ಕರ್ನಾಟಕ

ಮಂಡೆ ಬಿಸಿ ಮಾಡಿದ ಟ್ರಾಫಿಕ್‌ ಜಾಮ್‌!

Pinterest LinkedIn Tumblr


ಬೆಂಗಳೂರು: ಈ ವಾರದ ಮೊದಲ ದಿನ ನಗರದಲ್ಲಿ ಟ್ರಾಫಿಕ್‌ ತಲೆಬಿಸಿ ಕೊಂಚ ಹೆಚ್ಚೇ ಇತ್ತು. ಪೀಕ್‌ ಹವರ್‌ಗಳಲ್ಲಿ ಇದು ಮಾಮೂಲಿಯೇ ಆದರೂ ಸೋಮವಾರ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶದ ಪರಿಣಾಮ ಭಾರೀ ಟ್ರಾಫಿಕ್‌ ಜಾಮ್‌ ಆಗಿತ್ತು.

ನಗರದ ರೈಲು ನಿಲ್ದಾಣ, ಗೂಡ್ಸ್‌ಶೆಡ್‌ ರಸ್ತೆ, ಮೆಜೆಸ್ಟಿಕ್‌, ಕೆ.ಜಿ.ರಸ್ತೆ, ಆನಂದ್‌ ರಾವ್‌ ವೃತ್ತ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಸಾವಿರಾರು ವಾಹನಗಳು ಗಂಟೆಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಆಕಸ್ಮಿಕವಾಗಿ ಉಂಟಾದ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ವಾಹನವಾರರು ರಸ್ತೆಯಲ್ಲಿ ನಿಂತು ಕಾದು, ಕಾದು ಹೈರಾಣಾದರು. ಇಷ್ಟು ದಿನ ನಿಗದಿತ ಸಮಯಕ್ಕೆ ಬಸ್‌ ಪ್ರಯಾಣದಲ್ಲಿಯೇ ಕಚೇರಿ ತಲುಪುತ್ತಿದ್ದವರು, ಸೋಮವಾರ ಗಂಟೆ ತಡವಾಗಿ ಕಚೇರಿಗೆ ಹೋಗಬೇಕಾಯಿತು.

ದಿನವಿಡೀ ಉಂಟಾದ ಟ್ರಾಫಿಕ್‌ ಜಾಮ್‌ನಿಂದಾಗಿ ಬಸ್‌, ಆಟೋ, ಕಾರು, ಬೈಕ್‌, ಲಾರಿ ಸೇರಿದಂತೆ ಅಸಂಖ್ಯ ವಾಹನಗಳು ಕಿಲೋಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಪ್ರಯಾಣ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದರಿಂದ ಸುಡುವ ಬಿಸಿಲಿಗೆ ವಾಹನ ಸವಾರರ ಪರದಾಟ ಒಂದೆಡೆಯಾದರೆ, ಪ್ರಯಾಣಿಕರು ಬಸ್‌, ಕಾರುಗಳಲ್ಲಿಯೇ ಬೆವೆತುಹೋದರು.

10 ಸಾವಿರ ಮಂದಿ ಭಾಗಿ: ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟ ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ಜನ ಆಗಮಿಸಿದ್ದರು.

ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಮಂದಿ ಮೆಜೆಸ್ಟಿಕ್‌ ಮಾರ್ಗದಿಂದ ಆಗಮಿಸಿದ್ದರು. ರಸ್ತೆಯ ಪೂರ್ಣಭಾಗದಲ್ಲಿ ಜಾಥಾ ಹೊರಟಿತ್ತು. ಹೀಗಾಗಿ ವಾಹನಗಳ ಸಂಚಾರಕ್ಕೆ ಸರಿಯಾಗಿ ಅವಕಾಶವಿಲ್ಲದಂತಾಗಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಯಿತು ಎಂದು ಟ್ರಾಫಿಕ್‌ ಪೊಲೀಸರು ಅಭಿಪ್ರಾಯಪಡುತ್ತಾರೆ. ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಕ್ಕ-ಪಕ್ಕದ ಜಿಲ್ಲೆಗಳ ಸಂಘಟನೆಗಳ ಕಾರ್ಯಕರ್ತರು ತಂಡೋಪತಂಡವಾಗಿ,

ಬೈಕ್‌ ಹಾಗೂ ಕಾರುಗಳಲ್ಲಿಯೂ ಆಗಮಿಸಿದ್ದರು. ಹೀಗಾಗಿ ರಸ್ತೆಗಳಲ್ಲಿ ಅಧಿಕ ವಾಹನಗಳು ಜಮಾವಣೆಗೊಂಡವು. ಪ್ರತಿಭಟನಾ ಮೆರವಣಿಗೆ ಅಂಗವಾಗಿ ಟ್ರಾಫಿಕ್‌ ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ, ನಿರೀಕ್ಷೆಗಿಂತ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಟ್ರಾಫಿಕ್‌ ನಿಯಂತ್ರಣ ಕಷ್ಟವಾಯಿತು ಎಂದು ಪಶ್ಚಿಮ ವಿಭಾಗದ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಸಮಾವೇಶ ಪೂರ್ಣಗೊಂಡ ಬಳಿಕ ವಾಪಾಸ್‌ ಊರುಗಳಿಗೆ ತೆರಳಲು ಬೈಕ್‌, ಕಾರುಗಳಲ್ಲಿ ಆಯಾ ಜಿಲ್ಲೆಗಳ ರಸ್ತೆ ಮಾರ್ಗಗಳಲ್ಲಿ ಸಾವಿರಾರು ವಾಹನಗಳು ತೆರಳಿದ ಪರಿಣಾಮ ಸಂಜೆಯೂ ಟ್ರಾಫಿಕ್‌ ಜಾಮ್‌ ಪುನರಾವರ್ತನೆಗೊಂಡಿತು. ಕಾರ್ಪೋರೇಷನ್‌ ವೃತ್ತ , ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಎಂ.ಜಿ ರೋಡ್‌, ಹಳೆ ಮದ್ರಾಸ್‌ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಸಾಮಾನ್ಯವಾಗಿ ಊರುಗಳಿಗೆ ತೆರಳಿದ್ದ ಉದ್ಯೋಗಿಗಳು ರಜೆ ಮುಗಿಸಿಕೊಂಡು ಪ್ರತಿ ಸೋಮವಾರ ಬೈಕ್‌ ಹಾಗೂ ಕಾರುಗಳಲ್ಲಿಯೇ ವಾಪಾಸ್‌ ಬರುವುದರಿಂದ ವಾರದ ಮೊದಲ ದಿನ ಟ್ರಾಫಿಕ್‌ ಜಾಮ್‌ ಮಾಮೂಲಿ ದಿನಗಳಿಂತ ಹೆಚ್ಚಿರುತ್ತದೆ. ಆದರೆ, ಸೋಮವಾರ ಸಮಾವೇಶಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರಿಂದ ಫ್ರೀಡಂ ಪಾರ್ಕ್‌ ಸುತ್ತಮುತ್ತಲ ಭಾಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು ಎಂದು ಟ್ರಾಫಿಕ್‌ ಪೊಲೀಸರು ಅಭಿಪ್ರಾಯಪಟ್ಟರು.

ದಟ್ಟಣೆ ನಿವಾರಣೆಗೆ ಪೊಲೀಸರ ಪರದಾಟ!: ಸಮಾವೇಶದಲ್ಲಿ ಪಾಲ್ಗೊಂಡವರು ಫ್ರೀಡಂ ಪಾರ್ಕ್‌ ಸುತ್ತಮುತ್ತಲ ರಸ್ತೆಗಳಲ್ಲಿ ಕಿಕ್ಕಿರಿದು ತುಂಬಿದ್ದರು. ಹೀಗಾಗಿ ಸಂಚಾರ ದಟ್ಟಣೆ ಮಾಮೂಲಿ ದಿನಗಳಿಗಿಂತ ಮೂರು ಪಟ್ಟು ದುಪ್ಪಟ್ಟಾಗಿತ್ತು. ಅಲ್ಲಿಂದ ಬೇರೆ ಮಾರ್ಗಗಳ ರಸ್ತೆಗಳು ಕಿರಿದಾಗಿದ್ದರಿಂದ, ಮುಖ್ಯರಸ್ತೆಯಲ್ಲಿಯೇ ವಾಹನ ಸವಾರರು ಗಂಟೆಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಭಾರೀ ಟ್ರಾಫಿಕ್‌ ಜಾಮ್‌ ಕಂಟ್ರೋಲ್‌ ಮಾಡಲು ಸಂಚಾರ ಪೊಲೀಸರು ಹರಸಾಹಸಪಡುತ್ತಿದ್ದರು. ಬಿಸಿಲಿನ ಝಳದ ಜೊತೆಗೆ ಟ್ರಾಫಿಕ್‌ ಬಿಸಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.

ಮೇಕ್ರಿ ವೃತ್ತದಲ್ಲೂ ಭಾರಿ ಜಾಮ್‌: ಮತ್ತೂಂದೆಡೆ ಮೇಕ್ರೀ ವೃತ್ತದ ಮಾರ್ಗದಲ್ಲಿಯೂ ಪ್ರತಿದಿನದ ಟ್ರಾಫಿಕ್‌ಗಿಂದ ಸೋಮವಾರ ಎರಡು ಪಟ್ಟು ಟ್ರಾಫಿಕ್‌ ಹೆಚ್ಚಾಗಿತ್ತು. ಅರ್ಧ ಕಿಲೋಮೀಟರ್‌ ಪ್ರಯಾಣಕ್ಕೂ 45ನಿಮಿಷ ಕಾಯುವ ಅನಿವಾರ್ಯತೆ ಎದುರಾಗಿತ್ತು. ಟ್ರಾಫಿಕ್‌ ಜಾಮ್‌ ತಪ್ಪಿಸಿಕೊಳ್ಳಲು ಪರ್ಯಾಯ ರಸ್ತೆಗಳಲ್ಲಿ ಪ್ರಯಾಣ ಮಾಡಲು ಮುಂದಾದವರಿಗೂ ಎಲ್ಲಾ ಭಾಗದಲ್ಲಿಯೂ ಟ್ರಾಫಿಕ್‌ ಕಿರಿ ಕಿರಿ ಉಂಟಾಗಿತ್ತು.

-ಉದಯವಾಣಿ

Comments are closed.