ಕರ್ನಾಟಕ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಮಿಶ್ರ ಪ್ರತಿಕ್ರಿಯೆ

Pinterest LinkedIn Tumblr


ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂಬ ವಾದದ ಬೆನ್ನಲ್ಲೇ ಹುಟ್ಟಿಕೊಂಡ ಪ್ರತ್ಯೇಕ ರಾಜ್ಯದ ಬೇಡಿಕೆ ದಿನದಿಂದ ದಿನಕ್ಕೆ ವಾದ-ವಿವಾದದ ಸ್ವರೂಪ ತಳೆಯುತ್ತಿದೆ.ಒಂದೆಡೆ ಮಂಗಳ ವಾರ ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಕೆಲ ಸ್ವಾಮೀಜಿಗಳ ನೇತೃತ್ವದ ಸಮಿತಿ ಸಿದ್ಧವಾಗಿದೆ.

ಈ ಬೇಡಿಕೆಗೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಾಯಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಖಂಡ ಕರ್ನಾಟಕ ಏಕೀಕರಣ ಹೋರಾಟ ಗೊತ್ತಿಲ್ಲದವರು ಪ್ರತ್ಯೇಕ ರಾಜ್ಯವನ್ನು ಕೇಳುತ್ತಿದ್ದಾರೆ. ಇದೊಂದು ಫ‌ೂಲಿಷ್‌ ಆರ್ಗ್ಯೂಮೆಂಟ್‌ ಎಂದು ಕಿಡಿ ಕಾರಿದ್ದಾರೆ.

ದಕ್ಷಿಣ ಕನ್ನಡ-ಉತ್ತರ ಕರ್ನಾಟಕ ಎಂಬುದೇನೂ ಇಲ್ಲ. ಇರುವುದು ಅಖಂಡ ಕರ್ನಾಟಕ. ಆದರೆ ಅಖಂಡ ಕರ್ನಾಟಕ ನಿರ್ಮಾಣ, ಏಕೀಕರಣ ಹಾಗೂ ಭಾಷಾವಾರು ಪ್ರಾಂತ್ಯ ರಚನೆಯ ಹೋರಾಟದ ಬಗ್ಗೆ ಗೊತ್ತಿಲ್ಲದವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿಸಲು ಕೇಳುತ್ತಿದ್ದಾರೆ. ಸ್ವಾರ್ಥ ರಾಜಕಾರಣಕ್ಕಾಗಿ ಇಷ್ಟೆಲ್ಲಾ ನಡೆಯುತ್ತಿದೆ. ನಾನು ಕೂಡ ಉತ್ತರ ಕರ್ನಾಟಕದ ಬಾದಾಮಿಯಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ ಪ್ರತ್ಯೇಕ ರಾಜ್ಯಬೇಕೆಂದು ಕೇಳುವುದಿಲ್ಲ. ಆ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಮೂರ್ಖತನದ ವಾದ ಎಂದರು.

ನಾನು ಸಿಎಂ ಆಗಿದ್ದಾಗ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಅನುದಾನ ನೀಡಿದ್ದೇನೆ. ಜತೆಗೆ ಆರ್ಟಿಕಲ್‌ 371 ತಂದು ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಆ ಭಾಗದ ಜಿಲ್ಲೆಗಳಿಗೆ ಪ್ರತಿ ವರ್ಷ 1,500 ಕೋಟಿ ರೂ. ವಿಶೇಷ ಅನುದಾನ ನೀಡಿದ್ದೇನೆ. ಆಗ ಚಕಾರವೆತ್ತದ ಶ್ರೀರಾಮುಲು, ಉಮೇಶ್‌ ಕತ್ತಿ ಅವರು ಈಗ ಸ್ವಾರ್ಥಕ್ಕಾಗಿ ಪ್ರತೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಅಖಂಡ ಕರ್ನಾಟಕಕ್ಕೆ ಬದ್ಧ:
ಅಖಂಡ ಕರ್ನಾಟಕಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಅನಂತಕುಮಾರ್‌ ಹೇಳಿದ್ದಾರೆ.

ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಎಂದೂ ಕರ್ನಾಟಕ ಇಬ್ಭಾಗ ಮಾಡಲು ಮುಂದಾಗಿಲ್ಲ. ಬಿಜೆಪಿ ಸದಾ ಅಖಂಡ ಕರ್ನಾಟಕದ ಪರವಾಗಿಯೇ ಇದೆ. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕವನ್ನು ಪ್ರತ್ಯೇಕಗೊಳಿಸುವುದರ ಬಗ್ಗೆ ಕೆರಳಿಸುವ ಹೇಳಿಕೆ ನೀಡಬಾರದು. ಇದರಿಂದ ಆ ಭಾಗದ ಜನರಷ್ಟೇ ಅಲ್ಲ ಕರ್ನಾಟಕದ ಎಲ್ಲ ಭಾಗದ ಜನರ ಭಾವನೆಗಳಿಗೆ ಧಕ್ಕೆಯಾಗಲಿದೆ ಎಂದು ಹೇಳಿದರು. ಕವಿಗಳು, ಸಾಂಸ್ಕೃತಿಕ ನಾಯಕರು, ಕನ್ನಡ ಪರ ಸಂಘಟನೆಗಳು ಒಡೆದು ಹಂಚಿಹೋಗಿದ್ದ ಕರ್ನಾಟಕ ರಾಜ್ಯವನ್ನು ಒಂದುಗೂಡಿಸಿ ಕಟ್ಟಿದ್ದಾರೆ. ಅದನ್ನು ಈಗ ಒಡೆಯುವುದು ಸರಿಯಲ್ಲ. ಆರೂವರೆ ಕೋಟಿ ಕನ್ನಡಿಗರು ಅಖಂಡ ಕರ್ನಾಟಕದ ಪರವಾಗಿದ್ದಾರೆ ಎಂದರು.

ಇದು ಸಲ್ಲ ಎಂದ ಮಂತ್ರಾಲಯ ಶ್ರೀ:
ಪ್ರತ್ಯೇಕ ರಾಜ್ಯದ ಕೂಗು ಬಿಟ್ಟು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಬೇಕು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಭಿಪ್ರಾಯಪಟ್ಟರು.

ರಾಯಚೂರಿನಲ್ಲಿ ಮಾತನಾಡಿದ ಅವರು, ಅಖಂಡ ಕರ್ನಾಟಕದ ಜನರ ಆಶೋತ್ತರಗಳಿಗೆ ಸರ್ಕಾರಗಳು ಸ್ಪಂದಿಸಬೇಕು. ಮಠಾಧಿಧೀಶರಾದ ನಾವು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಬೇಕಾಗುತ್ತದೆ. ದೇಶ, ರಾಜ್ಯ ವಿಭಜನೆ ವಿಚಾರಕ್ಕೆ ನಾವು ಸಮ್ಮತಿಸುವುದಿಲ್ಲ. ಎಲ್ಲರ ಯೋಗ ಕ್ಷೇಮ, ಸಂಘಟಿತವಾಗಿ ನಡೆಯುವುದನ್ನು ಬಯಸುತ್ತೇವೆ. ಸರ್ಕಾರ ಪ್ರತ್ಯೇಕತೆ ಬದಲಿಗೆ ಈ ಭಾಗಕ್ಕೆ ಹೆಚ್ಚು ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದಿದ್ದಾರೆ.

ಅನಾದರ ತೋರಿದರೆ ಹೋರಾಟ:
ಚುನಾವಣಾ ಪೂರ್ವದಲ್ಲಿ ಪರಸ್ಪರ ಕಚ್ಚಾಡಿದ ಜೆಡಿಎಸ್‌-ಕಾಂಗ್ರೆಸ್‌ ಬಿಜೆಪಿಯನ್ನು ದೂರ ಇಡಬೇಕು ಎಂಬ ಒಂದೇ ಕಾರಣದಿಂದ ರಾಜ್ಯದಲ್ಲಿ ಅ ಧಿಕಾರಕ್ಕೆ ಬಂದಿರುವುದು ನಮಗೆ ಬೇಸರವಿಲ್ಲ. ಆದರೆ, ಉತ್ತರ ಕರ್ನಾಟಕ ಜನರು ತಮ್ಮನ್ನು ಬೆಂಬಲಸಿಲ್ಲ ಎಂದು ಅಭಿವೃದ್ಧಿ ವಿಷಯದಲ್ಲಿ ಅನಾದರ ತೋರಿದರೆ ಪ್ರತಿಭಟನೆ ಅನಿವಾರ್ಯ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಹೊಳೆ ಆಲೂರಿನ ಅಸೂಟಿ ಗ್ರಾಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸಮಗ್ರ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಬದಲು ಕೇವಲ ಹಾಸನಕ್ಕೆ ಅಥವಾ ಜೆಡಿಎಸ್‌ ಮುಖ್ಯಮಂತ್ರಿಯಂತೆ ವರ್ತಿಸುತ್ತಿರುವುದು ಶೋಭೆಯಲ್ಲ. ಇದನ್ನು ನೋಡಿಯೂ ಸುಮ್ಮನಿರುವ ಕಾಂಗ್ರೆಸ್‌ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇನ್ನಷ್ಟು ಬಲಗೊಳ್ಳುವ ಮುನ್ನವೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಚೋದನಕಾರಿ ಹೇಳಿಕೆಯೇ ಇದಕ್ಕೆ ಕಾರಣವಾಗಿದೆ.
– ಜಗದೀಶ ಶೆಟ್ಟರ್‌, ಮಾಜಿ ಸಿಎಂ

31ರಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ: ಗೂಲಶೆಟ್ಟಿ
ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ 13 ಜಿಲ್ಲೆಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಜು.31ರಂದು ಸುವರ್ಣ ವಿಧಾನಸೌಧದ ಎದುರು ನಡೆಯಲಿರುವ ಹೋರಾಟದ ವೇಳೆ ಮತ್ತೆ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲಾಗುವುದು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡ ನಾಗೇಶ ಗೋಲಶೆಟ್ಟಿ ಹೇಳಿದರು.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಲ ಮೊದಲ ಬಾರಿಗೆ ನಾವು ಮುಧೋಳದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಿದ್ದೇವೆ. ಈಗ ಮತ್ತೆ ಈ ಭಾಗದಲ್ಲಿ ಪ್ರತ್ಯೇಕ ರಾಜ್ಯದ ಧ್ವನಿ ಮೊಳಗುತ್ತಿದೆ. ಜನಬೆಂಬಲ ಹೆಚ್ಚಾಗುತ್ತಿದ್ದು, ಸುವರ್ಣ ವಿಧಾನಸೌಧದ ಎದುರು ಧ್ವಜ ಹಾರಿಸಲಾಗುವುದು. 13 ಜಿಲ್ಲೆಗಳಲ್ಲಿ ಸಂಚರಿಸಿ ಜನಾಭಿಪ್ರಾಯ ಸಂಗ್ರಹಿಸಿ ಸಹಿ ಪಡೆದುಕೊಳ್ಳಲಾಗಿದೆ. ಒಟ್ಟು 65 ಲಕ್ಷ ಜನಾಭಿಪ್ರಾಯ ಸಂಗ್ರಹವಾಗಿದೆ. ಶೇ.91ರಷ್ಟು ಜನ ಪ್ರತ್ಯೇಕ ರಾಜ್ಯ ಬೇಕು ಎಂದು ವಾದ ಮಂಡಿಸಿದ್ದಾರೆ. ಈ ಭಾಗದ ಜನ ಸ್ವಾಭಿಮಾನಿಗಳು, ಅನ್ಯಾಯವಾದಾಗ ಸಿಡಿದೇಳುತ್ತಾರೆ. ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾಗೂ ಕಾಗವಾಡದ ಮಾಜಿ ಶಾಸಕ ಭರಮಗೌಡ ಕಾಗೆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಶಾಸಕ ಎ.ಎಸ್‌. ಪಾಟೀಲ್‌ ನಡಹಳ್ಳಿ ಬೆಂಬಲ ನೀಡಿದ್ದರೂ, ಒತ್ತಡಕ್ಕೆ ಮಣಿದು ಹಿಂದಕ್ಕೆ ಸರಿದಿದ್ದಾರೆ. ಬಿಜೆಪಿ ಮುಖಂಡ ಶ್ರೀರಾಮುಲು ನಾಯಕತ್ವ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅವರ ನಾಯಕ್ವತ ನಮಗೆ ಬೇಡ ಎಂದು ಹೇಳಿದರು.

Comments are closed.