ಕರ್ನಾಟಕ

ಪ್ರೀತಿಗಾಗಿ ಯುವತಿ ಹಿಂದೆ ಬಿದ್ದ ಯುವಕನನ್ನು ಮುಗಿಸಿಬಿಟ್ಟ ಹಂತಕರು…ಕೊನೆಗೂ ಬಯಲಾಯಿತು ಕೊಲೆ ರಹಸ್ಯ

Pinterest LinkedIn Tumblr

mur

ಬೆಂಗಳೂರು: ಏಳು ತಿಂಗಳ ಹಿಂದೆ ನಾಪತ್ತೆಯಾಗಿ ಶವವಾಗಿ ಪತ್ತೆಯಾಗಿದ್ದ ಅಕ್ಬರ್‌ ಎಂಬಾತನ ಕೊಲೆ ಪ್ರಕರಣ  ಭೇದಿಸಿರುವ ಅಮೃತಹಳ್ಳಿ ಪೊಲೀಸರು, ಆ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ಮಂಜುನಾಥ್‌, ಪುರುಷೋತ್ತಮ, ರಜನಿಕಾಂತ್‌, ಮುನಿನಾರಾಯಣಪ್ಪ, ಡೇವಿಡ್‌ ರಿಚರ್ಡ್‌್ ಅಲಿಯಾಸ್‌ ಅಣ್ಣಾಜಿ ಬಂಧಿತರು. ಕೊಲೆಯಾದ ಅಕ್ಬರ್‌, ಮಂಜುನಾಥ್‌ ಅವರ ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಅದೇ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಆಂಧ್ರಪ್ರದೇಶ ಮೂಲದ ಅಕ್ಬರ್‌, ಕೆಲ ವರ್ಷಗಳ ಹಿಂದೆ ಪೋಷಕರೊಂದಿಗೆ ನಗರಕ್ಕೆ ಬಂದು ಅಮೃತಹಳ್ಳಿಯಲ್ಲಿ ವಾಸವಿದ್ದರು. ಟಾಟಾ ಏಸ್ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರ ಮನೆ ಸಮೀಪವೇ ಇದ್ದ ಮಂಜುನಾಥ್ ಅವರ ಮಗಳ ಪರಿಚಯ ಮಾಡಿಕೊಂಡಿದ್ದ ಅವರು, ಪ್ರೀತಿಸುವಂತೆ ಅವರ ಹಿಂದೆ ಬಿದ್ದಿದ್ದರು’.

‘ಆ ವಿಷಯ ಗೊತ್ತಾಗುತ್ತಿದ್ದಂತೆ ಮಂಜುನಾಥ್‌, ಅಕ್ಬರ್‌ಗೆ ಎಚ್ಚರಿಕೆ ನೀಡಿದ್ದರು.  ಈ ವಿಚಾರವಾಗಿ  ಅವರಿಬ್ಬರ ಮಧ್ಯೆ ಗಲಾಟೆಯೂ ಆಗಿತ್ತು.  ಸಂಧಾನ ನಡೆಸಿದ್ದ ಹಿರಿಯರು, ಅಕ್ಬರ್‌ಗೆ ತಾಕೀತು ಮಾಡಿದ್ದರು. ಅಷ್ಟಾದರೂ ಯುವತಿ ಹಿಂದೆ ಸುತ್ತುವುದನ್ನು ಅಕ್ಬರ್‌ ನಿಲ್ಲಿಸಿರಲಿಲ್ಲ’ ಎಂದು ತನಿಖಾಧಿಕಾರಿ ವಿವರಿಸಿದರು.

‘ಏಪ್ರಿಲ್‌ನಲ್ಲಿ ಯುವತಿ ಮದುವೆ ನಿಶ್ಚಯವಾಗಿತ್ತು. ಅದು ತಿಳಿಯುತ್ತಿದ್ದಂತೆ ಅಕ್ಬರ್‌, ಅವರ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸಲು ಆರಂಭಿಸಿದ್ದರು. ಆ ವಿಷಯ ಗೊತ್ತಾಗುತ್ತಿದ್ದಂತೆ ಮಂಜುನಾಥ್‌, ತಮ್ಮ ಸಂಬಂಧಿಕರ ಮೂಲಕ ಅಕ್ಬರ್‌ ಕೊಲೆಗೆ  ಸಂಚು ರೂಪಿಸಿದ್ದರು’ ಎಂದು ವಿವರಿಸಿದರು.
ಬಾಡಿಗೆಗೆಂದು ಕರೆದೊಯ್ದಿದ್ದರು: ಏಪ್ರಿಲ್ 22ರಂದು ಅಕ್ಬರ್‌ ಅವರನ್ನು ಭೇಟಿಯಾಗಿದ್ದ ಆರೋಪಿ ಅಣ್ಣಾಚಿ, ‘ಚಿಕ್ಕಬಳ್ಳಾಪುರದಲ್ಲಿ ಮನೆ ವಸ್ತುಗಳಿದ್ದು, ಟಾಟಾ ಏಸ್‌ನಲ್ಲಿ ಅವುಗಳನ್ನು ಅಮೃತಹಳ್ಳಿಗೆ ತರಬೇಕು’ ಎಂದು ಹೇಳಿದ್ದರು.

ಅದಕ್ಕೆ ಒಪ್ಪಿದ್ದ ಅಕ್ಬರ್‌, ಅಣ್ಣಾಚಿ ಜತೆ ಟಾಟಾ ಏಸ್‌ ಸಮೇತ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದರು. ಅವರನ್ನು ಮತ್ತೊಂದು ಕಾರಿನಲ್ಲಿ  ಮಂಜುನಾಥ್ ಹಿಂಬಾಲಿಸುತ್ತಿದ್ದರು.  ಅಕ್ಬರ್‌ನನ್ನು  ಬಾಗೇಪಲ್ಲಿ ಠಾಣಾ ವ್ಯಾಪ್ತಿಯ ಪರಕೋಡು ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಅಣ್ಣಾಚಿ, ಅಲ್ಲಿಯೇ ವಾಹನ ನಿಲ್ಲಿಸಿಕೊಂಡಿದ್ದರು.

ಈ ವೇಳೆ ವಾಹನದಿಂದ ಇಳಿದ ಅಕ್ಬರ್‌ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಪ್ರಜ್ಞೆ ತಪ್ಪಿ ಬಿದ್ದ ಅಕ್ಬರ್ ಮೇಲೆ ಕಲ್ಲು ಎತ್ತಿ ಹಾಕಿದ್ದ ಆರೋಪಿಗಳು, ಬಳಿಕ ಪೆಟ್ರೋಲ್‌್ ಸುರಿದು ಬೆಂಕಿ ಹಚ್ಚಿದ್ದರು. ತದನಂತರ ಟಾಟಾ ಏಸ್‌ ವಾಹನವನ್ನು ಕೋಗಿಲು ಕ್ರಾಸ್ ಬಳಿ ತಂದು ನಿಲ್ಲಿಸಿ ಪರಾರಿಯಾಗಿದ್ದರು’  ಎಂದು ತನಿಖಾಧಿಕಾರಿ ತಿಳಿಸಿದರು.

ದೂರು ನೀಡಿದ್ದ ಜಮೀನು ಮಾಲೀಕ: ‘ಪರಕೋಡುವಿನ ಜಮೀನಿನಲ್ಲಿ ಅಕ್ಬರ್‌ ಶವ ಸುಟ್ಟ ಸ್ಥಿತಿಯಲ್ಲಿ ಬಿದ್ದಿತ್ತು. ಅದನ್ನು ಕಂಡ ಜಮೀನು ಮಾಲೀಕ, ಬಾಗೇಪಲ್ಲಿ ಠಾಣೆಗೆ ದೂರು ನೀಡಿದ್ದರು. ಇತ್ತ ಅಕ್ಬರ್‌ ನಾಪತ್ತೆ ಬಗ್ಗೆಯೂ ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.

ಶವ ಸಿಗುತ್ತಿದ್ದಂತೆ ಯುವತಿ ತಂದೆ ಮಂಜುನಾಥ್‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ‘ಮೊದಲು ವಶಕ್ಕೆ ಪಡೆದಾಗ ಮಂಜುನಾಥ್‌, ಅಮಾಯಕನಂತೆ ನಟಿಸಿ ಯಾವುದೇ ಮಾಹಿತಿ ನೀಡಿರಲಿಲ್ಲ. ಇತ್ತೀಚೆಗೆ ಮತ್ತೊಮ್ಮೆ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟರು. ಅವರ ಮಾಹಿತಿಯಂತೆ ಉಳಿದವರನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

Comments are closed.