ಕರ್ನಾಟಕ

ಜೆಡಿಎಸ್‌ಗೆ ಪಟ್ಟಿ ಬಿಡುಗಡೆ, ಮೈತ್ರಿ ಡೀಲ್‌ನ ಹಿರಿಮೆ

Pinterest LinkedIn Tumblr


ಕಾಂಗ್ರೆಸ್‌ ಮತ್ತು ಬಿಜೆಪಿಗಿಂತ ಮುಂಚೆಯೇ ವಿಧಾನಸಭೆ ಚುನಾವಣೆಗೆ 126 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ನಾವೇನೂ ಕಮ್ಮಿಯಲ್ಲ ಎಂದು ಸಂದೇಶ ರವಾನಿಸಿದ ಜೆಡಿಎಸ್‌ ಸದ್ಯದ ಸ್ಥಿತಿಯಲ್ಲಿ ಅತೀವ ಆತ್ಮವಿಶ್ವಾಸ ಹಾಗೂ ರಣೋತ್ಸಾಹದಲ್ಲಿದೆ. ಕಾಂಗ್ರೆಸ್‌ನ ಸಾಧನಾ ಸಂಭ್ರಮ ಹಾಗೂ ಜನಾಶೀರ್ವಾದ ಯಾತ್ರೆ, ಬಿಜೆಪಿಯ ಪರಿವರ್ತನಾ ಯಾತ್ರೆಗೆ ಪರ್ಯಾಯವಾಗಿ ವಿಕಾಸ ಪರ್ವ ಯಾತ್ರೆ ಆರಂಭಿಸಿದ ಎಚ್‌. ಡಿ.ಕುಮಾರಸ್ವಾಮಿ ಈಗಾಗಲೇ 100 ಕ್ಷೇತ್ರಗಳ ಪ್ರವಾಸ ಮುಗಿಸಿ ಕಾರ್ಯಕರ್ತರು- ಮುಖಂಡರಲ್ಲಿ ಹುಮಸ್ಸು ತುಂಬಿದ್ದಾರೆ.

ಮತ್ತೂಂದೆಡೆ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಹಳೇ ಮೈಸೂರು ಭಾಗದಲ್ಲಿ ಒಂದು ಸುತ್ತು ಸಂಚರಿಸಿ ಪಕ್ಷದ ಬೇರುಗಟ್ಟಿಗೊಳಿಸಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಹಳೇ ಜನತಾಪರಿವಾರದ ನಾಯಕರುಗಳನ್ನೆಲ್ಲಾ ಒಟ್ಟುಗೂಡಿಸಿ ಮತ್ತೆ ಸಕ್ರಿಯರನ್ನಾಗಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಬೃಹತ್‌ ಸಮಾವೇಶ ಪಕ್ಷಕ್ಕೆ ಟಾನಿಕ್‌ ದೊರೆತಂತಾಗಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಜೆಡಿಎಸ್‌ಅನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುವ ಮಟ್ಟಕ್ಕೆ ಜೆಡಿಎಸ್‌ ಶಕ್ತಿವರ್ಧನೆಯಾಗಿದೆ.

ಬಿಎಸ್‌ಪಿ ಹಾಗೂ ಎನ್‌ಸಿಪಿ ಜತೆಗಿನ ಮೈತ್ರಿ ಘೋಷಣೆ, ದಲಿತ, ಕನ್ನಡಪರ, ಕಾರ್ಮಿಕ, ವೈಓಸಿ ಪಕ್ಷಗಳ ಜತೆಗೆ ನಡೆಯುತ್ತಿರುವ ಮೈತ್ರಿ ಮಾತುಕತೆಯಿಂದಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿಯೂ ಒಂದಷ್ಟು ವಿಶ್ವಾಸ ಬಂದಂತಾಗಿದ್ದು, ನಮ್ಮ ಸರ್ಕಾರವೂ ಬರಬಹುದು ಎಂಬ ಆಸೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‌ ಆಕಾಂಕ್ಷಿಗಳು ಹಾಗೂ ಟಿಕೆಟ್‌ ಖಾತರಿಯಾಗಿರುವವರು ಸಹ ಮೈಕೊಡವಿ ಎದು ನಿಂತುಕೊಳ್ಳುವಂತಾಗಿದೆ.

ಕರಾವಳಿ ಭಾಗದಲ್ಲಿ ಪಕ್ಷದ ನೆಲೆ ಇಲ್ಲದಿದ್ದರೂ ಆ ಭಾಗದಲ್ಲಿ ವಿಸ್ತರಿಸಿಕೊಳ್ಳಲು ಪ್ರಯತ್ನಕ್ಕೂ ಮುಂದಾಗಿ ಹಳೇ ಮೈಸೂರು, ಉತ್ತರ ಕರ್ನಾಟಕದ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ. ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ, ಕೊಪ್ಪಳ, ಬಳ್ಳಾರಿ ಭಾಗದಿಂದ ಹೆಚ್ಚು ಸೀಟು ಪಡೆಯುವ ತಂತ್ರಗಾರಿಕೆಯೂ ರೂಪಿಸಲಾಗುತ್ತಿದೆ. ಈ ಬಾರಿ ಅಧಿಕಾರಕ್ಕೆ ಬರದಿದ್ದರೆ ಮತ್ತೆ ಕಷ್ಟ ಎಂಬುದು ಖುದ್ದು ದೇವೇಗೌಡ, ಎಚ್‌ಡಿಕೆಯವರಿಗೆ ಗೊತ್ತಿರುವುದರಿಂದ ಮಾಡು ಇಲ್ಲವೇ ಮಡಿ

ಎಂಬಂತ ಹೋರಾಟ ನಡೆಸಲಾಗುತ್ತಿದ್ದು ಜೆಡಿಎಸ್‌ ಪಾಲಿಗೆ ದೇವೇಗೌಡ- ಕುಮಾರಸ್ವಾಮಿ ಬ್ರ್ಯಾಂಡ್‌ ಅಂಬಾಸಿಡರ್‌ಗಳಂತಾಗಿದ್ದಾರೆ. ಮೊದಲಹಂತದ ಪಟ್ಟಿ ಬಿಡುಗಡೆಯಿಂದ ಕೆಲವು ಕ್ಷೇತ್ರಗಳಲ್ಲಿ ಉಂಟಾಗಿದ್ದ ಅಸಮಾಧಾನ ಪ್ರಾರಂಭದಲ್ಲೇ ಶಮನ ಮಾಡಿರುವುದು ಹಾಗೂ ಪಟ್ಟಿ ಬದಲಾವಣೆ ಮಾಡದಿರಲು ತೀರ್ಮಾನಿ ಸಿರುವುದು ಜಾಣ್ಮೆಯ ನಡೆ ಎನ್ನಬಹುದು. ಕುಟುಂಬ ರಾಜಕಾರಣ ಆರೋಪ ಹಣೆಪಟ್ಟಿ ಕಳಚಿಕೊಳ್ಳಲು ಯತ್ನಿಸಲಾಗುತ್ತಿದೆ. ಒಟ್ಟಾರೆ, ಜೆಡಿಎಸ್‌ ಸ್ಥಿತಿ ಸುಧಾರಿಸಿರುವುದು ಹೌದು.

* ಎಸ್‌.ಲಕ್ಷ್ಮಿನಾರಾಯಣ

-ಉದಯವಾಣಿ

Comments are closed.