ರಾಷ್ಟ್ರೀಯ

ಉತ್ತರ ಕೊರಿಯಾ: ಮಾಂಸ ಆಹಾರದ ಹಂಬಲ ನೀಗಿಸಲು ಸೊಯಬೀನ್‌ಗೆ ಮೊರೆ

Pinterest LinkedIn Tumblr


ಹೊಸದಿಲ್ಲಿ: ಅಮೆರಿಕದಂತಹ ಬಲಾಢ್ಯ ರಾಷ್ಟ್ರದ ವಿರುದ್ಧ ತೊಡೆತಟ್ಟಿ ನಿಂತಿರುವ ಸರ್ವಾಧಿಕಾರಿ ಕಿಮ್‌ ಜಂಗ್‌ ಉನ್‌ ನೇತೃತ್ವದ ಉತ್ತರ ಕೊರಿಯಾದಲ್ಲಿ ಈತ ತುತ್ತು ಅನ್ನಕ್ಕೂ ತತ್ವಾರ ಶುರುವಾಗಿದೆ ಎನ್ನುವ ಕಳವಳಕಾರಿ ವರದಿಗಳು ಪ್ರಕಟಗೊಂಡಿವೆ.

ವಿಶೇಷವಾಗಿ, ಮಾಂಸ ಇಲ್ಲಿನ ಜನರ ಬಹುಮುಖ್ಯ ಆಹಾರ. ಈ ಮುಖ್ಯ ಆಹಾರ ಪೂರೈಕೆಯಲ್ಲಿಯೇ ದೊಡ್ಡ ಕೊರತೆ ಕಾಣಿಸಿದ್ದು ಹಸಿದ ಹೊಟ್ಟೆಯ ಜನ ಹಾಹಾಕಾರ ಏಳುವ ಸನ್ನಿವೇಶ ಎದುರಾಗಿದೆ.

ಯಾರ ಮರ್ಜಿಗೂ ಮಣಿಯದೇ ಸರಣಿಯೋಪಾದಿ ಅಣುಬಾಂಬ್‌ ಮತ್ತು ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವ ಮೂಲಕ ಉತ್ತರ ಕೊರಿಯಾವು ವಿಶ್ವಸಂಸ್ಥೆಯ ಕೆಂಗಣಿಗೆ ಗುರಿಯಾಗಿತ್ತು. ಕಠಿಣ ದಿಗ್ಬಂಧನಕ್ಕೂ ಒಳಗಾಗಿದೆ. ಇದಾದ ಬಳಿಕ ದೇಶದ ಆಂತರಿಕ ವ್ಯವಸ್ಥೆ ಅಧ್ವಾನಗೊಂಡಿದ್ದು ಆಹಾರ ಕೊರತೆಗೆ ದಾರಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮಾಂಸ ಆಹಾರ ಇಲ್ಲದೇ ಕಂಗಾಲಾಗಿರುವ ಜನರನ್ನು ಸಂತೈಸಲು ಅಲ್ಲಿನ ಸರಕಾರ ಕೃತಕ ಮಾಂಸದ ಮೊರೆ ಹೋಗಿದೆ. ಸೊಯಬೀನ್‌ ಸಂಸ್ಕರಿತ ಕೃತಕ ಮಾಂಸ ಸದ್ಯಕ್ಕೆ ಕೊರಿಯನ್ನರ ಹಸಿವು ನೀಗಿಸುತ್ತಿದೆ. ಆದರೆ ಈ ವ್ಯವಸ್ಥೆ ಅದೆಷ್ಟು ದಿನ ಮುಂದುವರಿಯಬಹುದು ಎನ್ನುವ ವಿಷಯದಲ್ಲಿ ತಜ್ಞರನ್ನು ದಟ್ಟ ಅನುಮಾನಗಳು ಕಾಡತೊಡಗಿವೆ.

ಸಾರ್ವಜನಿಕ ಪಡಿತರ: ದೇಶದ ಜನಸಂಖ್ಯೆಯ ಶೇ.70ರಷ್ಟು ಜನರಿಗೆ ರೇಷನ್‌ ಕೂಪನ್‌ ಖಾತರಿಗೊಳಿಸುವ ‘ಸಾರ್ವಜನಿಕ ಪಡಿತರ ವ್ಯವಸ್ಥೆ’ (ಪಿಡಿಎಸ್‌) ಅಸ್ತಿತ್ವದಲ್ಲಿರುವ ಹೊರತಾಗಿಯೂ ಉತ್ತರ ಕೊರಿಯಾದ ಶೇ.61ರಷ್ಟು ಮಂದಿ ಈಗಲೂ ತಮ್ಮ ಅತೀ ಪ್ರಮುಖ ಆಹಾರ ಮೂಲವಾಗಿ ಅನೌಪಚಾರಿಕ, ಖಾಸಗಿ ಮಾರುಕಟ್ಟೆಗಳನ್ನೇ ಅವಲಂಬಿಸಿದ್ದಾರೆ. ದೇಶಾದ್ಯಂತ ಜನ ಸೇವಿಸುವ ಆಹಾರದಲ್ಲಿ ಶೇಕಡ 23.5ರಷ್ಟು ಮಾತ್ರ ‘ಪಿಡಿಎಸ್‌’ನಂತರ ಅಧಿಕೃತ ಆಹಾರ ಸರಬರಾಜು ವ್ಯವಸ್ಥೆಗಳಲ್ಲಿ ವಿತರಣೆಯಾಗುತ್ತದೆ ಎಂದು ಗುಪ್ತ ಸರ್ವೇಯೊಂದು ಹೇಳಿದೆ.

ಈ ಖಾಸಗಿ ಮಾರುಕಟ್ಟೆಗಳು ವ್ಯವಸ್ಥಿತ ‘ಸ್ಟ್ರೀಟ್‌ ಫುಡ್‌ (ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಆಹಾರ) ಸಂಸ್ಕೃತಿ’ಯನ್ನು ಹೊಂದಿದ್ದು, ಉತ್ತರ ಕೊರಿಯಾದವರಿಗೆ ಇದೇ ಪ್ರಮುಖ ಆಹಾರ ಪದ್ಧತಿಯಾಗಿ ಮಾರ್ಪಟ್ಟಿದೆ. ‘ಇಂಜೊಗೊಗಿ’ಯಿಂದ ಮೊದಲ್ಗೊಂಡು ಸ್ಪೀಡ್‌ ಕೇಕ್‌-ಜೋಳದ ಸಿಹಿ (ಇದನ್ನು ಬೇಯಿಸುವ ಅಗತ್ಯವಿಲ್ಲ) ತನಕದ ಎಲ್ಲ ತಿಂಡಿಗಳಲ್ಲಿ ಸಾಕಷ್ಟು ಪ್ರೊಟೀನ್‌ ಹಾಗೂ ಫೈಬರ್‌ ಅಂಶಗಳಿದ್ದು ಸ್ನಾಯು ಬೆಳವಣಿಗೆಗೆ ನೆರವಾಗುವುದರ ಜತೆಗೆ ಹಸಿವೆಯನ್ನೂ ದೂರ ಇಡುತ್ತವೆ. ಇದನ್ನೇ ಅಲ್ಲಿನ ಜನ ಮಾಂಸಕ್ಕೆ ಪರ್ಯಾಯವೆಂದು ಪರಿಗಣಿಸಿದ್ದಾರೆ.

ಇದರಿಂದಾಗಿ ಬಹುತೇಕರು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ವರದಿಗಳು ಬಂದಿವೆ. 2009ರಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ, ಉತ್ತರ ಕೊರಿಯಾದಲ್ಲಿ, ಇನ್ನೂ ಶಾಲೆಗೆ ದಾಖಲಾಗದ ಮಕ್ಕಳು ದಾಯಾದಿ ರಾಷ್ಟ್ರ ದಕ್ಷಿಣ ಕೊರಿಯಾದ ಮಕ್ಕಳಿಗಿಂತ 13 ಸೆಂ.ಮೀ. ಕುಳ್ಳಗೆ ಹಾಗೂ 7 ಕೆ.ಜಿಯಷ್ಟು ಹಗುರವಿರುವುದು ಬೆಳಕಿಗೆ ಬಂದಿದೆ.

ಉತ್ತರ ಕೊರಿಯಾದವರು ಮುಖ್ಯವಾಗಿ ಅಕ್ಕಿ, ಜೋಳ, ಕಿಮ್ಚಿ ಹಾಗೂ ಹುರುಳಿ ಪೇಸ್ಟ್‌ನಂತಹ ಒಂದೇ ರೀತಿಯ ಆಹಾರ ಸೇವಿಸುತ್ತಾ ಬಂದಿದ್ದು, ಕೊಬ್ಬು ಮತ್ತು ಪ್ರೊಟೀನ್‌ನಂತ ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ ಎನ್ನುತ್ತಿದೆ ವಿಶ್ವ ಸಂಸ್ಥೆಯ ಫುಡ್‌ ಏಜೆನ್ಸಿ.

2011ರಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದ್ದ ‘ಸರ್ವಾಧಿಕಾರಿ’ ಕಿಮ್‌ ಜಂಗ್‌ ಖಾಸಗಿ ವ್ಯಾಪಾರದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದ್ದ. ಆದರೆ ಆಂತರಿಕ ಸುಧಾರಣೆಗಳ ಹೊರತಾಗಿಯೂ ಆತ ಮುಂದುವರೆಸಿದ ಹುಚ್ಚಾಟಗಳಿಂದ ಜನರ ಹಸಿವಿನ ಬವಣೆ ಹೆಚ್ಚುತ್ತಾ ಹೋಯಿತು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇಷ್ಟೆಲ್ಲ ವ್ಯತಿರಿಕ್ತ ಪರಿಸ್ಥಿತಿಯ ನಡುವೆಯೂ ಕಿಮ್‌ನ ಆಪ್ತ ಬಳಗಕ್ಕೆ ಮಾತ್ರ ಮಾಂಸ ಖಾದ್ಯಗಳ ಕೊರತೆಯಾಗಿಲ್ಲ ಎಂದು ಖಾಸಗಿ ಗುಪ್ತಚರ ಮಾಹಿತಿಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿ ಪೊಂಗ್ಯಾಂಗ್‌ನಲ್ಲಿರುವ ಸರಕಾರಿ ಒಡೆತನದ ರೆಸ್ಟೊರೆಂಟ್‌ಗಳಲ್ಲಿ ಪೆಪೆರೋನಿ ಪಿಜ್ಜಾ (ದನದ ಮಾಂಸ ಅಥವಾ ಹಂದಿ ಮಾಂಸದ ಒಂದು ಬಗೆಯ ಭಕ್ಷ್ಯ) ಹಾಗೂ ನೂಡಲ್ಸ್‌ನಂತಹ ರುಚಿರುಚಿಯ ಭಕ್ಷ್ಯಗಳನ್ನು ಮೆಲ್ಲುವ ಪರಿಪಾಠವನ್ನು ಕಿಮ್‌ ಬಂಟರು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Comments are closed.