ಕರ್ನಾಟಕ

“ನಾನು ಬಿಜೆಪಿ, ನಾನು ಆರ್‌ಎಸ್‌ಎಸ್‌’ “ಅರೆಸ್ಟ್‌ ಮಿ’ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಆರೆಸ್ಸೆಸ್‌, ಬಿಜೆಪಿ, ಭಜರಂಗದಳದಲ್ಲಿರುವವರು ಉಗ್ರಗಾಮಿಗಳು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಶುಕ್ರವಾರದಿಂದ ರಾಜ್ಯಾದ್ಯಂತ ಜೈಲ್‌ಭರೋ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಶನಿವಾರ ಜೈಲ್‌ಭರೋ ಹಮ್ಮಿಕೊಂಡಿದ್ದಾರೆ.

ತುಮಕೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ, ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ, ಶೋಭಾ ಕರಂದ್ಲಾಜೆ, ಶಾಸಕ ಬಿ.ಸುರೇಶ್‌ ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್‌ ಸೇರಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಮಂಗಳೂರಿನಲ್ಲಿ 86ಕ್ಕೂ ಹೆಚ್ಚು, ಯಾದಗಿರಿಯಲ್ಲಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿಯ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಕೊಪ್ಪಳದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಇದೇ ವೇಳೆ, ಉಡುಪಿ, ಮೈಸೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಸೇರಿ ರಾಜ್ಯದ ಇತರೆಡೆಯೂ ಜೈಲ್‌ಭರೋ ನಡೆಯಿತು.

ನಾನು ಒಬ್ಬ ಹಿಂದೂ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಜಯಂತಿಯನ್ನು ಮುಂದೆ ನಿಂತು ಮಾಡುತ್ತಾರೆ. ಆದರೆ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಸರ್ಕಾರದಿಂದ ಆಚರಿಸಿಲ್ಲ. ಇದು ಮುಖ್ಯಮಂತ್ರಿಯ ದ್ವಿಮುಖ ನೀತಿಯಾಗಿದೆ.
– ಶೋಭಾ ಕರಂದ್ಲಾಜೆ ಸಂಸದೆ.

ಸಮಾಜದಲ್ಲಿ ಭಯ ಸೃಷ್ಟಿಸುವುದೇ ಭಯೋತ್ಪಾದನೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುವ ಪ್ರತಿ ಹೇಳಿಕೆಯೂ ಸಮಾಜದಲ್ಲಿ ಭಯ ಸೃಷ್ಟಿಸುವಂತಹದ್ದೇ ಆಗಿರುತ್ತದೆ. ಅವರ ಹೇಳಿಕೆಯಲ್ಲಿ ಬೆದರಿಕೆ, ದುರಹಂಕಾರ, ದಾಸ್ಯ ಇದ್ದೇ ಇರುತ್ತದೆ. ಹಾಗಾದರೆ ಗೃಹ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಾರೆಯೇ?
– ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ.

-ಉದಯವಾಣಿ

Comments are closed.