
ಹಾಸನ: ಜಿಲ್ಲೆಯ ಖ್ಯಾತ ಸಾಹಿತಿ ಹಾಗೂ ವಿಚಾರವಾದಿ ಜ.ಹೋ. ನಾರಾಯಣಸ್ವಾಮಿ ಅವರು ಇಹಲೋಕ ತ್ಯಜಿಸಿದ್ದಾರೆ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಸಾಹಿತಿಗಳು ಇಂದು ಶುಕ್ರವಾರ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ಪತ್ನಿ ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಹಾಸನ ತಾಲೂಕಿನ ಅವರ ಸ್ವಗ್ರಾಮವಾದ ಜನಿವಾರದಲ್ಲಿ ನಾಳೆ ಶನಿವಾರ ಮಧ್ಯಾಹ್ನ 3ಗಂಟೆಗೆ ನಡೆಯುವ ಸಾಧ್ಯತೆ ಇದೆ.
ಜ.ಹೋ. ನಾರಾಯಣಸ್ವಾಮಿಗಳು, 20 ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯಲ್ಲಿ ಆಯೋಜಿಸಿದ್ದ ನಾಟಕೋತ್ಸವ ಹಾಗೂ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಆಗ ಅವರಿಗೆ ಅನಾರೋಗ್ಯವುಂಟಾಗಿ ಹಾಸನದ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆರೋಗ್ಯ ಸುಧಾರಣೆ ಕಾಣದೇ ಹೋದ್ದರಿಂದ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಅವರಿಗೆ ಚಿಕಿತ್ಸೆ ಫಲಿಸಲಿಲ್ಲ. ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಅವರು ಸಾವನ್ನಪ್ಪಿದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅನೇಕ ಕವನ, ಕಾದಂಬರಿ, ನಾಟಕ, ಪ್ರಬಂಧಗಳನ್ನು ಬರೆದಿರುವ ಜ.ಹೋ. ನಾರಾಯಣಸ್ವಾಮಿ ಅವರು ವಿಚಾರವಾದಿಯಾಗಿ ಹೆಚ್ಚು ಖ್ಯಾತರಾಗಿದ್ದಾರೆ. “ವೇದಪುರಾಣ ಆಚೆಗೆ” ಎಂಬ ಅವರ ವೈಚಾರಿಕ ಲೇಖನಗಳ ಸಂಕಲನವು ಸಾಕಷ್ಟು ಜನಪ್ರಿಯತೆ ಹೊಂದಿದೆ. ಇತ್ತೀಚೆಗೆ ಹಾಸನಾಂಬೆ ದೇಗುಲದ ದರ್ಶನಕ್ಕೆ ಮುನ್ನ ದೇವರ ಪವಾಡ ಬಯಲು ಮಾಡುವ ಕುರಿತು ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿದ ವಿಚಾರವಾದಿಗಳ ಸಾಲಿನಲ್ಲಿ ನಾರಾಯಣಸ್ವಾಮಿ ಅವರೂ ಇದ್ದರು. ಜನರಲ್ಲಿ ವೈಚಾರಿಕತೆಯ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮೊದಲಿಂದಲೂ ಮಾಡುತ್ತಾ ಬರುತ್ತಿದ್ದರು.
Comments are closed.