ಕರ್ನಾಟಕ

ನಕಲಿ ವೈದ್ಯನೆಂದು ಥಳಿಸಿದ ಸಾರ್ವಜನಿಕರು

Pinterest LinkedIn Tumblr


ಬೆಂಗಳೂರು: ಚಾಮರಾಜಪೇಟೆಯ ರಾಯನ್‌ ವೃತ್ತದ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಅಲರ್ಜಿಗೆ ಚಿಕಿತ್ಸೆ ಕೊಡುವುದಾಗಿ ಚಿಕಿತ್ಸಾ ಕ್ಯಾಂಪ್‌ ನಡೆಸಿದ ತಮಿಳುನಾಡು ಮೂಲದ ವೈದ್ಯನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಬುಧವಾರ ನಡೆದಿದೆ.

ಅಲರ್ಜಿ ಚಿಕಿತ್ಸೆಗಾಗಿ ವಿಶೇಷ ಚಿಕಿತ್ಸೆ ಕೊಡಿಸುವುದಾಗಿ ವೈದ್ಯ ಅಂಜನ್‌ ಎಂಬುವವರು ಜಾಹೀರಾತು ನೀಡಿದ್ದರು. ಈ ಹಿನ್ನೆಲೆಯಲ್ಲಿ ನೂರಾರು ಜನರು 15 ದಿನಗಳ ಹಿಂದೆ ಕ್ಯಾಂಪ್‌ ನಡೆಯಲಿದ್ದ ಆಸ್ಪತ್ರೆಗೆ ತೆರಳಿ 2,600 ರೂ. ಶುಲ್ಕ ಕಟ್ಟಿ ಪರೀಕ್ಷೆಗಾಗಿ ರಕ್ತ ನೀಡಿದ್ದರು. ಪರೀಕ್ಷೆಯ ವರದಿ ಬಂದ ಬಳಿಕ ಔಷಧಿ ನೀಡುವುದಾಗಿ ವೈದ್ಯರಿಬ್ಬರು ಹೇಳಿ ಕಳುಹಿಸಿದ್ದರು.

ಬುಧವಾರ ವೈದ್ಯರು ಬರಲಿರುವ ಕಾರಣ ‘ನಿಮ್ಮ ಚಿಕಿತ್ಸೆಗೆ ಸಂಬಂಧಿಸಿದಂತೆ ಔಷಧಿ ಪಡೆದುಕೊಳ್ಳಿ’ ಎಂದು ಆಸ್ಪತ್ರೆಯಿಂದ ರೋಗಿಗಳಿಗೆ ಕರೆ ಹೋಗಿತ್ತು. ಅದರಂತೆ ಬೆಳಗ್ಗೆಯಿಂದಲೇ ನೂರಾರು ಜನರು ಔಷಧಿ ಪಡೆದುಕೊಳ್ಳಲು ಹೋಗಿದ್ದಾರೆ. ಆದರೆ, ವಿಭಿನ್ನ ರೀತಿಯ ಅಲರ್ಜಿ ಸಮಸ್ಯೆಗಳಿದ್ದರೂ ಎಲ್ಲರಿಗೂ ಒಂದೇ ರೀತಿಯ ಔಷಧಿಗಳನ್ನು ವೈದ್ಯರು ನೀಡುತ್ತಿದ್ದರು. ಅಲ್ಲದೆ, ಹೆಚ್ಚುವರಿಯಾಗಿ 4,040 ರೂ. ಕಟ್ಟಿ ವಿಳಾಸ ನೀಡಿದರೆ ತಮ್ಮ ಮನೆಗಳಿಗೆ ಔಷಧಿ ತಲುಪಿಸುವುದಾಗಿ ಹೇಳುತ್ತಿದ್ದರು.

ಎಲ್ಲರಿಗೂ ಒಂದೇ ರೀತಿಯ ಔಷಧಿ ನೀಡುತ್ತಿದ್ದ ಬಗ್ಗೆ ಅನುಮಾನಗೊಂಡ ರೋಗಿಗಳು, ‘ನೀವು ನಿಜವಾಗಿಯೂ ವೈದ್ಯರೇ ಎಂಬುದನ್ನು ಮೊದಲು ತಿಳಿಸಿ. ಅದಕ್ಕಾಗಿ ನಿಮ್ಮ ವೈದ್ಯಕೀಯ ಪದವಿಯ ಪ್ರಮಾಣ ಪತ್ರ ತೋರಿಸಿ,’ ಎಂದು ಮುಗಿ ಬಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕೆಲವರು ವೈದ್ಯರ ಮೇಲೆ ಕೈ ಮಾಡಿದ್ದಾರೆ.

‘ಹಣ ಪಡೆದು ವಂಚಿಸಿರುವ ವೈದ್ಯರ ಅಸಲಿಯತ್ತಿನ ಬಗ್ಗೆ ಅನುಮಾನ ಇದೆ ,’ ಎಂದು ಹಣ ಪಾವತಿ ಮಾಡಿದ ಕೆಲವರು ಠಾಣೆಗೆ ಬಂದು ದೂರು ನೀಡಿದ್ದಾರೆ. ವಂಚನೆ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಹಣ ಪಡೆದು ಚಿಕಿತ್ಸೆ ಕೊಡುವುದಾಗಿ ಹೇಳಿರುವ ವ್ಯಕ್ತಿಯು ತಾನು ವೈದ್ಯ ಎಂದು ವಾದಿಸುತ್ತಿದ್ದಾನೆ. ಹೀಗಾಗಿ, ವೈದ್ಯಕೀಯ ಪ್ರಮಾಣಪತ್ರ ತರುವಂತೆ ಸೂಚಿಸಿದ್ದೇವೆ. ಅಲ್ಲದೆ, ಈ ಸಂಬಂಧ ಆತನ ವೈದ್ಯಕೀಯ ಪದವಿಯ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ವೈದ್ಯಕೀಯ ಮಂಡಳಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.