ಯಾರಾದರೂ ಮೃತಪಟ್ಟರೆ ಆ ಸಂದರ್ಭದಲ್ಲಿ ಶೋಕದ ವಾತಾವರಣ ಇರುತ್ತದೆ. ಆದರೆ ಚೀನಾದ ದಲಿಯಾನ್ ಎಂಬ ಆಸ್ಪತ್ರೆಯಲ್ಲಿ ರೋಗಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವಾಗಲೇ, ಆತನ ಅಂತ್ಯಸಂಸ್ಕಾರವನ್ನು ಯಾರು ನಡೆಸಬೇಕು ಎಂಬ ಬಗ್ಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ!
ಇತ್ತೀಚೆಗೆ ಬೆಳಗ್ಗೆ 7.30ರ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆತನನ್ನು ವೈದ್ಯರು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದರು. ಆದರೆ ವಾರ್ಡ್ನ ಹೊರಭಾಗದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ ನಂತರ ಬೆಳಕಿಗೆ ಬಂದ ಸಂಗತಿ ಅಚ್ಚರಿಗೆ ಕಾರಣವಾಗಿತ್ತು. ಹೊಡೆದಾಡಿಕೊಂಡ ಎರಡು ಗುಂಪಿನವರು ರೋಗಿಯ ಕುಟುಂಬಸ್ಥರೋ, ಸಂಬಂಧಿಕರೋ, ಸ್ನೇಹಿತರೋ ಅಲ್ಲ. ಬದಲಾಗಿ ಮೃತರ ಅಂತ್ಯ ಸಂಸ್ಕಾರ ನೆರವೇರಿಸುವ ಖಾಸಗಿ ಸಂಸ್ಥೆಯ ಸಿಬ್ಬಂದಿ. ನಿಗದಿತ ಮೊತ್ತ ಪಡೆದು ಇವರು ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದರು. ರೋಗಿಯು ಮೃತಪಟ್ಟರೆ ಯಾರು ಅಂತ್ಯಸಂಸ್ಕಾರ ನೆರವೇರಿಸಬೇಕು ಎಂಬ ಕುರಿತು ಎರಡು ಸಂಸ್ಥೆಯ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ಇವರಿಗೆ 15 ದಿನ ಜೈಲುಶಿಕ್ಷೆ ವಿಧಿಸಲಾಗಿದೆ.