ಕರ್ನಾಟಕ

ಎಸ್​ಐಟಿನಿಂದ ಗೌರಿ ಲಂಕೇಶ್​ ಹತ್ಯೆಯ ಪ್ರಮುಖ ಸಾಕ್ಷಿ ಪತ್ತೆ 

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್​ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಸುಳಿವು ವಿಶೇಷ ತನಿಖಾ ತಂಡ ಪತ್ತೆ ಹಚ್ಚಿಗೆ. ಪ್ರಕರಣದಲ್ಲಿ ಈ ವರೆಗೂ ಹಲವರನ್ನು ಬಂಧಿಸಿರುವ ಎಸ್​ಐಟಿಗೆ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಸಾಕ್ಷಿಯಾಗಿ ನಿಲ್ಲುವಂತ ಪುರಾವೆ ಸಿಕ್ಕಿರಲಿಲ್ಲ. ಆದರೆ ಇದೀಗ ಪ್ರಕರಣದ ಬಹುಮುಖ್ಯವಾದ ಸಾಕ್ಷಿ ಲಭ್ಯವಾಗಿದ್ದು, ವಿಚಾರಣೆ ವೇಳೆ ಮಹತ್ವವವನ್ನು ಪಡೆದುಕೊಳ್ಳಲಿದೆ. ಗೌರಿ ಲಂಕೇಶ್​ ಹತ್ಯೆಗೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತನಿಖಾ ತಂಡ ಸಫಲವಾಗಿದೆ.

ಗೌರಿ ಲಂಕೇಶ್​ ಹತ್ಯೆಗಾಗಿ ಆರೋಪಿಗಳು ಎರಡು ಬೈಕ್​ಗಳನ್ನು ಬಳಸಿದ್ದರು. ಆ ಎರಡೂ ಬೈಕ್​ಗಳ ಪತ್ತೆಗಾಗಿ ಹಲವು ದಿನಗಳಿಂದ ಎಸ್​ಐಟಿ ಅಧಿಕಾರಿಗಳು ಹುಡುಕಾಡ ಮುಂದುವರೆಸಿದ್ದರು. ಇದೀಗ ಬಂಧಿತ ಆರೋಪಿ ಕುಣಿಗಲ್​ ಸುರೇಶ್​ನ ಕುಣಿಗಲ್​ನ ಮನೆಯಿಂದ ಎರಡು ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದ ನಂತರ ಸುರೇಶ್​ ಹತ್ಯೆಗೆ ಬಳಸಿದ್ದ ಎರಡು ಬೈಕ್​ಗಳನ್ನು ಬಚ್ಚಿಡುವ ಹೊಣೆ ಹೊತ್ತಿದ್ದ ಎನ್ನಲಾಗಿದೆ. ಈ ಕಾರಣದಿಂದಲೇ ಹತ್ಯೆಯ ನಂತರ ಬೈಕ್​ಗಳನ್ನು ಪಡೆದು ಕುಣಿಗಲ್​ನ ಮನೆಯಲ್ಲಿ ಬಚ್ಚಿಟ್ಟಿದ್ದ. ವಿಚಾರಣೆ ವೇಳೆ ಈ ಬಗ್ಗೆ ಸುರೇಶ್​ ಮಾಹಿತಿ ನೀಡಿದ ಬೆನ್ನಲ್ಲೇ ಬಚ್ಚಿಟ್ಟಿದ್ದ ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಐಟಿ ಉನ್ನತ ಮೂಲಗಳು ನ್ಯೂಸ್​ 18ಗೆ ತಿಳಿಸಿವೆ.

ಆರೋಪಿ ಅಮೋಲ್ ಕಾಳೆ ನೀಡಿದ ಸೂಚನೆ ಮೇರೆಗೆ ಹತ್ಯೆಯ ನಂತರ ಬೈಕನ್ನು ಸುರೇಶ್​ಗೆ ಹಂತಕರು ನೀಡಿದ್ದರು ಎಂಬ ಮಾಹಿತಿ ಎಸ್​ಐಟಿ ಮೂಲಗಳು ನೀಡಿವೆ. ಹಂತಕರು ಬಳಸಿರುವ ಪಿಸ್ತೂಲ್ ಪತ್ತೆ ಹಚ್ಚಲು ಎಸ್​ಐಟಿ ಪ್ರಯತ್ನಿಸುತ್ತಿದೆಯಾದರೂ ಈ ಬಗ್ಗೆ ಇದುವರೆಗೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಕುಣಿಗಲ್​ ಸುರೇಶ್​ ಹೆಸರಿನಲ್ಲಿ ಕೇವಲ ಒಂದು ಟಿವಿಎಸ್ ಎಕ್ಸ್ ಎಲ್ ಗಾಡಿಯಿದೆ ಎನ್ನಲಾಗಿದೆ. ಸುನೀತಾ ಬಾಡರ್ಕಾರ್ ಎಂಬುವವರ ಹೆಸರಿನಲ್ಲಿ ಹೀರೋ ಹೊಂಡಾ ಸ್ಪ್ಲೆಂಡರ್ ದಾಖಲಾಗಿದೆ. ಹಾಸನ ಆರ್​ಟಿಒನಲ್ಲಿ ಈ ಸ್ಪ್ಲೆಂಡರ್​ ರಿಜಿಸ್ಟರ್ ಆಗಿದೆ ಎನ್ನುತ್ತವೆ ಮೂಲಗಳು. ಈ ಎರಡೂ ದ್ವಿಚಕ್ರ ವಾಹನಗಳನ್ನು ಎಸ್​ಐಟಿ ವಶಕ್ಕೆ ಪಡೆದಿದೆ. ಆದರೆ ಸುರೇಶ್​ ಹೆಸರಲ್ಲಿರುವ ಟಿವಿಎಸ್​ ಎಕ್ಸ್​ಎಲ್​ ಹತ್ಯೆಗೆ ಬಳಕೆಯಾಗಿಲ್ಲ, ಆದರೆ ಇನ್ನೊಂದು ಬೈಕ್​ ಬಳಕೆಯಾಗಿರುವ ಬಗ್ಗೆ ಎಸ್​ಐಟಿಗೆ ಸಂಶಯವಿದ್ದು ಅದರ ಪತ್ತೆಗೂ ಕ್ರಮ ಕೈಗೊಳ್ಳಲಾಗಿದೆ.

ವಿಶೇಷ ತನಿಖಾ ತಂಡ ಕುಣಿಗಲ್​ ಸುರೇಶ್​ ಮನೆಯಿಂದ ವಶಕ್ಕೆ ಪಡೆದ ದ್ವಿಚಕ್ರ ವಾಹನಗಳು

ಆರೋಪಿ ಕುಣಿಗಲ್​ ಸುರೇಶ್​ನನ್ನು ಆಗಸ್ಟ್​ 8ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದು ಎಸ್​ಐಟಿ ವಿಚಾರಣೆ ನಡೆಸುತ್ತಿದೆ. ಆದರೆ ತನಿಖೆಯ ಪ್ರಾಥಮಿಕ ಹಂತದಲ್ಲಿ ಮತ್ತು ಮಧ್ಯಂತರ ಹಂತದಲ್ಲಿ ಎಸ್​ಐಟಿ ಪತ್ರಿಕಾಗೋಷ್ಠಿ ಕರೆದಿತ್ತು. ಆ ಸಂದರ್ಭದಲ್ಲಿ ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಎಸ್​ಐಟಿ ಮುಖ್ಯಸ್ಥ ಬಿಕೆ ಸಿಂಗ್​ ಮತ್ತು ಮುಖ್ಯ ತನಿಖಾಧಿಕಾರಿ ಅನುಚೇತ್​ ಬಿಡುಗಡೆ ಗೊಳಿಸಿದ್ದರು. ಆಗೆಲ್ಲಾ ಹತ್ಯೆಗೆ ಕಪ್ಪು ಬಣ್ಣದ ಪಲ್ಸರ್​ ಬೈಕ್​ ಬಳಕೆಯಾಗಿರುವುದಾಗಿ ಮಾಹಿತಿಯನ್ನು ಎಸ್​ಐಟಿ ನೀಡಿತ್ತು.

ನಂತರ ಇಡೀ ರಾಜ್ಯದ ತುಂಬೆಲ್ಲಾ ಇರುವ ಕಪ್ಪು ಬಣ್ಣದ ಪಲ್ಸರ್​ ಮತ್ತು ಕಪ್ಪು ಮತ್ತು ಕೆಂಪು ಬಣ್ಣದ ಪಲ್ಸರ್​ಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆರ್​ಟಿಒ ಇಲಾಖೆಯಲ್ಲಿ ದಾಖಲಾದ ಎಲ್ಲಾ ಪಲ್ಸರ್​ಗಳ ಮಾಲೀಕರಿಂದ ಹೇಳಿಕೆಯನ್ನೂ ಪಡೆಯಲಾಗಿತ್ತು. ಆದರೀಗ ಇದ್ದಕ್ಕಿದ್ದಂತೆ ಪಲ್ಸರ್​ ಬೈಕ್​ ಬದಲು ಸ್ಪ್ಲೆಂಡರ್​ ಬೈಕ್​ನ್ನು ಎಸ್​ಐಟಿ ವಶಕ್ಕೆ ಪಡೆದಿದೆ. ಜತೆಗೆ ಮಾಧ್ಯಮಗಳಿಗೆ ಹಂತಕರು ಬಳಸಿದ ಬೈಕನ್ನು ವಶಕ್ಕೆ ಪಡೆದಿದ್ದೇವೆ ಎಂಬ ‘ಆಫ್​ ದಿ ರೆಕಾರ್ಡ್​’ ಮಾಹಿತಿ ನೀಡಿದ್ದಾರೆ. ಇದರ ಸತ್ಯಾಸತ್ಯತೆಯ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದಲ್ಲಿ ಅನುಮಾನ ಮೂಡದೇ ಇರದು.

ಮುಂದಿನ ತಿಂಗಳ ಸೆಪ್ಟೆಂಬರ್​ 5ರಂದು ಗೌರಿ ಲಂಕೇಶ್​ ಹತ್ಯೆಯಾಗಿ ಒಂದು ವರ್ಷ ಕಳೆಯಲಿದ್ದು ಅಷ್ಟರೊಳಗೆ ತನಿಖೆ ಸಂಪೂರ್ಣಗೊಳಿಸಿ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯನ್ನು ಎಸ್​ಐಟಿ ಮೂಲಗಳು ತಿಳಿಸುತ್ತಿವೆ. ಆದರೆ ಪ್ರಕರಣದ ವಿಚಾರಣೆಯಲ್ಲಿ ಹಲವಷ್ಟು ಮಿಸ್ಸಿಂಗ್​ ಲಿಂಕ್​ಗಳಿದ್ದು, ಅವನ್ನೆಲ್ಲಾ ಪತ್ತೆ ಹಚ್ಚಲು ಸಮಯಾವಕಾಶ ಬೇಕಾಗಬಹುದು ಎಂಬ ಮಾತುಗಳೂ ಎಸ್​ಐಟಿಯ ಕೆಲ ಅಧಿಕಾರಿಗಳಿಂದ ಕೇಳಿ ಬರುತ್ತಿವೆ.

Comments are closed.