ಕರ್ನಾಟಕ

ಮಂತ್ರಿಮಾಲ್ ಅವಘಡ: ಎಫ್’ಐಆರ್’ನಲ್ಲಿ ಮಾಲೀಕ, ಸಿಇಓ ಹೆಸರಿಲ್ಲ!

Pinterest LinkedIn Tumblr


ಬೆಂಗಳೂರು(ಜ. 17): ಗೋಡೆ ಕುಸಿದು ಇಡೀ ಕಟ್ಟಡ ಅಪಾಯಕ್ಕೆ ಸಿಲುಕಿದ್ದರೂ, ಇಬ್ಬರು ಗಾಯಗೊಂಡಿದ್ದರೂ ಮಂತ್ರಿಮಾಲ್ ವಿರುದ್ಧ ಪೊಲೀಸರು ಗಂಭೀರವಾದ ಆರೋಪ ದಾಖಲಿಸಿಕೊಳ್ಳಲು ವಿಫಲರಾಗಿದ್ದಾರೆ. ಸಾರ್ವಜನಿಕರ ಜೀವ ರಕ್ಷಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 337 ಅಡಿಯಲ್ಲಿ ಮಂತ್ರಿ ಮಾಲ್ ಮೇಲೆ ಎಫ್”ಐಆರ್ ಮಾತ್ರ ದಾಖಲಿಸಲಾಗಿದೆ. ಯಶೋಧ ಎಂಬುವರಿಂದ ಹೇಳಿಕೆ ಪಡೆದು ದಾಖಲು ಮಾಡಿರುವ ಎಫ್’ಐಆರ್’ನಲ್ಲಿ ಮಂತ್ರಿಮಾಲ್ ಮಾಲಿಕ ಸುಶೀಲ್ ಮಂತ್ರಿ, ಸಿಇಓ ಆದಿತ್ಯ ಸಿಕ್ರಿ ಅಥವಾ ಆಡಳಿತ ಮಂಡಳಿಯವರ ಹೆಸರೇ ಇಲ್ಲ. ಪೊಲೀಸರಿಗೆ ಮಂತ್ರಿಮಾಲ್ ಮಾಲಿಕರ ಹೆಸರು ತಿಳಿದಿಲ್ಲವೇ? ಅಥವಾ ಬೇಕಂತಲೇ ನಿರ್ಲಕ್ಷ್ಯ ತೋರುತ್ತಿದ್ದಾರೆಯೇ?
ವಾಸ್ತವವಾಗಿ ಮಂತ್ರಿಮಾಲ್’ನಲ್ಲಿ ಗೋಡೆ ಕುಸಿತಕ್ಕೆ ಕಾರಣವಾಗಿದ್ದು ಮಾಲಿಕರ ದಿವ್ಯ ನಿರ್ಲದ್ಷ್ಯ ಧೋರಣೆಯೇ. ಹಿಂಬದಿ ಗೋಡೆ ಬಿರುಕು ಬಿಟ್ಟಿದ್ದರೂ ಮಂತ್ರಿಮಾಲ್’ನ ಮಾಲೀಕ ಮತ್ತು ಸಿಇಓ ಅವರು ಸುಮ್ಮನಿದ್ದರು. ಹೀಗಾಗಿ, ನಿನ್ನೆ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಲ್ಲದೇ, ನಿಯಮ ಉಲ್ಲಂಘಿಸಿ ಮಂತ್ರಿಮಾಲ್ ನಿರ್ಮಾಣವಾಗಿದ್ದು, ಇದರಲ್ಲಿ ಬಿಬಿಎಂಪಿ ಅಧಿಕಾರಿಗಳು ನಿರಪೇಕ್ಷಣ ಪತ್ರ ಹೇಗೆ ನೀಡಿದರು ಎಂಬ ಪ್ರಶ್ನೆ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಜೀವಹಾನಿಯಾಗುವಂತೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಮಂತ್ರಿಮಾಲ್ ಮಾಲೀಕರು, ಸಿಇಓ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 308 ಆರ್/ಡಬ್ಲ್ಯೂ511 ಅಡಿಯಲ್ಲಿ ಎಫ್’ಐಆರ್ ದಾಖಲಿಸಬೇಕಾಗಿತ್ತು. ಆದರೆ, 337 ಸೆಕ್ಷನ್ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಹೆಚ್ಚೆಂದರೆ 6 ತಿಂಗಳು ಸಜೆ ಸಿಗಬಹುದಷ್ಟೇ.

Comments are closed.