ಕರ್ನಾಟಕ

ಕೇವಲ 4 ತಿಂಗಳಿಗೊಸ್ಕರ ಲೋಕಸಭೆ ಉಪಚುನಾವಣೆ ಅಗತ್ಯವಿತ್ತೇ?

Pinterest LinkedIn Tumblr


ಬೆಂಗಳೂರು: ನವೆಂಬರ್​ 3ರಂದು ಮೂರು ಲೋಕಸಭಾ ಕ್ಷೇತ್ರಗಳಿಗೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಆದರೆ, ಮೂರು ಲೋಕಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಅಗತ್ಯವಾದರೂ ಏನಿತ್ತು ಎಂಬುದು ರಾಜಕೀಯ ಮುಖಂಡರ ಪ್ರಶ್ನೆಯಾಗಿದೆ.

ಬಳ್ಳಾರಿ, ಮಂಡ್ಯ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಆದರೆ, ಮುಂದಿನ ವರ್ಷ ಏಪ್ರಿಲ್ ಅಥವಾ ಮೇನಲ್ಲಿ ಲೋಕಸಭಾ ಚುನಾವಣೆಯೇ ನಡೆಯಲಿದೆ. ಈಗ ಚುನಾವಣೆ ನಡೆದರೂ ಮತ್ತೆ ಐದಾರು ತಿಂಗಳಲ್ಲಿ ಚುನಾವಣೆಯನ್ನು ಈ ಕ್ಷೇತ್ರಗಳು ಎದುರಿಸಬೇಕು. ಕೇವಲ ಐದಾರು ತಿಂಗಳಿಗಾಗಿ ಉಪಚುನಾವಣೆಯನ್ನು ನಡೆಸುವ ಅವಶ್ಯಕತೆ ಏನಿತ್ತು? ಇದರಿಂದ ಹಣ ಪೋಲು ಅಷ್ಟೇ ಎಂದು ಎಲ್ಲ ಪಕ್ಷಗಳ ಮುಖಂಡರು ಹೇಳುತ್ತಿದ್ದಾರೆ.

ಶನಿವಾರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿಕೆ ನೀಡಿದರು.

ಅದರ ಮರುದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಕೂಡ ಉಪಚುನಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಈ ಉಪಚುನಾವಣೆಗೆ ಮೂರು ಪಕ್ಷಗಳ ನಾಯಕರ ಸಮ್ಮತವಿಲ್ಲ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಆದಾಗ್ಯೂ ಚುನಾವಣಾ ಆಯೋಗ ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಬಿಜೆಪಿ ಹಿರಿಯ ಮುಖಂಡ ಎಸ್.ಸುರೇಶ್​ಕುಮಾರ್​ ಅವರು, ನವೆಂಬರ್ 6ರಂದು ಮೂವರು ಹೊಸ ಸಂಸದರು ಆಯ್ಕೆ ಆಗಲಿದ್ದಾರೆ. ಅವರ ಅಧಿಕಾರಾವಧಿ 4 ತಿಂಗಳು. ನಾಲ್ಕು ತಿಂಗಳಿಗಾಗಿ ಉಪಚುನಾವಣೆಯ ಅವಶ್ಯಕತೆ ಇದೆಯಾ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಹಾಗೆ ನೋಡಿದರೆ, ರಾಜಕೀಯ ಮುಖಂಡರ ಪ್ರಶ್ನೆ ಸಮಯೋಚಿತವಾಗಿಯೇ ಇದೆ. ಏಕೆಂದರೆ ಕೇವಲ ನಾಲ್ಕು ತಿಂಗಳಿಗಾಗಿ ಉಪಚುನಾವಣೆ ನಡೆಸಿದರೂ ಗೆಲುವು ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ವಿಚಾರ. ಈ ಚುನಾವಣೆಯಲ್ಲೂ ಕೂಡ ಗೆಲುವಿಗಾಗಿ ಅಭ್ಯರ್ಥಿ ಕೋಟಿಗಟ್ಟಲೇ ಹಣವನ್ನು ವ್ಯಯ ಮಾಡಿಯೇ ಮಾಡುತ್ತಾರೆ. ಮತ್ತೆ ನಾಲ್ಕು ತಿಂಗಳ ನಂತರ ಚುನಾವಣೆ ನಡೆಯಲಿದೆ. ಆಗಲೂ ಹಣ ಖರ್ಚು ಮಾಡುತ್ತಾರೆ. ಒಟ್ಟಿನಲ್ಲಿ ಇದರಿಂದ ಪರೋಕ್ಷವಾಗಿ ಜನರ ತೆರಿಗೆ ಹಣವೇ ಪೋಲಾಗುವುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Comments are closed.