ಗಂಗಾವತಿ: “ಶ್ರೀರಾಮುಲು ಅಣ್ಣ ಆಗಮಿಸುವ ತನಕ ಮದುವೆಯಾಗುವುದಿಲ್ಲ’ ಎಂದು ಹಠ ಹಿಡಿದು ಕುಳಿತು ಎರಡು ಸಲ ಮದುವೆ ಮುಂದೂಡಿದ್ದ ರಾಮುಲು ಅಭಿಮಾನಿಯೊಬ್ಬನ ಮದುವೆ ಮಾ.4ರಂದು ಫಿಕ್ಸ್ ಆಗಿದೆ. ಸಂಸದ ಶ್ರೀರಾಮುಲು ಮದುವೆಗೆ ಬರುವುದಾಗಿ ಕೊನೆಗೂ ತಿಳಿಸಿದ್ದರಿಂದ ಅಭಿಮಾನಿ ವಡಕಿ ಗ್ರಾಮದ ಮಂಜುನಾಥ ನಾಯಕ ಹೆಬ್ಬುಲಿ ತಾಳಿ ಕಟ್ಟಲು ಸಿದ್ಧಗೊಂಡಿದ್ದಾನೆ.
ಮಂಜುನಾಥ ನಾಯಕ ಹೆಬ್ಬುಲಿ ಮದುವೆ ಲಕ್ಷ್ಮೀ ಜತೆ ಹಾಗೂ ಆತನ ಸಹೋದರ ಹನುಮೇಶ ನಾಯಕ ಹೆಬ್ಬುಲಿ ಮದುವೆ ರೇಖಾಳೊಂದಿಗೆ 2017ರಲ್ಲಿ ಎರಡು ಸಲ ನಿಗದಿಯಾಗಿತ್ತು. ಎರಡೂ ಸಲವೂ ಮದುವೆಗೆ ಆಗಮಿಸುವಂತೆ ಬಳ್ಳಾರಿಯ ಸಂಸದ ಶ್ರೀರಾಮುಲು ಅವರಿಗೆ ಕುಟುಂಬದವರು ಲಗ್ನಪತ್ರಿಕೆ ಕೊಟ್ಟು ಬಂದಿದ್ದರು. ಆದರೆ ಸಂಸದ ಶ್ರೀರಾಮುಲು ಬಂದಿರಲಿಲ್ಲ. ಇನ್ನೊಮ್ಮೆ ಮನೆಗೆ ಬಂದು ಹೋಗುವೆ ಎಂದು ಮಾಹಿತಿ ನೀಡಿದ್ದರು. ಅಣ್ಣ ಬರುವವರೆಗೆ ತಾಳಿ ಕಟ್ಟಲ್ಲ ಎಂದು ಮಂಜುನಾಥ ಹಠ ಹಿಡಿದು ಕುಳಿತಿದ್ದ. ಹೀಗಾಗಿ ಕುಟುಂಬವರು ಅನಿವಾರ್ಯವಾಗಿ ಎರಡು ಸಲವೂ ಮದುವೆ ಮುಂದೂಡಿದ್ದರು.
ಈಗ ವಡಕಿ ಗ್ರಾಮದ ಹಿರಿಯರು, ಕುಟುಂಬ ವರ್ಗದವರು ಸೇರಿ 25 ಜನರು ಬಳ್ಳಾರಿಗೆ ತೆರಳಿ ಮಂಜುನಾಥ ಹಾಗೂ ಹನುಮೇಶನ ಮದುವೆ ದಿನಾಂಕ ನಿಗದಿ ಕುರಿತಂತೆ ಶ್ರೀರಾಮುಲು ಜತೆ ಮಾತನಾಡಿದ್ದು, ಶ್ರೀರಾಮುಲು ಸ್ವತಃ ಮುಂದೆ ನಿಂತು ಮದುವೆ ಕಾರ್ಯ ನಡೆಸಿಕೊಡುವುದಾಗಿ ಭರವಸೆ ನೀಡಿದ್ದರಿಂದ ಕುಟುಂಬದವರು ಮಾ.4ರಂದು ಮದುವೆ ದಿನಾಂಕ ನಿಗದಿಪಡಿಸಿದ್ದಾರೆ.
ಎಲ್ಲರೂ ನನ್ನ ಬಂಧುಗಳೇ. ಪ್ರತಿಯೊಬ್ಬರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಆಹ್ವಾನವಿರುತ್ತದೆ. ಅದರಂತೆ ವಡಕಿ ಗ್ರಾಮದ ಮಂಜುನಾಥ ಮದುವೆಗೆ ಬರುವಂತೆ ಪ್ರೀತಿಯಿಂದ ಕರೆದಿದ್ದಾರೆ. ಮಾ.4ರಂದು ಮದುವೆಗೆ ಹೋಗಿ ವಧು-ವರರಿಗೆ ಶುಭ ಕೋರಿ ಬರುವೆ.
– ಬಿ.ಶ್ರೀರಾಮುಲು, ಬಳ್ಳಾರಿ ಸಂಸದ
-ಉದಯವಾಣಿ