ಕುಂದಾಪುರ: ಭಕ್ತಿಯಿಲ್ಲದ ಬ್ರಾಹ್ಮಣ ಎಷ್ಟೇ ಪಂಡಿತನಾಗಿದ್ದರೂ ಭಕ್ತನಾದ ದಲಿತನೇ ಶ್ರೇಷ್ಠ. ಪರಮಾತ್ಮ ಕುಲ ಜಾತಿ ನೋಡದೆ ಯಾರು ಭಕ್ತ ಅವನನ್ನೇ ಅನುಗ್ರಹಿಸುತ್ತಾನೆ. ಮೊಗವೀರ ಸಮಾಜವು ಭಗವಂತನಿಗೆ ಪ್ರಿಯವಾದ ಸಮಾಜ. ತಪ್ಪಸ್ಸು ಬ್ರಾಹ್ಮಣ ವರ್ಗದವರಿಗೆ ಮಾತ್ರವಲ್ಲ, ಎಲ್ಲರಿಗೂ ಅಧಿಕಾರ ಇದೆ ಎಂದು ರಾಮಾಯಣದಲ್ಲಿ ರಾಮ ತೋರಿಸಿಕೊಟ್ಟಿದ್ದ. ಭಗವಂತನ ನಾಮಸ್ಮರಣೆಯಿಂದ ಸಕಲವೂ ಸಾಧ್ಯ. ಹಿಂದೂ ಸಮಾಜಕ್ಕೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದು. ಈ ಸಂಸ್ಥೆ ನಿರಂತರವಾಗಿ ಬೆಳೆಯಲಿ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥರು ಹೇಳಿದರು.
ಶ್ರೀರಾಮ ಭಜನಾ ಮಂದಿರ ಬೀಜಾಡಿ-ಗೋಪಾಡಿ, ಅಮೃತ ಮಹೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಜನೆ ಸಂಸ್ಕ್ರತಿ ಕಡಿಮೆಯಾಗಿದೆ. ಮೊದಲೆಲ್ಲಾ ಮನೆಯಲ್ಲಿ ಊಟಕ್ಕೆ ಮೊದಲು ಭಜನೆ ಮಾಡುವ ಪದ್ದತಿಯಿದ್ದಿತ್ತು. ಆದರೇ ಇದೀಗಾ ಭಜನೆಯ ತಾಳ ಕಾಣದಾಗಿದೆ. ಭಜನೆ ಮೂಲಕ ಸಮಾಜದಲ್ಲಿ ಶಿಸ್ತು ಮೂಡಿಸಲು ಸಾಧ್ಯ. ಅಹಂಕಾರ ರಹಿತ ವ್ಯಕ್ತಿಯಾಗಿ ಬಾಳಿದ್ದ ಶ್ರೀರಾಮ ಭಜನೆ ಮೂಲಕ ಸಂಯಮ ರೂಢಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಈ ಭಜನಾ ತಂಡ ಜಿಲ್ಲೆಗೆ ಮಾರ್ಗದರ್ಶಕರಾಗಿ ಬೆಳೆಯಲಿ ಎಂದು ಹಾರೈಸಿದರು.
ಇದೇ ಸಂದರ್ಭ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳು, ಶ್ರೀ ರಾಮ ಭಜನಾ ಮಂದಿರ ಧಾರ್ಮಿಕ ಕಾರ್‍ಯಕ್ರಮ ನೇತೃತ್ವ ವಹಿಸಿದ ಕಂಬಿಕಲ್ಲು ಕಕ್ಕುಂಜೆ ವೇ.ಬ್ರಂ,ಕೆ.ಶ್ರೀಪತಿ ಭಟ್, ಶ್ರೀ ರಾಮ ಮಂದಿರ ಅರ್ಚಕ ರಾಮಚಂದ್ರ ಹಂದೆ, ಭಜನೆ ರಾಮಣ್ಣ, ಭಜನಾ ಮಂದಿರಕ್ಕೆ ಸ್ಥಳ ದಾನ ಮಾಡಿದ ಕುಷ್ಟು ಪೂಜಾರಿ ಪುತ್ರ ಸೀತಾರಾಮ ಪೂಜಾರಿ, ಕೃಷ್ಣ ಕುಂದರ್, ಅಮೃತ ಮಹೋತ್ಸವ ಕಟ್ಟಡ ವಿನ್ಯಾಸಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಸಮಿತಿ ಪರವಾಗಿ ಸನ್ಮಾನಿಸಲಾಯಿತು.
ಜಿ. ಶಂಕರ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕೋಟ ಮಣೂರು ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಉಡುಪಿ ಹೋಟೆಲ್ ಕಿದಿಯೂರು ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಅನುವಂಶೀಯ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಚಿನ್ಮಯಿ ಆಸ್ಪತ್ರೆ ಮುಖ್ಯಸ್ಥ ಕಟ್ಟೆ ಗೋಪಾಲಕೃಷ್ಣ ರಾವ್, ಮುಂಬೈ ಮೊಗವೀರ ಕೋಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಕಾಂಚನ್, ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಧರ್ಮದರ್ಶಿ ದೇವರಾಯ ಶೇರಿಗಾರ್, ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀಧರ ಕಾಮತ್, ಗೋಪಾಡಿ ಗ್ರಾಪಂ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್, ಸಮಾಜ ಸೇವಕ ಶೇಷಗಿರಿ ಗೂಟ, ಅಮೃತೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶಂಕರ್ ಕಾಂಚನ್, ಬಿ.ಹಿರಿಯಣ್ಣ ಚಾತ್ರಬೆಟ್ಟು, ಅಧ್ಯಕ್ಷ ಗಣೇಶ್ ಪುತ್ರನ್, ಕಾರ್‍ಯದರ್ಶಿಗಳಾದ ರಾಜು ಬಿ.ಅಜ್ಜಿಮನೆ, ಸುನೀಲ್ ಜಿ.ನಾಯ್ಕ್, ಶ್ರೀಧರ ಚಾತ್ರಬೆಟ್ಟು ಇದ್ದರು.
ದಿನೇಶ್ ಚಾತ್ರಬೆಟ್ಟು ಪ್ರಾರ್ಥಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ನರಸಿಂಹ ಬಿ.ಎನ್.ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ನಿರೂಪಿಸಿದರು.
ಶ್ರೀ ರಾಮ ತಾರಕ ಮಂತ್ರ ಮಹಾ ಪೂರ್ಣಾಹುತಿ, ವಿದ್ವಾನ ಗಣಪತಿ ಭಟ್ ಯಲ್ಲಾಪುರ, ವಿದ್ವಾನ ಕೆ.ಶ್ರೀಪತಿ ಉಪಾಧ್ಯಾಯ ಕುಂಭಾಶಿ ತಂಡದಿಂದ ಗಾನ ಅಖ್ಯಾನ, ಮಹಾಅನ್ನ ಸಂತರ್ಪಣೆ, ಗಣೇಶ್ ಬೀಜಾಡಿ, ರಾಜೀವ ಬೀಜಾಡಿ, ಸಂಗೀತಾ ಬಾಲಚಂದ್ರ ಹಾಗೂ ಭಜನಾ ಮಂದಿರ ಸದಸ್ಯರಿಂದ ಗಾನ ಸುಧೆ ನಡೆಯಿತು.
(ವರದಿ- ಯೋಗೀಶ್ ಕುಂಭಾಸಿ)
Comments are closed.