ಅಂತರಾಷ್ಟ್ರೀಯ

​ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಘೋಷಣೆ ಖಂಡಿಸುವ ಕರಡು ನಿರ್ಣಯಕ್ಕೆ ಭಾರತ ಸೇರಿದಂತೆ 128 ದೇಶಗಳ ಮತ; ದೊಡ್ಡಣ್ಣನಿಗೆ ಭಾರಿ ಮುಖಭಂಗ

Pinterest LinkedIn Tumblr

ವಿಶ್ವಸಂಸ್ಥೆ: ಜೆರುಸಲೇಂ ನಗರವನ್ನು ಇಸ್ರೇಲ್‌ನ ರಾಜಧಾನಿಯಾಗಿ ಮಾನ್ಯ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಖಂಡಿಸುವ ಕರಡು ನಿರ್ಣಯವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮತ ಹಾಕಲಾಯಿತು.

ನಿರ್ಣಯದ ಪರವಾಗಿ ಭಾರತ ಸೇರಿದಂತೆ 128 ದೇಶಗಳು ಮತ ಚಲಾಯಿಸಿದ್ದು, ವಿರುದ್ಧವಾಗಿ ಕೇವಲ 9 ಮತ ಚಲಾವಣೆಯಾಗಿದೆ. 35 ದೇಶಗಳು ಮತದಾನದಿಂದ ಹೊರಗುಳಿದವು. ಇದರಿಂದ ಟ್ರಂಪ್‌ಗೆ ತೀವ್ರ ಮುಖಭಂಗವಾಗಿದೆ.

ನಿರ್ಣಯದ ಪರವಾಗಿ ಮತ ಚಲಾಯಿಸಿದ ದೇಶಗಳಿಗೆ ಅಮೆರಿಕದ ನೆರವು ಸ್ಥಗಿತಗೊಳಿಸಲಾಗುವುದು ಎಂಬ ಟ್ರಂಪ್ ಬೆದರಿಕೆಯನ್ನೂ ಲೆಕ್ಕಿಸದೇ ಕರಡು ನಿರ್ಣಯದ ಪರವಾಗಿ ಮತ ಚಲಾಯಿಸಿದ ದೇಶಗಳು ಅಮೆರಿಕದ ಅಧ್ಯಕ್ಷರ ಬೆದರಿಕೆಗೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

“ನಾವು ಯಾರಿಗೆ ನೆರವು ನೀಡಿದ್ದೇವೆಯೋ ಅವರು ನಮ್ಮನ್ನು ಗುರಿ ಮಾಡುವುದಿಲ್ಲ ಎಂಬ ವಿಶ್ವಾಸವಿದೆ” ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹಾಲೆ ಹೇಳಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ಸ್ಪಷ್ಟ ಎಚ್ಚರಿಕೆ ನೀಡಿದ್ದರು.

ಅಮೆರಿಕ ತನ್ನ ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸುವ ಕರಡು ನಿರ್ಣಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹಾಲೆ ವಿಟೊ ಚಲಾಯಿಸಿದ್ದರು.

ಭಾರತ ಕೂಡಾ ಕರಡು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದು, ಪ್ಯಾಲಸ್ತೀನ್ ಬಗೆಗಿನ ನಿರ್ಧಾರ “ಸ್ವತಂತ್ರ ಹಾಗೂ ಅಚಲ”. ಇದು ನಮ್ಮ ದೃಷ್ಟಿಕೋನ ಹಾಗೂ ಹಿತಾಸಕ್ತಿಯಿಂದ ರೂಪಿತವಾಗಿದೆಯೇ ವಿನಃ ಯಾವುದೇ ಮೂರನೇ ದೇಶದಿಂದ ನಿರ್ಧರಿತವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ ಭಾರತ, ಅಮೆರಿಕ ಹಾಗೂ ಇಸ್ರೇಲ್‌ಗೆ ನಿಕಟವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಕಠಿಣ ನಿರ್ಧಾರ ಕೈಗೊಂಡಿರುವುದು ರಾಜತಾಂತ್ರಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.

Comments are closed.