ಕರ್ನಾಟಕ

ಮೂಕವಿಸ್ಮಿತ ಮಾಡಿದ ಮೂಗರ ಮದುವೆ

Pinterest LinkedIn Tumblr


ಹೊಸಪೇಟೆ: ಬಾಜಾ ಭಜಂತ್ರಿಯ ಸದ್ದು, ಬಂಧು-ಮಿತ್ರರ ಓಡಾಟದ ಗದ್ದಲದ ನಡುವೆಯೇ ಕೈ, ಬಾಯಿ ಸನ್ನೆಯಲ್ಲೇ ತಮ್ಮ ಮನಸ್ಸಿನ ಇಂಗಿತ ವ್ಯಕ್ತಪಡಿಸುತ್ತ ಕುಳಿತ ವಧು-ವರರು. ತಂದೆ, ತಾಯಿ ಇಲ್ಲದವರ ಬಾಳಿಗೆ ಜಾತಿಯ ಎಲ್ಲೆ ಮೀರಿದ ದಾಂಪತ್ಯದ ಬೆಸುಗೆಯ ಕ್ಷಣ..

ನಗರದ ಚಿತ್ತವಾಡ್ಗೆಪ್ಪ ದೇವಸ್ಥಾನದಲ್ಲಿ ಬುಧವಾರ ನಡೆದ ಕಿವಿಕೇಳದ, ಮಾತು ಬಾರದ ಹೊಸಪೇಟೆಯ ಗೀತಾ ಮತ್ತು ಸಿರಗುಪ್ಪದ ರಾಮಕಮಲ್ ಅವರ ಮದುವೆಯ ಸಂಭ್ರಮವಿದು..
ನಗರದ ಯಾದವ ಸಮುದಾಯದ ಗೀತಾ ಹುಟ್ಟುತ್ತಲೇ ಮೂಕಿಯಾಗಿದ್ದು ತಂದೆ, ತಾಯಿ ಇಲ್ಲದ ಕಾರಣ ಅಕ್ಕನ ಮನೆಯಲ್ಲೇ ಬೆಳೆದಿದ್ದರು. ಗೀತಾರ ವಿವಾಹಕ್ಕಾಗಿ ನಗರದ ವಾಸುದೇವ ಯಾದವ್, ಆನೆಗೊಂದಿಯ ವಿಜಯಲಕ್ಷ್ಮಿಗೊಲ್ಲರ್, ಸಿರಗುಪ್ಪದ ವೆಂಕಟೇಶಪ್ಪ ಕಬ್ಬೇರ್ ಮತ್ತಿತರರು ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿ, ತಾವೇ ಮುಂದೆ ನಿಂತು ಶಾಸ್ತ್ರೋಕ್ತವಾಗಿ ವಿವಾಹ ಮಾಡಿಸಿ ಮಾನವೀಯತೆ ಮೆರೆದರು.

ನಗರದ ಯಾದವ ಸಮುದಾಯದ ಗೀತಾ ದಾವಣಗೆರೆಯಲ್ಲಿನ ಕಿವುಡ ಮತ್ತು ಮೂಗರ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದರೆ, ಸಿರಗುಪ್ಪದ ಭೋವಿ ಸಮುದಾಯದ ರಾಜಕಮಲ್ ಸಹ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದಲ್ಲಿನ ಕಿವುಡ ಮತ್ತು ಮೂಗರ ಶಾಲೆಯಲ್ಲಿ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಇವರಿಬ್ಬರ ಮದುವೆಗೆ ಎರಡೂ ಕಡೆಯವರ ಬಂಧುಗಳ ಮಾತುಕತೆಯ ಫಲವಾಗಿ ಈ ವಿವಾಹ ನಡೆದಿದೆ. ಅಂದಾಜು 500ಕ್ಕೂ ಅಧಿಕ ಜನ ವಿವಾಹದಲ್ಲಿ ಪಾಲ್ಗೊಂಡಿದ್ದರು.

Comments are closed.