ಬೆಂಗಳೂರು: ಅಮಾನ್ಯಗೊಂಡ ನೋಟುಗಳ ₹1.99 ಕೋಟಿಯ ಅಕ್ರಮ ಪರಿವರ್ತನೆ ಸಂಬಂಧ ಸಿಬಿಐ ಅಧಿಕಾರಿಗಳು ಶನಿವಾರ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ)ನ ಬೆಂಗಳೂರು ಕಚೇರಿಯ ಇಬ್ಬರು ವಿಶೇಷ ಸಹಾಯಕರನ್ನು ಬಂಧಿಸಿದ್ದಾರೆ.
ಹಿರಿಯ ವಿಶೇಷ ಸಹಾಯಕ ಸದಾನಂದ ನಾಯ್ಕ ಹಾಗೂ ವಿಶೇಷ ಸಹಾಯಕ ಎ.ಕೆ. ಕೆವಿನ್ ಬಂಧಿತರು. ₹2,000 ಹಾಗೂ ₹100ರ ಮುಖಬೆಲೆಯ ನೋಟುಗಳಿಗೆ, ₹.1.99 ಕೋಟಿ ರದ್ದುಗೊಂಡ ನೋಟುಗಳನ್ನು ಪರಿವರ್ತನೆ ಮಾಡಿ ಸಿಬಿಐ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹಿರಿಯ ವಿಶೇಷ ಸಹಾಯಕ ಸದಾನಂದ ನಾಯ್ಕ ಹಾಗೂ ವಿಶೇಷ ಸಹಾಯಕ ಎ.ಕೆ. ಕೆವಿನ್ ಅವರನ್ನು ಅಕ್ರಮ ಹಣ ವರ್ಗಾವಣೆ ಸಂಬಂಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಬಂಧಿತ ಇಬ್ಬರನ್ನೂ ಸಿಬಿಐ ವಿಶೇಷ ನ್ಯಾಯಾಲಯವು ನಾಲ್ಕುದಿನಗಳ ವರೆಗೆ ಸಿಬಿಐ ಪೊಲೀಸರ ವಶಕ್ಕೆ ನೀಡಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಶಾಖೆಯಲ್ಲಿ ₹ 1.51 ಕೋಟಿ ಕಪ್ಪು ಹಣ ಬಿಳಿ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಆರ್ಬಿಐ ಹಿರಿಯ ವಿಶೇಷ ಸಹಾಯಕ ಕೆ. ಮೈಕಲ್ ಅವರನ್ನು ಸಿಬಿಐ ಈಚೆಗಷ್ಟೆ ಬಂಧಿಸಿದೆ. ಈಗ ಮತ್ತಿಬ್ಬರ ಬಂಧನವಾಗಿದ್ದು, ಆರ್ಬಿಐನ ಮೂವರ ಬಂಧನವಾದಂತಾಗಿದೆ.
Comments are closed.