ಗಲ್ಫ್

ಕಗ್ಗಂಟಾಗಿಯೇ ಉಳಿದಿರುವ ಶ್ರೀದೇವಿ ಸಾವು !

Pinterest LinkedIn Tumblr

ಭಾರತೀಯ ಚಿತ್ರರಂಗದ ಮೋಹಕ ತಾರೆ ಶ್ರೀದೇವಿ ಸಾವಿನ ಬಗ್ಗೆ ಅನೇಕ ಅನುಮಾನಗಳು, ಊಹಾಪೋಹಗಳು ಕೇಳಿಬರುತ್ತಿವೆ. ಮೊದಲು ಹೃದಯಾಘಾತ, ಬಳಿಕ ಸರ್ಜರಿಗಳ ಪರಿಣಾಮದಿಂದ ಮೃತಪಟ್ಟರೆಂದು, ಆಮೇಲೆ ಆಕಸ್ಮಿಕವಾಗಿ ಕಾಲು ಜಾರಿ ಬಾತ್ ಟಬ್‌ಗೆ ಬಿದ್ದು ಮೃತಪಟ್ಟರೆಂಬ ಸುದ್ದಿ ಇದೆ. ಇದೀಗ ಪ್ರಕರಣ ಇನ್ನಷ್ಟು ತಿರುವುಗಳನ್ನು ಪಡೆದುಕೊಂಡಿದೆ.

ದುಬೈನ ಪಬ್ಲಿಕ್ ಪ್ರಾಸಿಕ್ಯೂಷನ್ ಇನ್ನಷ್ಟು ವಿಚಾರಣೆ ನಡೆಸಲಿದೆ. ಇಷ್ಟಕ್ಕೂ ಹೋಟೆಲ್ ರೂಮ್‌ನಲ್ಲಿ ಅವರ ಜತೆಗೆ ಯಾರೆಲ್ಲಾ ಇದ್ದರು? ಒಂದು ವೇಳೆ ಬಾತ್ ಟಬ್‌ನಲ್ಲಿ ಬಿದ್ದಿದ್ದರೆ ಹೊರಗೆ ಯಾಕೆ ಬರಲು ಸಾಧ್ಯವಾಗಲಿಲ್ಲ? ಟಬ್‌ನಲ್ಲಿ ಕೇವಲ ಅರ್ಧ ಅಡಿ ನೀರು ಇರುತ್ತದೆ. ಆದಕಾರಣ ಮೃತಪಡುವ ಅವಕಾಶಗಳು ತುಂಬಾ ಕಡಿಮೆ ಇವೆ ಎನ್ನುತ್ತಿದ್ದಾರೆ. ಈ ಸಾವಿನ ರಹಸ್ಯ ಗೊತ್ತಾಗಬೇಕಾದರೆ ತೀವ್ರ ವಿಚಾರಣೆ ನಡೆಸಬೇಕೆಂದು ಪೊಲೀಸರು, ಪ್ರಾಸಿಕ್ಯೂಷನ್ ಭಾವಿಸುತ್ತಿದೆ ಎನ್ನುತ್ತವೆ ಮೂಲಗಳು.

ಪಾರ್ಥೀವ ದೇಹವನ್ನು ಹಸ್ತಾಂತರಿಸುವ ಬಗ್ಗೆ ಇನ್ನೂ ಸಸ್ಪೆನ್ಸ್ ಮುಂದುವರೆದಿದೆ. ಪೊಲೀಸರಿಗೆ ಅನುಮಾನಗಳಿರುವ ಕಾರಣ ಪ್ರಕರಣವನ್ನು ಪಬ್ಲಿಕ್ ಪ್ರಾಸಿಕ್ಯೂಷನ್‌ ಅವರಿಗೆ ಒಪ್ಪಿಸಲಾಗಿದೆ. ಶ್ರೀದೇವಿ ಪತಿ ಬೋನಿ ಕಪೂರ್ ಸೇರಿದಂತೆ ಮೋಹಿತ್ ಮಾರ್ವಾ ಕುಟುಂಬಿಕರಿಂದಲೂ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಜತೆಗೆ ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ಪ್ರಶ್ನಿಸಿದ್ದಾರೆ.

ಹಾಗೆಯೇ ಬೋನಿ ಕಪೂರ್, ಶ್ರೀದೇವಿ ಅವರ ಕಾಲ್ ಡಾಟಾವನ್ನೂ ಪರಿಶೀಲಿಸಲಾಗುತ್ತಿದೆ. ದುಬೈ ಬಿಟ್ಟು ಹೋಗಬಾರದೆಂದು ಬೋನಿ ಕಪೂರ್ ಅವರಿಗೆ ಸೂಚಿಸಲಾಗಿದೆ. ಹೋಟೆಲ್ ರೂಮ್‌ನಲ್ಲಿ ಸೀನ್ ಮರುಸೃಷ್ಟಿಸುವ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಎಲ್ಲಾ ಅನುಮಾನಗಳೂ ಪರಿಹಾರವಾದ ಬಳಿಕವಷ್ಟೇ ಪಾರ್ಥೀವ ದೇಹವನ್ನು ಹಸ್ತಾಂತರಿಸಲಾಗುತ್ತದೆ. ಅಗತ್ಯ ಬಿದ್ದರೆ ಪಬ್ಲಿಕ್ ಪ್ರಾಸಿಕ್ಯೂಟರ್ ಸಹ ಇನ್ನೊಮ್ಮೆ ಪೋಸ್ಟ್ ಮಾರ್ಟಮ್‌ಗೆ ಸೂಚಿಸುವ ಸಾಧ್ಯತೆಗಳಿವೆ.

ಶ್ರೀದೇವಿ ವೈದ್ಯಕೀಯ ದಾಖಲೆಗಳನ್ನು ಪೊಲೀಸರು ಮುಂಬೈನಿಂದ ತರಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ನಡೆದ ಸರ್ಜರಿಗಳ ಜತೆಗೆ ಅವರು ಬಳಸುತ್ತಿದ್ದ ಔಷಧಿಗಳ ಬಗ್ಗೆಯೂ ಪ್ರಶ್ನಿಸುವ ಕೆಲಸದಲ್ಲಿದ್ದಾರೆ. ಇನ್ನೊಂದು ಕಡೆ ಮುಂಬೈನಲ್ಲಿನ ಕಪೂರ್ ಕಚೇರಿ ಸಿಬ್ಬಂದಿ ಮಾತ್ರ ಇಂದು ಪಾರ್ಥೀವ ಶರೀರವನ್ನು ಭಾರತಕ್ಕೆ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಈಗಾಗಲೆ ಅನಿಲ್ ಅಂಬಾನಿಯ ವಿಶೇಷ ವಿಮಾನ ದುಬೈನಲ್ಲಿ ರೆಡಿಯಾಗಿದೆ. ಅಂತಿಮ ಕ್ಲಿಯರೆನ್ಸ್ ಸಿಗುತ್ತಿದ್ದಂತೆ ಆ ಜೆಟ್‌ನಲ್ಲಿ ಮುಂಬೈಗೆ ತರಲಾಗುತ್ತದೆ.

ಶ್ರೀದೇವಿ ಅವರ ದೇಹ ಅಲ್ ಕ್ವಾಸಿಸ್ ಶವಾಗಾರದಲ್ಲಿ ಇರಿಸಲಾಗಿದ್ದು, ಜುಮೈರಾ ಎಮಿರೇಟ್ಸ್ ಟವರ್‌ನ ಕೊಠಡಿ ಸಂಖ್ಯೆ 2201 ಸೀಲ್ ಮಾಡಲಾಗಿದೆ. ದುಬೈ ನಿಯಮಗಳ ಪ್ರಕಾರ, ಆಸ್ಪತ್ರೆಯ ಹೊರಗೆ ಯಾರೇ ಮೃತಪಟ್ಟರೂ ಅದರ ಸಂಪೂರ್ಣ ತನಿಖೆ ಮಾಡಲಾಗುತ್ತದೆ. ಅದು ಸಹಜ ಸಾವಾಗಿದ್ದರೂ ಅಷ್ಟೇ. ಮೊದಲು ಅರೇಬಿಕ್ ಭಾಷೆಯಲ್ಲಿ ಮರಣ ಪ್ರಮಾಣಪತ್ರ ನೀಡಿ ಅದರ ಜತೆಗೆ ಇಂಗ್ಲಿಷ್‍ ದೃಢೀಕರಣ ಪತ್ರ ನೀಡಲಾಗುತ್ತದೆ.

Comments are closed.