
ನವದೆಹಲಿ: ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಯಿಂದ 3.6 ಲಕ್ಷ ಕೋಟಿ ರೂ. ಗಳನ್ನು ಕೇಳಿಲ್ಲ, ಇದು ಸುಳ್ಳು ಆರೋಪ ಎಂದು ಕೇಂದ್ರ ಶುಕ್ರವಾರ ಸ್ಪಷ್ಟನೆ ನೀಡಿದೆ. ಆರ್ಥಿಕ ಬಂಡವಾಳ ಚೌಕಟ್ಟನ್ನು ರೂಪಿಸುವ ಬಗ್ಗೆ ಆರ್ಬಿಐ ಜತೆ ಕೇಂದ್ರ ಚರ್ಚೆ ನಡೆಸುತ್ತಿದೆಯೇ ವಿನಃ ಹಣ ಕೇಳಿಲ್ಲ ಎಂದು ಕೇಂದ್ರ ಹೇಳಿದೆ.
“ತಪ್ಪು ಮಾಹಿತಿಯನ್ನು ಮಾಧ್ಯಮದಲ್ಲಿ ಹರಿಬಿಡಲಾಗಿದೆ. ಸರ್ಕಾರದ ಅರ್ಥ ವ್ಯವಸ್ಥೆ ಸುಭದ್ರವಾಗಿದೆ. ರೂ. 3.6 ಲಕ್ಷ ಕೋಟಿ ಅಥವಾ ರೂ. 1 ಲಕ್ಷ ಕೋಟಿಯನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವಂತೆ ಆರ್ಬಿಐಗೆ ಕೇಳಿಲ್ಲ. ಇದು ಊಹಾಪೋಹ,” ಎಂದು ಕೇಂದ್ರದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಟ್ವೀಟ್ ಮಾಡಿದ್ದಾರೆ.
ಸುಭಾಷ್ ಚಂದ್ರ ಗರ್ಗ್ ನೀಡಿರುವ ಸ್ಪಷ್ಟೀಕರಣದ ಪ್ರಕಾರ ಆರ್ಥಿಕ ಬಂಡವಾಳ ಚೌಕಟ್ಟನ್ನು ನಿರ್ಧರಿಸುವ ಮಾತುಕತೆ ಮಾತ್ರ ಕೇಂದ್ರ ಮತ್ತ ಆರ್ಬಿಐ ನಡುವೆ ನಡೆಯುತ್ತಿದೆ.
ಸರ್ಕಾರ ಆರ್ಥಿಕ ಸ್ಥಿತಿಯ ಬಗ್ಗೆ ಆತ್ಮವಿಶ್ವಾಸ ಪ್ರದರ್ಶಿಸಿರುವ ಗರ್ಗ್, ಹಣಕಾಸಿನ ಕೊರತೆಯನ್ನು ಆರ್ಥಿಕ ವರ್ಷಾಂತ್ಯದ ಹೊತ್ತಿಗೆ 3.3 % ತಗ್ಗಿಸುವ ಗುರಿ ಸರ್ಕಾರ ಹೊಂದಿದೆ ಎಂದಿದ್ದಾರೆ.
“ಸರ್ಕಾರದ ಹಣಕಾಸಿನ ಕೊರತೆಯ ಮಟ್ಟ 2013-14ರಲ್ಲಿ 5.1% ಇತ್ತು ನಂತರ ಈ ಮಟ್ಟವನ್ನು ತಗ್ಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. 2018-219ರ ಸಾಲಿನಲ್ಲಿ ಹಣಕಾಸಿನ ಕೊರತೆಯ ಪ್ರಮಾಣ 3.3% ಆಗಲಿದೆ. ಆಯವ್ಯಯದ ಮಾರುಕಟ್ಟೆ ಸಾಲ ಒಟ್ಟಾರೆ 70,000 ಕೋಟಿ ರೂ. ಗಳಷ್ಟು ಆಗಿವೆ,” ಎಂದು ಗರ್ಗ್ ಟ್ವೀಟ್ ಮಾಡಿದ್ದಾರೆ.
ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ, ಗುರುವಾರ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರ ಆರ್ಬಿಯನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಈ ಮೂಲಕ ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ, ಎಂದು ಆರೋಪಿಸಿದ್ದರು.
“ಆರ್ಬಿಐಗೆ ಆರ್ಥಿಕ ಬಂಡವಾಳ ಚೌಕಟ್ಟನ್ನು ವಿಧಿಸುವ ಸಲುವಾಗಿ ಆರ್ಬಿಐ ಜತೆ ಮಾತನಾಡುತ್ತಿದ್ದೇವೆ ಎಂಬ ಮಾತಿನ ತಾತ್ಪರ್ಯವೇನು?,” ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. “ಹಣಕಾಸಿನ ಕೊರತೆಯಿಂದ ಸರ್ಕಾರ ಚಿಂತಾಕ್ರಾಂತಗೊಂಡಿದೆ. ಲೋಕಸಭೆ ಚುನಾವಣಾ ವರ್ಷದಲ್ಲಿ (2019) ಹಣಕಾಸು ವೆಚ್ಚವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಸರ್ಕಾರದ ಎಲ್ಲಾ ಬಾಗಿಲುಗಳೂ ಮುಚ್ಚಿಹೋಗಿರುವುದರಿಂದ ಆರ್ಬಿಐ ಖಜಾನೆಯ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ, ಅದಕ್ಕಾಗಿಯೇ 1 ಲಕ್ಷ ಕೋಟಿ ರೂ. ಹಣವನ್ನು ವರ್ಗಾಯಿಸುವಂತೆ ಆರ್ಬಿಐಗೆ ಕೇಳಿದೆ,” ಎಂದು ಆರೋಪಿಸಿದ್ದರು.
ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಸುಮ್ಮನಾದರೆ ಆರ್ಬಿಐ ಕಾಯಿದೆ 1934ರ ಸೆಕ್ಷನ್ 7ರ ಪ್ರಕಾರ ಕೇಂದ್ರ ಸರ್ಕಾರ ಅಪೆಕ್ಸ್ ಬ್ಯಾಂಕ್ಗೆ 1 ಲಕ್ಷ ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರದ ಖಾತೆಗೆ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಲು ಮುಂದಾಗಿತ್ತು, ಎಂದು ಚಿದಂಬರಂ ಹೇಳಿದ್ದರು.
“ನವೆಂಬರ್ 19ರಂದು ಆರ್ಬಿಐ ಬೋರ್ಡ್ ಸದಸ್ಯರ ಸಭೆ ನಡೆಯಲಿದೆ. ಆರ್ಬಿಐ ಬೋರ್ಡ್ನಲ್ಲಿ ಕೇಂದ್ರ ತಮ್ಮ ಆಯ್ಕೆಯ ಸದಸ್ಯರನ್ನೇ ತುಂಬಿಸಿದೆ. ಆರ್ಬಿಐ ಖಜಾನೆಯಿಂದ 1 ಲಕ್ಷ ಕೋಟಿ ರೂ. ಸರ್ಕಾರಕ್ಕೆ ವರ್ಗಾವಣೆ ಮಾಡುವ ಕುರಿತು ಸಭೆಯಲ್ಲಿ ಕೇಂದ್ರ ಪ್ರಸ್ತಾವನೆಯನ್ನು ಸಲ್ಲಿಸಲಿದೆ,” ಎಂದು ಚಿದಂಬರಂ ಆರೋಪಿಸಿದ್ದರು.
“ಆರ್ಬಿಐ ಸರ್ಕಾರದ ಬೇಡಿಕೆಯನ್ನು ಒಪ್ಪಿಕೊಂಡರೆ ಅಥವಾ ಆರ್ಬಿಐ ಗವರ್ನರ್ ರಾಜೀನಾಮೆ ನೀಡಿದರೆ, ಅದು ದೇಶದ ಆರ್ಥಿಕ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ,” ಎಂದು ಚಿದಂಬರಂ ಎಚ್ಚರಿಕೆ ನೀಡಿದ್ದರು.
Comments are closed.