ಹೊಸದಿಲ್ಲಿ, ನವೆಂಬರ್. 12: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವ ಸದಾನಂದ ಗೌಡ, ವಿರೋಧ ಪಕ್ಷಗಳ ಮುಖಂಡರಾದ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷ ಬೇಧ ಮರೆತು ಕಂಬನಿ ಮಿಡಿದಿದ್ದಾರೆ.
“ಅನಂತ್ ಕುಮಾರ್ ಅಕಾಲಿಕ ನಿಧನ ದೇಶಕ್ಕೆ ಅದರಲ್ಲೂ ಮುಖ್ಯವಾಗಿ ಕರ್ನಾಟಕಕ್ಕೆ ದೊಡ್ಡ ನಷ್ಟ” ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
“ಆತ್ಮೀಯ ಸ್ನೇಹಿತ, ಸಹೋದ್ಯೋಗಿ ಅನಂತ್ ಕುಮಾರ್ ನಿಧನದಿಂದ ತೀವ್ರ ಬೇಸರವಾಗಿದೆ. ಎಳೆ ವಯಸ್ಸಿನಲ್ಲೇ ಸಾರ್ವಜನಿಕ ಬದುಕು ತೆರೆದುಕೊಂಡ ಅದ್ಭುತ ನಾಯಕ. ಶ್ರದ್ಧೆ ಹಾಗೂ ಪ್ರೀತಿಯಿಂದ ಸಮಾಜ ಸೇವೆಗೆ ತೊಡಗಿಸಿಕೊಂಡಿದ್ದರು. ಒಳ್ಳೆಯ ಕೆಲಸಗಳಿಗಾಗಿ ಸದಾ ಸ್ಮರಣೀಯರು” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
“ಅನಂತ್ ಜಿ ಪತ್ನಿ ಜತೆ ಮಾತನಾಡಿ ಸಂತಾಪ ಸೂಚಿಸಿದ್ದೇನೆ. ಈ ದುಃಖದ ಸನ್ನಿವೇಶದಲ್ಲಿ ಅವರ ಕುಟುಂಬ, ಸ್ನೇಹಿತರು ಹಾಗೂ ಬೆಂಬಲಿಗರ ಜತೆ ನಾನಿದ್ದೇನೆ. ಅವರು ಬಿಜೆಪಿಯ ದೊಡ್ಡ ಆಸ್ತಿಯಾಗಿದ್ದರು” ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅನಂತ್‌ಕುಮಾರ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬೆಳಗ್ಗೆ 10:30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.
“ಅನಂತ್ ಕುಮಾರ್ ಇನ್ನು ನಮ್ಮೊಂದಿಗೆ ಇಲ್ಲ ಎನ್ನುವ ಸುದ್ದಿ ಕೇಳಿ ಆಘಾತವಾಯಿತು. ಬೆಂಗಳೂರು ಅವರ ಮನಸ್ಸು ಮತ್ತು ಹೃದಯವಾಗಿತ್ತು. ಅವರ ಸಾವಿನಿಂದಾಗಿರುವ ಆಘಾತವನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ” ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟಿಸಿದ್ದಾರೆ.
“ಮುಂಜಾನೆ ಅನಂತ್ ಕುಮಾರ್ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಸಾಂತ್ವನ ಹೇಳುತ್ತಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶೋಕ ಸಂದೇಶ ನೀಡಿದ್ದಾರೆ.
“ಅನಂತ್ ಅಕಾಲಿಕ ನಿಧನದಿಂದ ಆಘಾತವಾಗಿದೆ. ಅವರು ಉತ್ಸಾಹದ ಚಿಲುಮೆಯಾಗಿ ಬದ್ಧತೆಯಿಂದ ದೇಶ ಹಾಗೂ ಸಂಘಟನೆಗೆ ಶ್ರಮಿಸಿದ್ದರು. ಪಕ್ಷವನ್ನು ಕರ್ನಾಟಕದಲ್ಲಿ ಬಲಪಡಿಸಲು ಅವಿತರವಾಗಿ ಶ್ರಮಿಸಿದ್ದರು” ಎಂದು ಅಮಿತ್ ಶಾ ಟ್ಟಿಟ್ಟರ್ ಮೂಲಕ ಸಂಪಾತ ಸೂಚಿಸಿದ್ದಾರೆ.
ಆರೆಸ್ಸೆಸ್ ಜಂಟಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, “ಕರ್ನಾಟಕದ ಶಿಲ್ಪಿಗಳಲ್ಲೊಬ್ಬರು” ಎಂದು ಬಣ್ಣಿಸಿದ್ದಾರೆ. “ಅನಂತ್ ಕುಮಾರ್ ಕುಟುಂಬದ ಜತೆಗಿನ ನಮ್ಮ ಸ್ನೇಹ ರಾಜಕೀಯವನ್ನು ಮೀರಿದ್ದಾಗಿತ್ತು” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.
“ಅನಂತ್ ಕುಮಾರ್ ಕರ್ನಾಟಕ ಮತ್ತು ದೆಹಲಿ ನಡುವಿನ ಕೊಂಡಿಯಾಗಿದ್ದರು” ಎಂದು ವಿದೇಶ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.
ವರದಿ ಕೃಪೆ : ವಾಭಾ

Comments are closed.