್ಮಲ್ಲಿ ನೀರಿನ ಪ್ರಮಾಣ ಅಗತ್ಯಕ್ಕೆ ತಕ್ಕಷ್ಟು ಲಭ್ಯವಾಗುತ್ತಿದ್ದರೂ, ಅದರ ಸದ್ಬಳಕೆ ಆಗುತ್ತಿಲ್ಲ,” ಎಂದು ಹೇಳಿದರು.

”ಜಿಕೆವಿಕೆ ಎಲ್ಲಿಯೂ ಅಭಿವೃದ್ಧಿ ಮಾಡದಂತಹ ಸೂರ್ಯಕಾಂತಿ ತಳಿಯನ್ನು ಸಂಶೋಧಿಸಿದೆ. ಇದೇ ರೀತಿಯಲ್ಲಿ ಹೊಸ ಸಂಶೋಧನೆಗಳು ಹೆಚ್ಚಾದಂತೆ, ಉತ್ಪಾದನಾ ಪ್ರಮಾಣವೂ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಮಾರಾಟವೂ ಆಗಬೇಕಿದೆ,” ಎಂದರು.

ವಿವಿ ಸಂಶೋಧನೆಗಳು ರೈತರಿಗೆ ತಲುಪುತ್ತಿಲ್ಲ

ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಮಾತನಾಡಿ, ”ವಿಶ್ವವಿದ್ಯಾಲಯಗಳು ಕೈಗೊಳ್ಳುವ ಸಂಶೋಧನೆಗಳು ಸರಿಯಾಗಿ ರೈತರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿವಿಗಳ ಸಂಶೋಧನೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ಸಮಿತಿ ರಚನೆಗೆ ಸರಕಾರ ಚಿಂತನೆ ನಡೆಸಿದೆ. ಕೃಷಿಗೆ ಸಂಬಂಧಿಸಿದಂತೆ ಅನೇಕ ಇಲಾಖೆಗಳ ಸಮನ್ವಯ ಸಾಧಿಸುವ ಉದ್ದೇಶದಿಂದ ‘ಕೃಷಿ ಬಜೆಟ್‌ ಕ್ಯಾಬಿನೆಟ್‌’ ಘೋಷಿಸಲಾಗಿದೆ. ಕೃಷಿ ವಿವಿಗಳು ಅಭಿವೃದ್ಧಿ ಪಡಿಸುವ ಸಂಶೋಧನೆಗಳ ಉಪಯೋಗ ರೈತರಿಗೆ ತಲುಪುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ,” ಎಂದು ತಿಳಿಸಿದರು.

ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ

ಸಮಾರಂಭದಲ್ಲಿ ಯಲ್ಲಾಪುರ ತಾಲೂಕಿನ ಪ್ರಸಾದ ರಾಮ ಹೆಗಡೆಗೆ ‘ಡಾ. ಎಂ.ಎಚ್‌. ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ’, ಕೆನರಾಬ್ಯಾಂಕ್‌ ಪ್ರಾಯೋಜಿತ ರಾಜ್ಯಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಯನ್ನು ಹಾಸನ ತಾಲೂಕಿನ ಕೆ. ಹೇಮ ಅನಂತ್‌ಗೆ ಹಾಗೂ ಕೆನರಾ ಬ್ಯಾಂಕ್‌ ಪ್ರಾಯೋಜಿತ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಕೋಲಾರ ತಾಲೂಕಿನ ಎಂ.ಎನ್‌. ರವಿಶಂಕರ್‌ ಅವರಿಗೆ ಪ್ರದಾನ ಮಾಡಲಾಯಿತು.

ಕೃಷಿ ವಿವಿ ಕುಲಪತಿ ಡಾ. ಎಸ್‌. ರಾಜೇಂದ್ರ ಪ್ರಸಾದ್‌, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಂ.ಎಸ್‌. ನಟರಾಜು, ಕುಲಸಚಿವ ಡಾ. ಮಹಾಬಲೇಶ್ವರ್‌ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ನಾಲ್ಕು ತಳಿಗಳ ಬಿಡುಗಡೆ

ಜಿಕೆವಿಕೆ ವತಿಯಿಂದ ಅಭಿವೃದ್ಧಿ ಪಡಿಸಿದ್ದ ರಾಗಿ: ಕೆಎಂಆರ್‌-630(100 ದಿನಗಳ ಅವಧಿಯ ಬೆಳೆ. ಮುಂಗಾರಿಗೆ ಸೂಕ್ತವಾಗಿ ಎಕರೆಗೆ 20 ಕ್ವಿಂಟಾಲ್‌ ಇಳುವರಿ). ಸೂರ್ಯಕಾಂತಿ: ಕೆಬಿಎಚ್‌-78(95 ದಿನಗಳ ಬೆಳೆ, ಎಕರೆಗೆ 1.14 ಕ್ವಿಂಟಾಲ್‌ ಇಳುವರಿ). ಸೋಯಾ ಅವರೆ: ಕೆಬಿಎಸ್‌-23(95 ದಿನಗಳ ಬೆಳೆ, ಎಕರೆಗೆ 25-30 ಕ್ವಿಂಟಾಲ್‌ ಇಳುವರಿ) ಹಾಗೂ ಅಕ್ಕಿ ಅವರೆ: ಕೆಬಿಆರ್‌-1(75 ದಿನಗಳ ಬೆಳೆ, ಎಕರೆಗೆ 12-14 ಕ್ವಿಂಟಾಲ್‌ ಇಳುವರಿ) ತಳಿಗಳನ್ನು ಇದೇ ವೇಳೆ ರಾಜ್ಯಪಾಲರು ಬಿಡುಗಡೆ ಮಾಡಿದರು.

Comments are closed.