ಕರ್ನಾಟಕ

ಟಿಪ್ಪು ಜಯಂತಿ ಬೇಡ ಎಂದ ಸಿಎಂ ಯೋಗಿ ಆದಿತ್ಯಾನಾಥ್ ಗೆ ನಟ ಪ್ರಕಾಶ್ ರೈ ಕೇಳಿದ ಪ್ರಶ್ನೆ ಏನು..?

Pinterest LinkedIn Tumblr

ಬೆಂಗಳೂರು: ಪ್ರಧಾನಿ ಮೋದಿ ಬಳಿಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರ ಕಾಲೆಳೆದಿರುವ ನಟ ಪ್ರಕಾಶ್ ರೈ, ಟಿಪ್ಪು ಜಯಂತಿ ಆಚರಣೆ ಬೇಡ ಎಂಬ ಹೇಳಿಕೆಗೆ ಸಂಬಂಧಿಸಿ ಟ್ವಿಟರ್ ನಲ್ಲಿ ತಮ್ಮ ಟೀಕಾ ಪ್ರಹಾರ ಮುಂದುವರೆಸಿದ್ದಾರೆ.

ನಿನ್ನೆ ಹನುಮನ ನಾಡಿನಲ್ಲಿ ಟಿಪ್ಪು ಜಯಂತಿ ಆಚರಿಸಬೇಡಿ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಟ, ನಿರ್ದೇಶಕ ಪ್ರಕಾಶ್ ರೈ, “ಯೋಗಿಜಿ ನಿಮ್ಮ ಅಜೆಂಡಾ ಏನು” ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ನಟ ಪ್ರಕಾಶ್ ರೈ, ಟಿಪ್ಪು ಜಯಂತಿ ಬೇಡ ಎನ್ನುವಾಗ ನಿಮ್ಮ ಜೊತೆ ನಿಂತಿದ್ದವರೇ ವರ್ಷಗಳ ಹಿಂದೆ ಟಿಪ್ಪು ಜಯಂತಿ ಆಚರಣೆ ಮಾಡಿದ್ದರು. ಈಗ ಹೇಳಿ ನಿಮ್ಮ ಅಜೆಂಡಾ ಏನು ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.

“ಪ್ರೀತಿಯ ಯೋಗಿಜೀ, ಕರ್ನಾಟಕದಲ್ಲಿ ದ್ವೇಷದ ಬೀಜವನ್ನು ಏಕೆ ಬಿತ್ತುತ್ತಿದ್ದೀರಿ. ನಾನು ಶೇರ್ ಮಾಡಿರುವ ಈ ಚಿತ್ರಗಳನ್ನು ಸರಿಯಾಗಿ ನೋಡಿ. ನಿಮ್ಮ ಪಕ್ಷದವರು, ನಿಮ್ಮ ನಾಯಕರು..ನಿಮ್ಮ ಜೊತೆ ವೇದಿಕೆ ಹಂಚಿಕೊಂಡವರು..ಕೆಲ ವರ್ಷಗಳ ಹಿಂದೆ ಟಿಪ್ಪು ಜಯಂತಿ ಆಚರಣೆಯ ವೇಳೆ ಸಂತಸ ಹಂಚಿಕೊಂಡವರು..ಆಗ ನಿಮಗೆ ಸಮಸ್ಯೆ ಇರಲಿಲ್ಲವೇ? ಹಾಗಾದರೆ ಈಗೇನು ಸಮಸ್ಯೆ?, ಚುನಾವಣೆಗಾಗಿ ಹೋರಾಡಲು ಕೋಮು ದ್ವೇಷ ಹರಡುವುದು ಬಿಟ್ಟು ನಿಮಗೆ ಬೇರೆ ಯಾವುದೇ ಒಳ್ಳೆಯ ವಿಷಯವಿಲ್ಲವೇ?..ಅಗೈನ್ ಜಸ್ಟ್ ಫಾರ್ ಆಸ್ಕಿಂಗ್” ಎಂದು ಪ್ರಕಾಶ್ ರೈ ತಮ್ಮ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.

ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ದೇಶದಲ್ಲಿ ಶ್ರೀರಾಮ, ಹನುಮಂತನನ್ನು ಆರಾಧಿಸಲಾಗುತ್ತದೆ. ಆದರೆ ಕರ್ನಾಟಕ ಸರ್ಕಾರ ಟಿಪ್ಪು ಸುಲ್ತಾನ್ ನನ್ನು ಆರಾಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಟಿಪ್ಪು ಆರಾಧಕರು ಅಧಿಕಾರಕ್ಕೆ ಬರಬಾರದು ಎಂದು ಹೇಳಿದ್ದರು. ಇದನ್ನೇ ಹಿನ್ನಲೆಯಾಗಿಟ್ಟುಕೊಂಡು ನಟ ಪ್ರಕಾಶ್ ರೈ ಮತ್ತೊಮ್ಮೆ ಬಿಜೆಪಿ ಕಾಲೆಳೆದಿದ್ದಾರೆ.

Comments are closed.