ಕರಾವಳಿ

2008ರಲ್ಲಿ ಕುಂದಾಪುರ ಎಸ್‌ಐ ಸತೀಶ್ ಮೇಲೆ ಹಲ್ಲೆ ಪ್ರಕರಣ; ಆರೋಪಿ ಗೋಲ್ಡನ್ ಸುರೇಶ್ ದೋಷಮುಕ್ತ

Pinterest LinkedIn Tumblr

ಕುಂದಾಪುರ: ಅಂದು ದಿನಾಂಕ 6-4-2008ರ ರಾತ್ರಿ 10 ಗಂಟೆ. ವೇಗವಾಗಿ ಸ್ಕಾರ್ಪಿಯೋ ವಾಹನವೊಂದು ಕುಂದಾಪುರ ಪೊಲೀಸ್ ಠಾಣೆ ಎದುರು ಬಂದಿತ್ತು. ಆರೋಪಿತರಾದ ಗೋಲ್ಡನ್ ಸುರೇಶ್ ಹಾಗೂ ಸಹಚರರು ಪೊಲೀಸ್ ಠಾಣೆಯ ಒಳಗೆ ಹೋಗಿ ಕರ್ತವ್ಯದಲ್ಲಿದ್ದ ಆರಕ್ಷಕ ಠಾಣಾಧಿಕಾರಿ ಬಿ.ಎಸ್. ಸತೀಶ್ ಅವರಿಗೆ ಹೊಡೆದು ಗಾಯಗೊಳಿಸಿ ಕರ್ತವ್ಯಕ್ಕೆ ತಡೆಯೊಡ್ಡಿದ್ದಲ್ಲದೇ ಇತರೇ ಪೊಲೀಸ್ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿ ಪೊಲೀಸ್ ಠಾಣೆಯ ಹೆಂಚು, ಹೂವಿನ ಕುಂಡ ನಾಶ ಮಾಡಿ ಸಾರ್ವಜನಿಕ ಸೊತ್ತು ಹಾನಿ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

golden-suresh_case_ravikiran-1

(ಗೋಲ್ಡನ್ ಸುರೇಶ್)

ಕುಂದಾಪುರದ ಭಜರಂಗದಳ ಮುಖಂಡನೋರ್ವನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಲ್ಡನ್ ಸುರೇಶ್ ಹಾಗೂ ಮಲ್ಪೆಯ ವ್ಯಕ್ತಿಯೋರ್ವನ ಮೇಲೆ ದೂರು ದಾಖಲಾಗಿತ್ತು. ಈ ಬಗ್ಗೆ ವಿಚಾರಿಸಲು ಹಾಗೂ ತನ್ನ ಬಗ್ಗೆ ದೂರು ನೀಡಿದ್ದ ಮುಖಂಡನ ವಿರುದ್ಧ ಪ್ರತಿದೂರು ದಾಖಲಿಸುವ ಸಲುವಾಗಿ ಅಂದು ತನ್ನ ಸ್ಕಾರ್ಫಿಯೋ ವಾಹನದಲ್ಲಿ ಗೋಲ್ಡನ್ ಸುರೇಶ್ ಹಾಗೂ ಸಹಚರರು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಠಾಣಾಧಿಕಾರಿ ಸತೀಶ್ ಅವರು ದೂರು ಸ್ವೀಕರಿಸಲು ನಿರಾಕರಣೆ ಮಾಡಿದ್ದಲ್ಲದೇ ಕಾಲ ವಿಳಂಭ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಆಕ್ಷೇಪಿಸಿದ ಗೋಲ್ಡನ್ ಸುರೇಶ್, ಆತನ ಸಹಚರರು ಹಾಗೂ ಠಾಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆದು ದೊಡ್ಡ ಪ್ರಮಾಣದ ಗಲಾಟೆ ನಡೆದಿತ್ತು. ಈ ಘರ್ಷಣೆಯಲ್ಲಿ ಇತರೇ ಪೊಲೀಸ್ ಸಿಬ್ಬಂದಿಗಳಿಗೂ ಗಾಯವಾಗಿತ್ತು. ಗಲಾಟೆಯ ತೀವೃತೆಗೆ ಅಕ್ಕಪಕ್ಕದ ಪೊಲೀಸ್ ವಸತಿ ಗೃಹದಲ್ಲಿದ್ದ ಪೊಲೀಸರು ಕೂಡ ಠಾಣೆಗೆ ಬಂದು ಈ ಘಟನೆಯನ್ನು ನೋಡಿದ್ದರು. ಬಳಿಕ ಗಾಯಗೊಂಡ ಪೊಲೀಸರು ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಉದಯಶಂಕರ್ ಅವರಲ್ಲಿ ಚಿಕಿತ್ಸೆ ಪಡೆದಿದ್ದು ಘಟನೆ ಬಗ್ಗೆ ಠಾಣಾಧಿಕಾರಿ ಬಿ.ಎಸ್. ಸತೀಶ್ ದೂರು ದಾಖಲಿಸಿದ್ದರು. ಸ್ಕಾರ್ಫಿಯೋ ವಾಹನವನ್ನು ಪೊಲೀಸರು ಈ ಸಂದರ್ಭ ವಶಕ್ಕೆ ಪಡೆದಿದ್ದರು.

golden-suresh_case_ravikiran-2

(ನ್ಯಾಯವಾದಿ ರವಿಕಿರಣ ಮುರ್ಡೇಶ್ವರ)

ಅಂದಿನ ಕುಂದಾಪುರದ ಸಿ.ಪಿ.ಐ. ವೆಲೆಂಟೇನ್ ಡಿಸೋಜಾ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಒಟ್ಟು ಏಳು ಮಂದಿ ವಿಚಾರಣೆ ನಡೆದಿದ್ದು ಗೋಲ್ಡನ್ ಸುರೇಶ್ ಜೊತೆಯಲ್ಲಿದ್ದ ಸುಮಾರು ಇಪ್ಪತ್ತು ಇಪ್ಪತ್ತೈದು ಮಂದಿ ಗುಂಪಿನ ಸದಸ್ಯರನ್ನು ಗುರುತಿಸಿ ಅವರನ್ನು ಆರೋಪಿಗಳನ್ನಾಗಿಸುವಲ್ಲಿ ಪೊಲೀಸರು ವಿಫಲರಾಗಿದ್ದು ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿತರಾದ ಗೋಲ್ಡನ್ ಸುರೇಶ್, ವಿಶ್ವನಾಥ ಪೂಜಾರಿ ಸೇರಿದಂತೆ ಸಹಚರರ ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ. ಗೋಲ್ಡನ್ ಸುರೇಶ್ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.

Comments are closed.