ಕರ್ನಾಟಕ

ಕೋಟ್ಯಂತರ ರೂ. ಮೌಲ್ಯದ ಆಭರಣ ಸಿಗುತ್ತೆ ಎಂದು ದೋಚಿದ್ದ 25 ಕೆ.ಜಿ. ತೂಕದ ಲಾಕರ್‌ನಲ್ಲಿ ಸಿಕ್ಕಿದ್ದು ಕೇವಲ 100 ರೂಪಾಯಿ

Pinterest LinkedIn Tumblr

ಬೆಂಗಳೂರು: ಕೋಟ್ಯಂತರ ರೂ. ಮೌಲ್ಯದ ಆಭರಣ ಸಿಗುತ್ತದೆ ಎಂದು ಆಭರಣ ಉದ್ಯಮಿ ಮನೆಗೆ ನುಗ್ಗಿ ಕೆಲಸಗಾರರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ಬರೋಬ್ಬರಿ 25 ಕೆ.ಜಿ ತೂಕದ ಲಾಕರ್‌ ದೋಚಿದ್ದ ಡಕಾಯಿತರಿಗೆ ಕೊನೆಗೆ ಅದರಲ್ಲಿ ಸಿಕ್ಕಿದ್ದು ಕೇವಲ 100 ರೂ. ಮಾತ್ರ !

ಭಾರಿ ನಿರೀಕ್ಷೆಯೊಂದಿಗೆ ಲಾಕರ್‌ ದೋಚಿದ್ದ ಏಳು ಜನ ಡಕಾಯಿತರ ತಂಡ ಜೆ.ಸಿ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿಗಳಿಂದ 7 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ವಿವಿಧ ಅಪಾರ್ಟ್‌ಮೆಂಟ್‌, ಕಚೇರಿಗಳಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದ ಭೈರಸಂದ್ರ ನಿವಾಸಿ ಕಿರಣ್‌ ರುಕ್ಕಯ್ಯ (37), ಹಲಸೂರಿನ ಲೋಕೇಂದ್ರ (27), ಭಾರತಿನಗರದ ಭಾನು ಖತ್ರಿ(20), ಜೆ.ಸಿ ನಗರದ ಮನಿ ಬಂಡಾರಿ (42), ವಿಷ್ಣುಗಿರಿ (27) ಹಾಗೂ ದೀಪಕ್‌ ರಾಜ್‌ (28) ಹಾಗೂ ಕೋರಮಂಗಲ ನಿವಾಸಿ ಸೆಕ್ಯುರಿಟಿ ಸಂಸ್ಥೆ ಮೇಲ್ವಿಚಾರಕ ಮೊಹಮ್ಮದ್‌ ಅಯಾನ್‌ ಬಂಧಿತರು. ಇವರಿಂದ ಐ-20 ಕಾರು, ಬೆಳ್ಳಿಯ ಲೋಟಗಳು, ಮೊಬೈಲ್‌ ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಆರೋಪಿಗಳು, ಫೆ.20ರಂದು ರಾತ್ರಿ 3 ಗಂಟೆ ಸುಮಾರಿಗೆ ಮಿಲ್ಲರ್ಸ್‌ ರಸ್ತೆ ನಿವಾಸಿ ಉದ್ಯಮಿ ಅಶೋಕ್‌ ಭಾಟಿಯಾ ಎಂಬುವರ ಮನೆ ಬಾಗಿಲು ಮುರಿದು ಒಳ ನುಗ್ಗಿ ಕೆಲಸಗಾರರಾದ ಹಿತೇಶ್‌ ಶರ್ಮಾ ಮತ್ತು ಯೋಗೇಶ್‌ ಮೇಲೆ ಹಲ್ಲೆ ನಡೆಸಿ ಕೈ ಕಾಲು ಕಟ್ಟಿ ಹಾಕಿ ಡಕಾಯಿತಿ ಮಾಡಿದ್ದರು.

ಮನೆಯಲ್ಲಿ ಶೋಧ ನಡೆಸುವ ವೇಳೆ ಚಿನ್ನ ಹಾಗೂ ಬೆಳ್ಳಿ ವಸ್ತುಗಳು ದೊರಕಿವೆ. ಆದರೆ, ಈ ವೇಳೆ ಕೊಠಡಿಯಲ್ಲಿಟ್ಟಿದ್ದ ಭಾರಿ ತೂಕದ ಲಾಕರ್‌ ಕಾಣಿಸಿದೆ. ಅದರಲ್ಲಿ ಕೋಟ್ಯಂತರ ರೂ. ಮೌಲ್ಯದ ಆಭರಣ ಸಿಗಬಹುದು ಎಂದು ಲಾಕರ್‌ ಒಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಸಾಧ್ಯವಾಗದ ಕಾರಣ, ಹೊರಗೆ ನಿಲ್ಲಿಸಿದ್ದ ಮಾಲೀಕ ಅಶೋಕ್‌ ಅವರ ಕಾರಿನಲ್ಲೇ 25 ಕೆ.ಜಿ ತೂಕದ ಲಾಕರ್‌ ಅನ್ನು ಎತ್ತಿಕೊಂಡು ಪರಾರಿಯಾಗಿದ್ದರು. ಆರೋಪಿ, ಮನಿ ಬಂಡಾರಿ ಮನೆಯಲ್ಲಿ ಲಾಕರ್‌ ತೆರೆದಿದ್ದಾರೆ. ಆದರೆ, ಅದರಲ್ಲಿ ಕೇವಲ 100 ರೂ. ಮಾತ್ರ ಸಿಕ್ಕಿತ್ತು.

ತನಿಖೆ ಆರಂಭಿಸಿದ ಪೊಲೀಸರು, ಹಲ್ಲೆಗೊಳಗಾದ ಯೋಗೇಶ್‌ ಮತ್ತು ಹಿತೇಶ್‌ ಅವರ ಮಾಹಿತಿ ಆಧರಿಸಿ ಸುತ್ತ ಮುತ್ತಲಿನ ಪ್ರದೇಶಗಳ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಮನಿ ಬಂಡಾರಿಯ ಮನೆಗೆ ಹಲವಾರು ಜನ ಬಂದು ಹೋಗುತ್ತಿರುವ ಕುರಿತು ಸುಳಿವು ಸಿಕಿತ್ತು. ಅದರಂತೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ತಲೆಮರೆಸಿಕೊಂಡಿರುವ ನಾಲ್ವರ ವಿರುದ್ಧ ಅಪರಾಧ ಪ್ರಕರಣಗಳು ಇವೆ ಎಂದು ಪೊಲೀಸರು ತಿಳಿಸಿದರು.

ಉದ್ಯಮಿ ಅಶೋಕ್‌ ಭಾಟಿಯಾ ಅವರ ಮನೆಯಲ್ಲಿ ಬಂಧಿತ ಆರೋಪಿಗಳ ಪೈಕಿ ಒಬ್ಬನಾಗಿರುವ ವಿಷ್ಣುಗಿರಿಯ ಸಹೋದರಿ ಮನೆಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಹೀಗೆ ಮಾತನಾಡುತ್ತಿದ್ದ ವೇಳೆ, ನಮ್ಮ ಮನೆ ಮಾಲೀಕರು ನಾಲ್ಕು ದಿನ ಊರಿಗೆ ಹೋಗುತ್ತಿರುವ ಕಾರಣ ನಾನು ಕೆಲಸಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಳು. ಅದನ್ನು ಕೇಳಿಸಿಕೊಂಡಿದ್ದ ವಿಷ್ಣುಗಿರಿ, ತನ್ನ ಸಹಚರರ ಜತೆ ಸೇರಿ ಆ ಮನೆಯಲ್ಲಿ ಕಳ್ಳತನ ಮಾಡುವ ಬಗ್ಗೆ ಯೋಜನೆ ಹೂಡಿದ್ದ. ಆದರೆ, ಈ ಕೃತ್ಯದ ಬಗ್ಗೆ ಆಕೆಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದರು.

Comments are closed.