ಇಸ್ರೇಲ್: ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಿಂದ ಇಸ್ರೇಲ್‌ಗೆ ಪ್ರಯಾಣಿಸುತ್ತಿದ್ದ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಸಂಘರ್ಷದ ವೇಳೆ, ಸಹ-ಪೈಲಟ್‌ನಿಂದ ನಡೆದ ವಿಮಾನ ವಿಧ್ವಂಸಕ ಕೃತ್ಯದ ಪ್ರಯತ್ನವನ್ನು ತಡೆಗಟ್ಟಿದ್ದು ‘ಫ್ಲೈದುಬೈ’ ಸಂಸ್ಥೆಯ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಎಂದು ಗುರುತಿಸಲಾಗಿದೆ.

ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು (ವಿಧ್ವಂಸಕ ಕೃತ್ಯ ನಡೆಸಲು) ಯತ್ನಿಸಿದ ಸಹ-ಪೈಲಟ್‌ನನ್ನು ಕ್ಯಾಪ್ಟನ್ ಮಚ್ಚಾರ್ ಎದುರಿಸಿ ತಡೆದರು ಮತ್ತು ದುಬೈ-ಟೆಲ್ ಅವಿವ್ ವಿಮಾನದಲ್ಲಿದ್ದ 180 ಪ್ರಯಾಣಿಕರ ಪ್ರಾಣವನ್ನು ಉಳಿಸಿದರು.
ಮೊದಲಿಗೆ ಈ ಘರ್ಷಣೆಯು ವಿಮಾನ ಅಪಹರಣದ ಆತಂಕವನ್ನು ಹುಟ್ಟುಹಾಕಿತಾದರೂ, ಆ ಸಾಧ್ಯತೆಯನ್ನು ತಳ್ಳಿಹಾಕಲಾಯಿತು. ಇತರ ಪೈಲಟ್‌ಗಳು ಕಾಕ್‌ಪಿಟ್‌ನ ನಿಯಂತ್ರಣವನ್ನು ವಹಿಸಿಕೊಂಡು, ವಿಮಾನವನ್ನು ಸೌದಿ ಅರೇಬಿಯಾದ ಬೇರೊಂದು ಸ್ಥಳಕ್ಕೆ ಸುರಕ್ಷಿತವಾಗಿ ಇಳಿಸಿದರು.
ಮೋದಿ ಶ್ಲಾಘನೆ: ದುಬೈ-ಟೆಲ್ ಅವಿವ್ ಮಾರ್ಗದ ಫೈದುಬೈ ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿದ ಸಹಪೈಲಟ್‌ನೊಂದಿಗೆ ಹೋರಾಡಿ, ನೂರಾರು ಪ್ರಯಾಣಿಕರ ಜೀವ ಉಳಿಸಲು ನೆರವಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ‘ಕ್ಯಾಪ್ಟನ್ ಮಚ್ಚರ್ ಬಗ್ಗೆ ಭಾರತ ಹೆಮ್ಮೆಪಡುತ್ತದೆ’ ಎಂದು ಅವರು ಹೇಳಿದ್ದಾರೆ.
‘ಅತ್ಯಂತ ಗಂಭೀರ ಅಪಾಯ ಎದುರಿಸುತ್ತಿದ್ದರೂ, ಗಂಭೀರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅಪಾರ ಧೈರ್ಯ ಮತ್ತು ಇತರರ ಜೀವಗಳನ್ನು ರಕ್ಷಿಸುವ ಅಚಲ ಸಂಕಲ್ಪ ತೋರಿಸಿದ್ದಾರೆ. ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಹಾಗೂ ದೊಡ್ಡ ದುರಂತವನ್ನು ತಪ್ಪಿಸಲು ನೆರವಾಗಿದೆ. ಕ್ಯಾಪ್ಟನ್ ಮಚ್ಚರ್ ಬಗ್ಗೆ ಭಾರತ ಹೆಮ್ಮೆಪಡುತ್ತದೆ’ ಎಂದು ಮೋದಿ ಎಕ್ಸ‌್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಚ್ಚರ್ ಅವರು ಶೀಘ್ರ ಚೇತರಿಸಿಕೊಂಡು, ಉತ್ತಮ ಆರೋಗ್ಯ ಹೊಂದಲಿ ಎಂದು ಮೋದಿ ಹಾರೈಸಿದ್ದಾರೆ.
Comments are closed.