ಗಲ್ಫ್

ನಟಿ ಶ್ರೀದೇವಿ ನಿಗೂಢ ಸಾವಿನ ಪ್ರಕರಣದ ತನಿಖೆ ಚುರುಕುಗೊಳಿಸಿದ ದುಬೈ ಪೊಲೀಸ್

Pinterest LinkedIn Tumblr

ದುಬೈ: ನಟಿ ಶ್ರೀದೇವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ದುಬೈ ತನಿಖಾಧಿಕಾರಿಗಳು ಶ್ರೀದೇವಿ ಪತಿ ಬೋನಿ ಕಪೂರ್, ಮೋಹಿತ್ ಮರ್ವಾ ಕುಟುಂಬ ಸದಸ್ಯರು ಹಾಗೂ ಜುಮೇರಾ ಎಮಿರೇಟ್ಸ್ ಟವರ್ಸ್‌ ಹೊಟೇಲ್ ಸಿಬ್ಬಂದಿಯನ್ನು ವಿಚಾರಣೆಗೆ ಗುರಿಪಡಿಸಿದ್ದು, ಶ್ರೀದೇವಿಯ ಫೋನ್ ಕರೆ ದಾಖಲೆಯನ್ನು ಪೊಲೀಸರು ಪರೀಕ್ಷಿಸಿದ್ದಾರೆ.

ಜುಮೇರಾ ಎಮಿರೇಟ್ಸ್ ಟವರ್ಸ್‌ ಹೊಟೇಲ್‌ನ ಕೊಠಡಿ ಸಂಖ್ಯೆ 2201ರಲ್ಲಿ ಶನಿವಾರ ಬೆಳಗ್ಗೆ ಬಾತ್‌ರೂಮ್ ಟಬ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಶ್ರೀದೇವಿ ಪತ್ತೆಯಾಗಿದ್ದರು. ಮೊದಲಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿಸಲಾಗಿತ್ತು. ಅವರ ರಕ್ತದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿತ್ತು ಎನ್ನಲಾಗಿದೆ.

ಘಟನೆಯನ್ನು ಮರುಸೃಷ್ಟಿಸಿ ತನಿಖೆ ನಡೆಸಲು ನಿರ್ಧರಿಸಿರುವ ತನಿಖಾಧಿಕಾರಿಗಳು ಶ್ರೀದೇವಿ ಸಾವಿಗೆ ಕಾರಣವಾದ ಅಂಶದ ಬಗ್ಗೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಎಲ್ಲ ವಿಚಾರಣೆ ಮುಗಿದ ಬಳಿಕ ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ಕೊಂಡೊಯ್ಯಲು ಅವಕಾಶ ನೀಡಲಾಗುವುದು ಎಂದು ದುಬೈ ಪೊಲೀಸ್ ಮೂಲಗಳು ತಿಳಿಸಿವೆ.

ತನಿಖೆ ಬಾಕಿ ಇರುವ ಕಾರಣ ಶ್ರೀದೇವಿ ಪಾರ್ಥಿವ ಶರೀರವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಶ್ರೀದೇವಿ ತಂಗಿದ್ದ ಹೊಟೇಲ್ ರೂಮ್‌ಗೆ ಪೊಲೀಸರು ಬೀಗಮುದ್ರೆ ಹಾಕಿದ್ದಾರೆ.

ದುಬೈನಲ್ಲಿನ ನಿಯಮದ ಪ್ರಕಾರ ಆಸ್ಪತ್ರೆಯಿಂದ ಹೊರಗೆ ಸಹಜ ಸಾವು ಸಂಭವಿಸಿದರೂ ಕೂಲಂಕುಶವಾಗಿ ತನಿಖೆ ನಡೆಸಿದ ಬಳಿಕ ಮೃತದೇಹ ಹಸ್ತಾಂತರಿಸಲಾಗುತ್ತದೆ.

ದುಬೈ ಪಬ್ಲಿಕ್ ಪ್ರಾಸಿಕ್ಯೂಟರ್(ಡಿಪಿಪಿ) ಅಗತ್ಯವೆನಿಸಿದರೆ ಮತ್ತೊಮ್ಮೆ ಶ್ರೀದೇವಿಯ ಮರಣೋತ್ತರ ಪರೀಕ್ಷೆ ನಡೆಸುವಂತೆ ಆದೇಶಿಸಬಹುದು. ಡಿಪಿಪಿ ಅನುಮತಿ ಇಲ್ಲದೇ ಬೋನಿ ಕಪೂರ್ ದುಬೈನಿಂದ ಹೊರಹೋಗುವಂತಿಲ್ಲ.

 ಶ್ರೀದೇವಿಯ ವೈದ್ಯಕೀಯ ದಾಖಲೆಗಳನ್ನು ಭಾರತದಿಂದ ತರಿಸಿಕೊಳ್ಳಲಾಗಿದ್ದು, ಶ್ರೀದೇವಿ ಯಾವ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಯಾವ ಸರ್ಜರಿಗೆ ಒಳಗಾಗಿದ್ದಾರೆ. ದಿಡೀರ್ ಸಾವಿಗೆ ಕಾರಣವಿ ಏನಿರಬಹುದೆಂದು ತಿಳಿದುಕೊಳ್ಳಲು ಪ್ರಾಸಿಕ್ಯೂಟರ್ ಕಚೇರಿ ಬಯಸಿದೆ.

Comments are closed.