ಕರ್ನಾಟಕ

ಕುಮಾರಸ್ವಾಮಿ ಆರೋಗ್ಯ ಚೆನ್ನಾಗಿರಲಿ, ಅವರ ಆಸ್ತಿ ಹೆಚ್ಚಾಗಲಿ; ಶ್ರೀರಾಮುಲು

Pinterest LinkedIn Tumblr


ಬಳ್ಳಾರಿ: ಸಿಎಂ ಕುಮಾರಸ್ವಾಮಿ ಆರೋಗ್ಯ ಚೆನ್ನಾಗಿರಲಿ, ಅವರ ಕುಟುಂಬದ ಆಸ್ತಿ, ಸಂಪತ್ತು ಹೆಚ್ಚಾಗಲಿ. ನೂರು ವರುಷ ಕಾಲ ಚೆನ್ನಾಗಿ ಬಾಳಲಿ. ಹೀಗಂತ ಯಾರೋ ಸ್ವಾಮೀಜಿ ಅಥವಾ ಪಕ್ಷದ ಮುಖಂಡ ಹಾರೈಸಿಲ್ಲ. ಬದಲಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ಶ್ರೀರಾಮುಲು ಬಳ್ಳಾರಿಯಲ್ಲಿ ಸಿಎಂ ಕುಮಾರಸ್ವಾಮಿ ಹಾರೈಸಿದ ಪರಿಯಿದು.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವಾಗ್ದಾಳಿ ನಡೆಸುತ್ತಿದ್ದ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ಸಿಎಂ ಕುಮಾರಸ್ವಾಮಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿ, ಕೊನೆಗೆ ಹೀಗೆ ಹೇಳಿಕೆ ನೀಡುವ ಮೂಲಕ ವ್ಯಂಗ್ಯ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಬಗ್ಗೆ ಇನ್ನೇನು ಹೇಳಲಿಕ್ಕಾಗುತ್ತೆ, ಅವರ ಸರ್ಕಾರವಿರುವರೆಗೂ ಚೆನ್ನಾಗಿರಲಿ ಬಿಡಿ ಎಂದು ಹೇಳಿದರು.

ಇದಕ್ಕೂ ಮುಂಚಿತವಾಗಿ ಮಾತನಾಡಿದ ಶ್ರೀರಾಮುಲು, ಸಿಎಂ ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಇಲ್ಲಿಯವರೆಗೆ ನೀಡಿದ ಆಶ್ವಾಸನೆ, ಭರವಸೆ ಯಾವುದು ಈಡೇರಿದೆ? ಕೊಟ್ಟ ಯಾವ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಸವಾಲು ಹಾಕಿದರು. ಕಾಲಕ್ಕೆ ತಕ್ಕಂತೆ ನಡೆದುಕೊಳ್ಳುವುದು ಕುಮಾರಸ್ವಾಮಿ ಸ್ವಭಾವ ಎಂದು ಕಾಲೆಳೆದ ಅವರು, ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಸಾಲ ಕುರಿತು ರೈತರಿಗೆ ನೋಟೀಸ್ ಕೈ ಸೇರುತ್ತಿದೆ. ಈ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.

ನಾವು ಆಪರೇಷನ್ ಕಮಲಕ್ಕೆ ಮುಂದಾಗುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್​ನವರು ನಮ್ಮ ಪಕ್ಷದ ಶಾಸಕರನ್ನೇ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆವರೆಗೆ ಸಮ್ಮಿಶ್ರ ಸರ್ಕಾರ ಇರಲಿದ್ದು, ಆನಂತರ ಅವರವರೇ ಕಚ್ಚಾಡಿ ಸರ್ಕಾರ ಬೀಳಲಿದೆ. ನಾವು ಅಪ್ಪಿತಪ್ಪಿ ಆಪರೇಷನ್ ಕಮಲ ಮಾಡಲು ಹೋಗುವುದಿಲ್ಲ ಎಂದರು.

ರಾಜ್ಯದಲ್ಲಿ ಲೋಕಸಭಾ ಉಪ ಚುನಾವಣೆ ಘೋಷಣೆಯಾಗಿದೆ. ಅಲ್ಪಾವಧಿಗಾಗಿ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಇದೆ. ಬಳ್ಳಾರಿ ಸೇರಿದಂತೆ ಮೂರು ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸವಿದೆ. ನಾನು ವಿಧಾನಸಭಾ ಚುನಾವಣೆ ಸ್ಪರ್ಧಿಸಿದ್ದರಿಂದ ಬಳ್ಳಾರಿ ಲೋಕಸಭಾ ಸ್ಥಾನ ತೆರವಾಗಿದೆ. ನಾನು ಹಲವು ಬಾರಿ ರಾಜೀನಾಮೆ ನೀಡಿ ಲೋಕಸಭೆ ಹಾಗೂ ವಿಧಾನಸಭಾ ಉಪ ಚುನಾವಣೆಗೆ ಕಾರಣವಾಗಿರುವುದಕ್ಕೆ ರಾಜಕೀಯ ಸನ್ನಿವೇಶ ಕಾರಣ. ಹೈಕಮಾಂಡ್ ಸೂಚಿಸಿದಂತೆ ಅನಿವಾರ್ಯವಾಗಿ ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು.

ಇನ್ನು, ಬಳ್ಳಾರಿಯ ಲೋಕಸಭಾ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಹಾಗೂ ಕೇಂದ್ರ ಸಮಿತಿಗೆ ಕಳುಹಿಸುತ್ತಿದ್ದೇನೆ. ಟಿಕೆಟ್ ಆಕಾಂಕ್ಷಿಗಳು ಜಿಲ್ಲೆಯಲ್ಲಿ ಹಾಗೂ ಹೊರಗಡೆ ಇದ್ದಾರೆ. ಬಳ್ಳಾರಿಗೆ ಏಳು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ. ರಾಜ್ಯ ರಾಜಕಾರಣದಲ್ಲಿಯೇ ನಾನು ಮುಂದುವರೆಯಲಿದ್ದೇನೆ ಎಂದರು.

Comments are closed.