ಕರ್ನಾಟಕ

ಸಚಿವ ಸೇಠ್ ಕಚೇರಿಗೆ ಬೀಗ ಹಾಕಿ ಜೆಡಿಎಸ್ ಧರಣಿ

Pinterest LinkedIn Tumblr

jdsಬೆಂಗಳೂರು, ನ. ೧೧- ಟಿಪ್ಪು ಜಯಂತಿ ಸಮಾರಂಭದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿರುವ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್‌ನ ನಾಲ್ವರು ವಿಧಾನ ಪರಿಷತ್ ಸದಸ್ಯರು ವಿಧಾನಸೌಧದಲ್ಲಿರುವ ಸಚಿವ ತನ್ವೀರ್‌ಸೇಠ್ ಕಚೇರಿಗೆ ಬೀಗ ಹಾಕಿ ಕಚೇರಿ ಮುಂದೆಯೇ ಧರಣಿ ನಡೆಸಿದರು.
ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಕೃಷ್ಣಾರೆಡ್ಡಿ ಹಾಗೂ ಶರವಣ ಇವರುಗಳು ಪಾಲ್ಗೊಂಡಿದ್ದು, ಇವರ ಜತೆ ಶಿಕ್ಷಕರ ಸಂಘಟನೆಗೆ ಸೇರಿದ ಕೆಲ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಚಿವ ತನ್ವೀರ್‌ಸೇಠ್‌ರವರ ರಾಜೀನಾಮೆಗೆ ಬೇಡಿಕೆ ಜತೆಗೆ ರಾಜ್ಯದ ಅನುದಾನಿತ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಕಳೆದ 3 ವರ್ಷದಿಂದ ಅನುದಾನಿತ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ ಭತ್ಯೆ ಸಮಸ್ಯೆ ಪರಿಹರಿಸಿಲ್ಲ. ಕ್ರಾಫ್ಟ್ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸಿಲ್ಲ. ಈ ಎಲ್ಲಾ ಬೇಡಿಕೆಗಳನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇಂದು ಸಂಜೆವರೆಗೂ ಧರಣಿ ನಡೆಸುವುದಾಗಿ ಹೇಳಿದ ವಿಧಾನ ಪರಿಷತ್ ಸದಸ್ಯರು ಸಚಿವರ ಕಚೇರಿಗೆ ಬೀಗ ಹಾಕಿ ಕಚೇರಿಯ ಮುಂದೆಯೇ ಕುಳಿತು ಪ್ರತಿಭಟನೆ ನ‌ಡೆಸಿದ್ದಾರೆ.
ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುವ, ಅನುದಾನಿತ ಶಿಕ್ಷಕ ಬೇಡಿಕೆ ಈಡೇರಿಸುವ ಬಿತ್ತಿ ಚಿತ್ರಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಬಸವರಾಜ ಹೊರಟ್ಟಿ ಅವರು, ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಶಿಕ್ಷಣ ಸಚಿವರಾಗಿ ತನ್ವೀರ್‌ಸೇಠ್ ಮತ್ತು ಶಿಕ್ಷಣ ಇಲಾಖೆಯ ಆಯುಕ್ತರಾಗಿ ಅಜೇಯ್‌ಸೇಠ್ ಬಂದ ನಂತರ ಕಡತಗಳು ಮುಂದಕ್ಕೆ ಹೋಗುತ್ತಿಲ್ಲ. ಶಿಕ್ಷಕರ ಬೇಡಿಕೆ ಕಡತ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದ ಕಡತಗಳು ಮೂಲೆ ಗುಂಪಾಗಿವೆ ಎಂದು ವಾಗ್ದಾಳಿ ನಡೆಸಿದರು.
ಅಶ್ಲೀಲ ಚಿತ್ರ ವೀಕ್ಷಣೆ ಮಾಡಿರುವ ತನ್ವೀರ್‌ಸೇಠ್ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಜೆಡಿಎಸ್ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಹೊರಟ್ಟಿ ಎಚ್ಚರಿಕೆ ನೀಡಿದರು.
ಶಿಕ್ಷಣ ಸಚಿವ ತನ್ವೀರ್‌ಸೇಠ್‌ರವರಿಗೆ ನೈತಿಕತೆ, ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಬಿಜೆಪಿ ಶಾಸಕರು ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಿಸಿದರು ಎಂದು ಹಿಂದೆ ಸಿದ್ದರಾಮಯ್ಯ ಬಿಜೆಪಿ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದರು. ಈಗ ಅವರದೇ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ್ದಾರೆ. ತಕ್ಷಣವೇ ಈ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಅವರು ಪುಟ್ಟಣ್ಣ ಆಗ್ರಹಿಸಿದರು.

Comments are closed.