ಹೊನ್ನಾವರ: ಪಟ್ಟಣದಲ್ಲಿ ಬುಧವಾರ ಕೋಮು ಘರ್ಷಣೆ ನಡೆದಾಗ ನಾಪತ್ತೆಯಾಗಿದ್ದ ಹಿಂದೂ ಯುವಕನೊಬ್ಬ ಶುಕ್ರವಾರ ಶವವಾಗಿ ಕೆರೆಯೊಂದರಲ್ಲಿ ಪತ್ತೆಯಾಗಿದ್ದಾನೆ.
19 ವರ್ಷ ಪ್ರಾಯದ ಪರಮೇಶ್ ಮೇಸ್ತ ಎಂಬ ಯುವಕ ನ ಶವ ಕೈಕಾಲು ಕಟ್ಟಿದ ರೀತಿಯಲ್ಲಿ ಶನಿ ದೇವಾಲಯದ ಕೆರೆಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ.
ಹೊನ್ನಾವರ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮೇಲಕ್ಕೆತ್ತಿದ್ದು ತನಿಖೆ ನಡೆಸುತ್ತಿದ್ದಾರೆ.
ಪರಮೇಶ್ನನ್ನು ಬರ್ಬರವಾಗಿ ಹತ್ಯೆಗೈದು ತಂದು ಕೆರೆಯಲ್ಲಿ ಎಸೆಯಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹೊನ್ನಾವರ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ , ಸಿ.ಟಿ.ರವಿ ಅವರು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
‘ಹೊನ್ನಾವರ ಕೋಮುಗಲಭೆಯಲ್ಲಿ ಪರೇಶ ಮೇಸ್ತನ ಕೊಲೆಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕೊಲೆಯಾದ ಎರಡು ದಿನದ ನಂತರ ಶವ ಪತ್ತೆಯಾಗಿದೆ ಅಂದರೆ ಈ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ಅರ್ಥವಾಗುತ್ತದೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೆಷ್ಟು ಕಾರ್ಯಕರ್ತರು ಬಲಿಯಾಗಬೇಕೊ? ” ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
-ಉದಯವಾಣಿ