ಕರ್ನಾಟಕ

ಪತ್ನಿ ಸತ್ತಳೆಂದು ತಿಳಿದು ಪತಿ ನೇಣಿಗೆ ಶರಣು

Pinterest LinkedIn Tumblr


ಕೆ.ಆರ್‌.ಪುರ: ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮಮೂರ್ತಿನಗರದಲ್ಲಿ ಶುಕ್ರವಾರ ನಡೆದಿದೆ.

ಹೆನ್ರಿ ಫ‌ರ್ನಾಂಡಿಸ್‌ (37) ಮೃತನು. ಚಿತ್ರಾ ಹಲ್ಲೆಗೊಳಗಾದ ಪತ್ನಿ. ಫ‌ರ್ನಾಂಡಿಸ್‌ ಪರಸ್ತ್ರೀ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಚಿತ್ರಾ ಜಗಳ ತೆಗೆದು ಕೆಲ ದಿನಗಳ ಹಿಂದೆ ತವರು ಮನೆಗೆ ಹೋಗಿದ್ದರು.

ಶುಕ್ರವಾರ ಬೆಳಗ್ಗೆ ರಾಜಿಸಂಧಾನಕ್ಕೆ ಕರೆದ ಫ‌ರ್ನಾಂಡಿಸ್‌ ಮತ್ತೂಮ್ಮೆ ಪತ್ನಿ ಜತೆ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಪತ್ನಿ ಕಂಡು ಆತಂಕಗೊಂಡ ಫ‌ರ್ನಾಂಡಿಸ್‌ ಚಿತ್ರಾ ಸತ್ತಿದ್ದಾಳೆ ಎಂದು ಭಾವಿಸಿ ಅದೇ ಕೋಣೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಮೂರ್ತಿನಗರ ಸೆಂಟ್‌ ಆನ್ಸ್‌ ಶಾಲೆಯ ರಸ್ತೆ ಸಮೀಪದಲ್ಲಿ ನೆಲೆಸಿರುವ ಅಟೋ ಚಾಲಕ ಫ‌ರ್ನಾಂಡಿಸ್‌ 10 ವರ್ಷಗಳ ಹಿಂದೆ ಚಿತ್ರಾರನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಮೂರು ವರ್ಷಗಳಿಂದ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಿತ್ತು.

ಪತ್ನಿ ಚಿತ್ರಾ, ಪತಿ ಫ‌ರ್ನಾಂಡಿಸ್‌ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದರೆ, ಇತ್ತ ಫ‌ರ್ನಾಂಡಿಸ್‌ ಹೆಂಡತಿ ಚಿತ್ರಾಗೆ ನೀನು ಕೂಡ ಅಕ್ರಮ ಸಂಬಂಧ ಹೊಂದಿರುವ ಕುರಿತು ಪ್ರಶ್ನಿಸಿ ಹಲ್ಲೆ ನಡೆಸುತ್ತಿದ್ದ. ಪತಿಯ ವರ್ತನೆಯಿಂದ ನೊಂದ ಚಿತ್ರಾ 10 ದಿನಗಳ ಹಿಂದೆ ದೇವಸಂದ್ರದ ತವರು ಮನೆಗೆ ಹೋಗಿದ್ದರು.

ಮಾತುಕತೆಗೆ ಕರೆಸಿದ್ದ: ಶುಕ್ರವಾರ ಬೆಳೆಗ್ಗೆ ಚಿತ್ರಾಗೆ ಕರೆ ಮಾಡಿದ ಫ‌ರ್ನಾಂಡಿಸ್‌ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳೋಣ ಎಂದು ಮನವೊಲಿಸಿ ರಾಮಮೂರ್ತಿನಗರದಲ್ಲಿರುವ ಮನೆಗೆ ಕರೆಸಿಕೊಂಡಿದ್ದು, ಇಬ್ಬರು ಮಕ್ಕಳು ಶಾಲೆಗೆ ತೆರಳಿದ ನಂತರ ಇಬ್ಬರ ನಡುವೆ ಅನೈತಿಕ ಸಂಬಂಧ ಕುರಿತು ಆರೋಪ-ಪ್ರತ್ಯಾರೋಪದ ಜಗಳ ನಡೆದಿದೆ.

ಇದು ವಿಕೋಪಕ್ಕೆ ಹೋಗಿದ್ದು, ಮನೆಯಲ್ಲಿದ್ದ ಮಚ್ಚಿನಿಂದ ಚಿತ್ರಾರ ಕೈ ಹಾಗೂ ಕುತ್ತಿಗೆಯ ಹಿಂಬದಿಗೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ತೀವ್ರರಕ್ತಸ್ರಾವದಿಂದ ನೆಲಕ್ಕೆ ಬಿದ್ದ ಚಿತ್ರಾ ಅರೆಪ್ರಜ್ಞಾಸ್ಥಿತಿಗೆ ತಲುಪಿದ್ದಾರೆ. ಇದನ್ನು ಕಂಡ ಫ‌ರ್ನಾಂಡಿಸ್‌, ತನ್ನ ಹಲ್ಲೆಯಿಂದಲೇ ಪತ್ನಿ ಚಿತ್ರಾ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಅದೇ ಕೋಣೆಯಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದರು.

ಬೆಳಗ್ಗೆ ಮನೆಯಿಂದ ಹೋದ ಮಗಳು ಸಂಜೆಯಾದರು ಬಾರದಕ್ಕೆ ಆತಂಕಗೊಂಡ ತಾಯಿ ಚಿತ್ರಾಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದಿದ್ದಕ್ಕೆ ಅನುಮಾನಗೊಂಡ ತಾಯಿ, ಚಿತ್ರಾರ ಸಹೋದರ ಮಹೇಂದ್ರನಿಗೆ ಕರೆತರುವಂತೆ ಹೇಳಿದ್ದರು.

ಅದರಂತೆ ರಾಮಮೂರ್ತಿನಗರದ ಸೋದರಿಯ ಮನೆಗೆ ಮಹೇಂದ್ರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹೋದರಿ ಚಿತ್ರಾರನ್ನು ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಕೆ.ಆರ್‌.ಪುರಂ ಠಾಣೆಯಲ್ಲಿ ದಾಖಲಾಗಿದೆ.

-ಉದಯವಾಣಿ

Comments are closed.