ನವದೆಹಲಿ (ಡಿ.17): ಸಂಸತ್ತು ಅಧಿವೆಶನ ಮುಗಿದ ಬಳಿಕವೂ ನೋಟು ಅಮಾನ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಟೀಕಾಪ್ರಹಾರವನ್ನು ಮುಂದುವರೆಸಿರುವ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿಯನ್ನು ಇಟಲಿ ಸರ್ವಾಧಿಕಾರಿ ಬೆನಿಟೋ ಮುಸೊಲಿನಿಗೆ ಹೋಲಿಸಿದೆ.
ಈ ಮನುಷ್ಯ (ಮೋದಿ) ಮುಸೊಲಿನಿಯೆಂದು ಜನರಿಗೆ ಈಗರ್ಥವಾಗತೊಡಗಿದೆ. ಮುಸೊಲಿನಿ ಕೂಡಾ ಉತ್ತಮ ವಾಗ್ಮಿಯಾಗಿದ್ದ, ಆದರೆ ಕೆಲಸದ ವಿಚಾರದಲ್ಲಿ ವಿಫಲನಾಗಿದ್ದ. ತನ್ನ ವೈಫಲ್ಯಗಳನ್ನು ಮುಚ್ಚಲು ನೋಟು ಅಮಾನ್ಯ ಕ್ರಮವನ್ನು ಮೋದಿ ಕೈಗೊಂಡಿದ್ದಾರೆ, ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಮುಂದುವರೆದು, ‘ಭ್ರಷ್ಟ ಪ್ರಧಾನಿ’ ಹೇಳಿಕೆಗೆ ಸಂಬಂಧಿಸಿದಂತೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡಿರುವ ಅಯ್ಯರ್, ಪ್ರಧಾನಿಯ ಹಗರಣಗಳು ಹೊರಬೀಳುವುದನ್ನು ತಡೆಯಲೆಂದೆ ಕಲಾಪಗಳಲ್ಲಿ ಚರ್ಚಿಸಲು ಅವಕಾಶ ನೀಡಲಿಲ್ಲ ಎಂದು ಅಯ್ಯರ್ ಹೇಳಿದ್ದಾರೆ.
ಮೋದಿ ತಮ್ಮನ್ನು ಪ್ರಜಾತಂತ್ರವಾದಿ ಎಂದು ಬಿಂಬಿಸುತ್ತಾರೆ, ಆದರೆ ವಾಸ್ತವದಲ್ಲಿ ಅದಕ್ಕೆ ವಿರುದ್ಧವಾಗಿದ್ದಾರೆ ಎಂದಿರುವ ಅಯ್ಯರ್, ಭಾರತೀಯ ಸಂವಿಧಾನದ ಕಾರಣದಿಂದ ಮೋದಿ ಮಿತಿಯೊಳಗಿದ್ದಾರೆ, ಇಲ್ಲದಿದ್ದರೆ ಪಾಕಿಸ್ತಾನ ಮಂತ್ರಿಗಳು 1950ರಲ್ಲಿ ಮಾಡಿದ್ದನ್ನೇ ಲ್ಲಿ ಪುನರಾವರ್ತಿಸುತ್ತಿದ್ದರು ಎಂದು ಹೇಳಿದ್ದಾರೆ.