ಕರ್ನಾಟಕ

ಟಿಪ್ಪು ಜಯಂತಿ ವೇಳೆ ಘರ್ಷಣೆ: ಕಲ್ಲು ತೂರಾಟ, ಲಾಠಿ ಚಾರ್ಜ್‌

Pinterest LinkedIn Tumblr


ಇಳಕಲ್ಲ(ಬಾಗಲಕೋಟೆ): ಇಲ್ಲಿನ ಅಂಜುಮನ್‌ ಇಸ್ಲಾಂ ಸಂಸ್ಥೆ ಕರೆ ನೀಡಿದ್ದ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಸಂಬಂಧ ಪೊಲೀಸ್‌ ಮತ್ತು ಸಂಘಟಕರ ಮಧ್ಯೆ ನಡೆದ ಮಾತಿನ ಚಕಮಕಿ ಗಲಭೆ ರೂಪಕ್ಕೆ ತಿರುಗಿ ಕಲ್ಲು ತೂರಾಟ ಹಾಗೂ ಲಾಠಿ ಚಾರ್ಜ್‌ ನಡೆಯಿತು.

ಉಸ್ಮಾನ ಗಣಿ ಹುಮನಾಬಾದ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ನ.3ರಂದು ಮಧ್ಯಾಹ್ನ ನಗರದ ಅಂಬೇಡ್ಕರ್‌ ವೃತ್ತದಿಂದ ಅಂಬೇಡ್ಕರ್‌ ಭವನದವರೆಗೆ ಆಯೋಜಿಸಿದ್ದ ಟಿಪ್ಪು ಸುಲ್ತಾನ್‌ ಮೆರವಣಿಗೆ ಹಾಗೂ ಸಭೆಯನ್ನು ತಡೆದು, ಶಾಂತಿ ಕಾಪಾಡುವ ದೃಷ್ಟಿಯಿಂದ ಸಂಘಟನೆ ನೇತೃತ್ವ ವಹಿಸಿದ್ದ ಉಸ್ಮಾನಗಣಿ ಹುಮನಾಬಾದ, ಯುನೂಸ್‌ ಮುದಗಲ್ಲ, ಮಹಮ್ಮದ ಯೂಸೂಫ್‌ ಬಾಗವಾನ, ಜಬ್ಟಾರ ಕಲಬುರ್ಗಿ, ನಾಸೀರ್‌ ಕರ್ನೂಲ ಹಾಗೂ ಇತರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದರಿಂದ ರೊಚ್ಚಿಗೆದ್ದ ಜನರು ಗಾಂಧಿ ಚೌಕ್‌ದಲ್ಲಿ ಜಮಾಯಿಸಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದೇ ವೇಳೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ಗಂಭೀರತೆ ಅರಿತ ಎಎಸ್‌ಪಿ ಲಕ್ಷ್ಮೀ ಪ್ರಸಾದ್‌ ಜನರನ್ನು ನಿಯಂತ್ರಿಸಲು ಲಾಠಿ ಚಾರ್ಜ್‌ಗೆ ಆದೇಶಿಸಿದರು. ಇದರಿಂದಾಗಿ ಇಬ್ಬರು ಪೊಲೀಸರಿಗೆ ಹಾಗೂ ವ್ಯಕ್ತಿಯೊಬ್ಬನಿಗೆ ಗಾಯಗಳಾಗಿವೆ. ಇಷ್ಟಾದರೂ ಸಂಘಟಕರು ಅಂಬೇಡ್ಕರ್‌ ವೃತ್ತದಿಂದ ಟಿಪ್ಪು ವೃತ್ತದವರೆಗೆ ಮೆರವಣಿಗೆ ನಡೆಸಿ ವೃತ್ತಕ್ಕೆ ಮಾಲಾರ್ಪಣೆ ಮಾಡಿದರು. ನಂತರ ಸಯ್ಯದ ಮುರ್ತುಜಾ ಖಾದರಿ ದರ್ಗಾದ ಬಯಲಿನಲ್ಲಿ ಸಂಘಟಕರೊಂದಿಗೆ ಪೊಲೀಸ್‌ ಅಧಿಕಾರಿಗಳು ಶಾಂತಿ ಕಾಪಾಡಲು ಮನವಿ ಮಾಡಿದರು. ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.

-ಉದಯವಾಣಿ

Comments are closed.