ಕರ್ನಾಟಕ

ಬೌರಿಂಗ್​ ಕ್ಲಬ್​ ಕೋಟಿ ಕೋಟಿ ಆಸ್ತಿ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್​

Pinterest LinkedIn Tumblr


ಬೆಂಗಳೂರು: ಬೌರಿಂಗ್​ ಕ್ಲಬ್​ನಲ್ಲಿ ಕೋಟಿ ಕೋಟಿ ಹಣ, ನೂರಾರು ಕೋಟಿ ಆಸ್ತಿ ಪತ್ರ ಸಿಕ್ಕ ಪ್ರಕರಣ ಸಂಬಂಧ ಕ್ಲಬ್​ ಸದಸ್ಯರ ಸಭೆ ಇಂದು ಬೌರಿಂಗ್​ ಕ್ಲಬ್​ನಲ್ಲಿ ಆಯೋಜಿಸಲಾಗಿದ್ದು, ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕ್ಲಬ್​ನ ಅಧ್ಯಕ್ಷ ರೂಪ್​ ಗೂಕಲಾಣಿ ಮತ್ತು ಆರೋಪಿ ಅವಿನಾಶ್​ ಅಮರಲಾಲ್​ ಕುಕ್ರೇಜಾ ಇಬ್ಬರೂ ಸಂಬಂಧಿಗಳು ಎಂಬ ಅಂಶ ಮೂಲಗಳಿಂದ ಪತ್ತೆಯಾಗಿದೆ.

ಈ ಬಗ್ಗೆ ನ್ಯೂಸ್​ 18ಗೆ ಮಾಹಿತಿ ನೀಡಿದ ಮೂಲಗಳು, ಬೌರಿಂಗ್​ ಕ್ಲಬ್​ನ ಅಧ್ಯಕ್ಷ ರೂಪ್​ ಗೂಕಲಾಣಿ ಮತ್ತು ಉದ್ಯಮಿ ಅವಿನಾಶ್​ ಕುಕ್ರೇಜಾ ಸಂಬಂಧಿಗಳು, ಈ ವಿಚಾರ ಇಂದು ನಡೆದ ಸಭೆಯಲ್ಲಿ ಬಹಿರಂಹಗವಾಗಿದೆ ಎಂದಿವೆ.

ಸಭೆಯಲ್ಲಿ ಗೂಕಲಾಣಿ ಅವರೇ ಈ ವಿಚಾರವನ್ನು ಪ್ರಸ್ತಾಪಿಸಿದ್ಧಾಗಿ ಮೂಲಗಳು ತಿಳಿಸಿವೆ. ಗೂಕಲಾಣಿ ಅವರ ಹೆಂಡತಿಯ ಕಡೆಯಿಂದ ಕುಕ್ರೇಜಾ ನೆಂಟರಾಗಿದ್ದು ಅವರ ಮೂಲಕವೇ ಕುಕ್ರೇಜಾಗೆ ಸದಸ್ಯತ್ವ ಸಿಕ್ಕಿದ್ದು ಎನ್ನಲಾಗಿದೆ. ಅವಿನಾಶ್​ ಕುಕ್ರೇಜಾರನ್ನು ಕ್ಲಬ್​ ಸದಸ್ಯ ಸ್ಥಾನದಿಂದ ಉಚ್ಛಾಟಿಸಲು ಸದಸ್ಯರು ಪಟ್ಟು ಹಿಡಿದಿದ್ದಾರೆ. ಆದರೆ ಇದಕ್ಕೆ ಒಪ್ಪದ ಅಧ್ಯಕ್ಷ ರೂಪ್​ ಗೂಕಲಾಣಿ, ಷೋ ಕಾಸ್​ ನೊಟೀಸ್​ ನೀಡಿ, ಉತ್ತರ ಬಂದ ನಂತರ ಸದಸ್ಯತ್ವ ರದ್ದುಗೊಳಿಸಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಸಭೆಯಲ್ಲಿ ಎರಡು ಪಂಗಡಗಳಾಗಿದ್ದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಂತಿಮವಾಗಿ ಷೋ ಕಾಸ್​ ನೊಟೀಸ್ ನೀಡಿದ ನಂತರ ಉತ್ತರ ಪಡೆದು ಉಚ್ಛಾಟನೆಗೆ ನಿರ್ಧಾರ ಮಾಡುವಂತೆ ರೂಪ್​ ಗೂಕಲಾಣಿ ಸೂಚನೆ ನೀಡಿದ್ದಾರೆ.

ಈಗ ಕ್ಲಬ್​ನಲ್ಲಿ ಹಣ, ಚಿನ್ನಾಭರಣ ಮತ್ತು ಆಸ್ತಿಪತ್ರಗಳನ್ನು ಇಡುವಲ್ಲಿ ಅಧ್ಯಕ್ಷ ರೂಪ್​ ಗೂಕಲಾಣಿ ಪ್ರಯತ್ನಿಸಿದ್ದರೇ ಎಂಬ ಪ್ರಶ್ನೆ ಉದ್ಭವವಾಗಿದೆ. ಜತೆಗೆ ಕ್ಲಬ್​ ಸದಸ್ಯರಿಗೂ ಸಹ ಮುಜುಗರ ಉಂಟಾಗಿದೆ. ಕ್ಲಬ್​ನ ಬ್ಯಾಡ್ಮಿಂಟನ್​ ಲಾಕರ್​ನಲ್ಲಿ 800 ಕೋಟಿ ರೂಗಳಿಗೂ ಮಿಗಿಲಾದ ಆಸ್ತಿ ಪತ್ರ, 3.86 ಕೋಟಿ ರೂ ನಗದು, ಕೋಟ್ಯಂತರ ರೂಗಳ ಚಿನ್ನಾಭರಣ ಮತ್ತು ಬ್ಲಾಂಕ್​ ಚೆಕ್​ಗಳು ಸಿಕ್ಕಿತ್ತು. ಇದಾದ ನಂತರ ಬೌರಿಂಗ್​ ಕ್ಲಬ್​ನ ಎಲ್ಲಾ ಸದಸ್ಯರೂ ಮುಜುಗರಕ್ಕೆ ಒಳಗಾಗಿದ್ದರು. ಇಷ್ಟಾದರೂ ಅವಿನಾಶ್​ ಕುಕ್ರೇಜಾ ಸದಸ್ಯತ್ವ ರದ್ದು ಮಾಡುತ್ತಿಲ್ಲ ಎಂಬ ಸಿಟ್ಟು ಹಲವು ಸದಸ್ಯರಲ್ಲಿ ಹುಟ್ಟಿದೆ ಎನ್ನಲಾಗಿದೆ.

Comments are closed.