ರಾಷ್ಟ್ರೀಯ

ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು- ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

Pinterest LinkedIn Tumblr


ನವದೆಹಲಿ: 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಕಾಮುಕರಿಗೆ ಗಲ್ಲು ಶಿಕ್ಷೆ ಹಾಗೂ ಪ್ರಕರಣದ ತ್ವರಿತ ವಿಚಾರಣೆ ನಡೆಸುವ ಅಂಶವಿರುವ ಕ್ರಿಮಿನಲ್ ಕಾಯ್ದೆಯ ತಿದ್ದುಪಡಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಪಾಸ್ ಆಗಿದೆ.

ಜಮ್ಮು ಕಾಶ್ಮೀರ ಬಾಲಕಿ ಮೇಲಿನ ರೇಪ್ ಪ್ರಕರಣ ಸೇರಿದಂತೆ ದೇಶಾದ್ಯಂತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೇ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸುವಂತೆ ಹಲವು ಹೋರಾಟಗಾರು ಆಗ್ರಹಿಸಿದ್ದರು. ಸದ್ಯ ಈ ಹೋರಾಟಗಳಿಗೆ ಫಲ ಸಿಕ್ಕಿದೆ.

2018 ಏಪ್ರಿಲ್ 21 ರಂದು ಕೇಂದ್ರ ಸರ್ಕಾರ ಅಪರಾಧ ಕಾನೂನು (ತಿದ್ದುಪಡಿ) ಸುಗ್ರೀವಾಜ್ಞೆ ಹೊರಡಿಸಿದಾಗ ಹಲವರು ಒಪ್ಪಿಗೆ ನೀಡಿದ್ದರೂ ಸಹ ಮತ್ತಷ್ಟು ಕಠಿಣ ಕಾನೂನು ಅಳವಡಿಸಲು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಇದರಂತೆ ತಿದ್ದುಪಡಿ ಮಸೂದೆಯಲ್ಲಿ ಬದಲಾವಣೆ ಮಾಡಲಾಗಿದೆ.

ಸದ್ಯ ಸದನದಲ್ಲಿ ಒಪ್ಪಿಗೆ ನೀಡಿರುವ ಮಸೂದೆಯಲ್ಲಿ 12 ವರ್ಷ ವಯಸ್ಸಿನ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಗಲ್ಲು ಶಿಕ್ಷೆ ಹಾಗೂ ಇಂತಹ ಪ್ರಕರಣಗಳ ವಿಚಾರಣೆ ವೇಗವಾಗಿ ನಡೆಯಬೇಕೆಂಬ ಅಂಶವನ್ನು ಸೇರಿಸಲಾಗಿದೆ. ಜೊತೆಗೆ 16ರ ಕೆಳಗಿನ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಇದುವರೆಗೂ ವಿಧಿಸುತ್ತಿದ್ದ 10 ವರ್ಷಗಳ ಕನಿಷ್ಠ ಶಿಕ್ಷೆಯನ್ನು 20 ವರ್ಷಗಳಿಗೆ ಹೆಚ್ಚಿಸಲಾಗಿದ್ದು. ಗರಿಷ್ಠ ಪ್ರಮಾಣದ ಶಿಕ್ಷೆಯಾಗಿ ಜೀವವಾಧಿ ಶಿಕ್ಷೆ ವಿಧಿಸಬಹುದಾಗಿದೆ.

Comments are closed.