ರಾಷ್ಟ್ರೀಯ

ಈ ಹಳ್ಳಿಯಲ್ಲಿ ಬಿಜೆಪಿ ನಾಯಕರಿಗಿಲ್ಲ ಪ್ರವೇಶವಿಲ್ಲ ಎಂಬ ಬೋರ್ಡ್​!

Pinterest LinkedIn Tumblr


ಲಕ್ನೋ: ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಬಿಜೆಪಿ ನಾಯಕರಿಗೆ ರೈತರು ತಮ್ಮ ಊರಿಗೆ ಬರದಂತೆ ನಿರ್ಬಂಧ ಹೇರಿದ್ದಾರೆ. ದೆಹಲಿಯಲ್ಲಿ ರೈತರ ಮೇಲೆ ನಡೆದ ಲಾಠಿಚಾರ್ಜ್​​ನಿಂದ ಆಕ್ರೋಶಗೊಂಡ ರಸೂಲ್​ಪುರ್​ ಮಾಫಿ ಎಂಬ ಹಳ್ಳಿಯ ಜನರು ಬಿಜೆಪಿ ನಾಯಕರು ಪ್ರವೇಶಿಸದಂತೆ ಎಚ್ಚರಿಸುವ ಬೋರ್ಡ್​ ಕೂಡಾ ಹಾಕಿದ್ದಾರೆ. ಇದರಿಂದ ಬಿಜೆಪಿಗರಲ್ಲಿ ಆತಂಕ ಮೂಡಿದೆ. ಕೆಲ ದಿನಗಳ ಹಿಂದೆ ಹರಿದ್ವಾರದಿಂದ ದೆಹಯ ಕಿಸಾನ್​ ಘಾಟ್​ಗೆ ಹೊರಟಿದ್ದ ಕಿಸಾನ್​ ಕ್ರಾಂತಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರೈತರನ್ನು ಗಾಜಿಯಾಬಾದ್​ನಲ್ಲಿ ಪೊಲೀಸರು ತಡೆದಿದ್ದರು. ಇಲ್ಲಿ ರೈತರ ಮೇಲೆ ಲಾಠಿಚಾರ್ಜ್​​ ನಡಸುವುದರೊಂದಿಗೆ ಅಶ್ರುವಾಯು ಕೂಡಾ ಸಿಡಿಸಲಾಗಿತ್ತು.

ಅಮ್ರೋಹಾ ಜಿಲ್ಲೆಯ ಧನೌರಾ ತಹಸೀಲ್​ನಲ್ಲಿ ಬರುವ ರಸೂಲ್​ಪುರ್ ಮಾಫಿ ಹಳ್ಳಿಯ ಹೊರಗೆ ಬೋರ್ಡ್​ ಒಂದನ್ನು ಹಾಕಿದ್ದು, ಇದರಲ್ಲಿ “ರೈತರ ಒಗ್ಗಟ್ಟಿಗೆ ಜಯವಾಗಲಿ. ಬಿಜೆಪಿಗರು ಹಳ್ಳಿಗೆ ಪ್ರವೇಶಿಸುವುದನ್ನು ನಿರ್ಭಂಧಿಸಲಾಗಿದೆ. ಪ್ರವೇಶಿಸುವವರು ನಿಮ್ಮ ಪ್ರಾಣಕ್ಕೆ ನೀವೇ ಹೊಣೆಯಾಗಿರುತ್ತೀರಿ. ಪ್ರೀತಿಯ ರೈತರಿಂದ, ರಸೂಲ್​ಪುರ್ ಮಾಫಿ, ಅಮ್ರೋಹ್” ಇದರ ಬೆನ್ನಲ್ಲೇ ಹತ್ತಿರದ ಕೆಲವು ಹಳ್ಳಿಗಳೂ ಒಂದಾಗಿ ಇಂತಹುದೇ ಬೋರ್ಡ್​ ಹಾಕಲು ನಿರ್ಧರಿಸಿವೆ.

ರೈತರ ಮೇಲೆ ನಡೆದ ದಾಳಿಯಿಂದ ಬೇಸತ್ತ ಸ್ಥಳೀಯ ರೈತ ಧರ್ಮಪಾಲ ಎಂಬವರು ಮಾತನಾಡುತ್ತಾ ತಾನೂ ಕಿಸಾನ್​ ಕ್ರಾಂತಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ತನ್ನನ್ನು ಸೇರಿದಂತೆ ಸಾವಿರಾರು ರೈತರನ್ನು ದೆಹಲಿಗೆ ತೆರಳಲು ಬಿಟ್ಟಿರಲಿಲ್ಲ. ಯಾವುದೇ ತಪ್ಪು ಮಾಡದ ಹಾಗೂ ಅಸಹಾಯಕ ರೈತರ ಮೇಲೆ ಲಾಠಿ ಚಾರ್ಜ್​ ಹಾಗೂ ಅಶ್ರುವಾಯು ಪ್ರಯೋಗ ನಡೆಸಿದ್ದರು. ತನಗೂ ಗಾಯಗಳಾಗಿತ್ತು. ರೈತರ ಬಗ್ಗೆ ಕಾಳಜಿ ಎಂದು ಕೇವಲ ತೋರಿಕೆಗಷ್ಟೇ ಹೇಳಿಕೊಳ್ಳುವ ಬಿಜೆಪಿ ಸರ್ಕಾರ ತನಗಿಷ್ಟವಿಲ್ಲ ಎಂದಿದ್ದಾರೆ.

ಮತ್ತೊಬ್ಬ ರೈತ ಮಾತನಾಡುತ್ತಾ ಬೋರ್ಡ್​ ಹಾಕಿರುವ ಹಿಂದಿನ ಉದ್ದೇಶ ಒಂದೇ ಅದು ಬಿಜೆಪಿಗರನ್ನು ವಿರೋಧಿಸುವುದು. ಇಡೀ ಹಳ್ಳಿ ಅವರನ್ನು ವಿರೋಧಿಸುತ್ತದೆ. ಒಂದು ವೇಳೆ ಬಿಜೆಪಿಯ ಒಬ್ಬ ನಾಯಕನೂ ನಮ್ಮೂರಿಗೆ ಪ್ರವೇಶಿಸಿದರೆ ದೆಹಲಿಗೆ ಪ್ರವೇಶಿಸಿದಾಗ ನಮಗಾದ ಸ್ಥಿತಿಯೇ ಅವರಿಗೂ ಆಗುತ್ತದೆ. ಹೀಗಾದರೆ ನಮ್ಮನ್ನು ದೂಷಿಸಬೇಡಿ. ಈಗಾಗಲೇ ಬೋರ್ಡ್​ ಹಾಲಿ ಎಚ್ಚರಿಕೆ ನೀಡಿದ್ದೇವೆ ಎಂದಿದ್ಧಾರೆ.

ಗ್ರಾಮೀಣ ಭಾಗದ ರೈತರು ಹೀಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸ್ಥಳೀಯ ಬಿಜೆಪಿ ನಾಯಕರಿಗೆ ನುಂಗಲಾಗದ ತುತ್ತಾಗಿದೆ. ಆದರೆ ಈ ಕುರಿತಾಗಿ ಬಜೆಪಿ ನಾಯಕರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments are closed.