ಕರ್ನಾಟಕ

ಲೋಕಸಭೆ ಚುನಾವಣೆ: ಸಿದ್ದರಾಮಯ್ಯ ನಾಯಕತ್ವದಲ್ಲಿ ಟಾರ್ಗೆಟ್‌ 20ಕ್ಕೆ ರಾಹುಲ್‌ ಸೂಚನೆ

Pinterest LinkedIn Tumblr

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ದಿಲ್ಲಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಲೋಕಸಭೆ ಚುನಾವಣೆಗೂ ನೀವೇ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಬೇಕು. 20 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಹೋರಾಟ ನಡೆಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಟಾರ್ಗೆಟ್‌ ಸಹ ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಹಿತ ರಾಜ್ಯದ ನಾಯಕರಿಗೂ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸುವ ಕುರಿತು ಹೈಕಮಾಂಡ್‌ ಮಾಹಿತಿ ರವಾನಿಸಿದೆ ಎಂದು ಹೇಳಲಾಗಿದೆ.

ವಿಧಾನಸಭೆ ಚುನಾವಣೆಯಲ್ಲೂ ಸಿದ್ದರಾಮಯ್ಯಗೆ ಸಂಪೂರ್ಣ ಜವಾಬ್ದಾರಿ ವಹಿಸಿದ್ದ ರಾಹುಲ್‌ ಗಾಂಧಿ ಮುಂದಿನ ಲೋಕಸಭೆ ಚುನಾವಣೆ ಯನ್ನೂ ಅವರದೇ ನೇತೃತ್ವದಲ್ಲಿ ಎದುರಿಸಲು ನಿರ್ಧರಿಸಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್‌ ಅವರೂ ಸಿದ್ದರಾಮಯ್ಯ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಸ್ಪರ್ಧೆ ಇಲ್ಲ: ಸಿದ್ದರಾಮಯ್ಯ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಮೈಸೂರು ಅಥವಾ ಕೊಪ್ಪಳದಿಂದ ಸ್ಪರ್ಧೆಗೆ ಇಳಿಸಲು ಹೈಕಮಾಂಡ್‌ ಬಯಸಿತ್ತು. ಸಿದ್ದರಾಮಯ್ಯ ಬಳಿ ರಾಹುಲ್‌ ಗಾಂಧಿ ಈ ಬಗ್ಗೆ ಪ್ರಸ್ತಾವ ಮಾಡಿದ್ದರು. ಆದರೆ ಇನ್ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ. ಆದರೆ ರಾಜ್ಯಾದ್ಯಂತ ಪ್ರವಾಸ ಮಾಡಿ ಹೆಚ್ಚು ಸ್ಥಾನ ಗಳಿಸಲು ಶ್ರಮಿಸುತ್ತೇನೆ ಎಂದು ಹೇಳಿ ಬಂದಿದ್ದಾರೆ ಎನ್ನಲಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷಿತ ಮಟ್ಟದಲ್ಲಿ ಜಯ ಗಳಿಸದೇ ಇದ್ದುದರಿಂದ ಪಕ್ಷದ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಪಕ್ಷದ ರಾಜ್ಯ ಮಟ್ಟದ ನಾಯಕರು ವಿಶ್ಲೇಷಣೆ ಮಾಡಿದ್ದರು. ಅಲ್ಲದೇ ಈ ಬಗ್ಗೆ ಹೈಕಮಾಂಡ್‌ ಗಮನಕ್ಕೂ ತಂದಿದ್ದರು. ಆದರೆ ಹೈಕಮಾಂಡ್‌ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಸಮ್ಮಿಶ್ರ ಸರಕಾರ ರಚನೆಗೆ ವೇದಿಕೆ ಸೃಷ್ಟಿಸಿ ಅವರನ್ನೇ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

Comments are closed.