ಕರ್ನಾಟಕ

ಉತ್ತರ ಕನ್ನಡದಲ್ಲಿ ಭಾರಿ ಮಳೆ

Pinterest LinkedIn Tumblr

rain

ಕಾರವಾರ,ಅ.11- ಉತ್ತರ ಕನ್ನಡ ಜಿಲ್ಲೆಯ ನಾನಾ ಭಾಗಗಳಲ್ಲಿ ಕಳೆದ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು, ಮುದುಗಾ ಸಮೀಪ ಗುಡ್ಡು ಕುಸಿದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.

ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ವ್ಯವಸ್ಥೆ ಕೆಲ ಕಾಲ ಸ್ಥಗಿತಗೊಂಡಿತ್ತು. ರಾತ್ರಿಯೇ ಗುಡ್ಡ ಕುಸಿದ ಪರಿಣಾಮ ವಾಹನಗಳು ಮುಂದೆ ಸಂಚರಿಸಲಾಗದೆ ಸಾಲು ಸಾಲಾಗಿ ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ಐಆರ್‍ಬಿ ಕಂಪನಿಯ ಸಿಬ್ಬಂದಿ ಹರಸಾಹಸ ನಡೆಸಿ ರಸ್ತೆ ಮೇಲಿದ್ದ ಮಣ್ಣು ಹಾಗೂ ಕಲ್ಲುಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇನ್ನು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಕೆಲವು ಗ್ರಾಮಗಳು ಜಲಾವೃತ್ತವಾಗಿದೆ. ಅಂಕೋಲಾ ತಾಲೂಕಿನ ಕೇಣಿ, ಕೇಣಿಯ ಗಾಂವಕರವಾಡಾ, ಬಡಗೇರಿ ಗ್ರಾಮದ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೇಣಿ ಹಳ್ಳ ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ನೆರೆ ಉಂಟಾದ ಪ್ರದೇಶಕ್ಕೆ ಅಂಕೋಲಾ ತಹಶೀಲ್ದಾರ್ ಭೇಟಿ ನೀಡಿ ಜನರನ್ನು ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದಾರೆ.

ಮಳೆ ನಿಂತಿದ್ದರೂ ನೀರಿನ ಪ್ರಮಾಣ ಇಳಿದಿಲ್ಲ. ಮಳೆ ಮತ್ತೆ ಬಂದಲ್ಲಿ ಇಡೀ ಗ್ರಾಮ ಜಲಾವೃತವಾಗುವ ಸಾಧ್ಯತೆ ಇದೆ. ನೆರೆಯಿಂದ ತೊಂದರೆಗೊಳಗಾದ ಜನರಿಗೆ ಗಂಜಿಕೇಂದ್ರ ತೆರೆಯಲು ಕಂದಾಯ ಅಧಿಕಾರಿಗಳು ಮುಂದಾಗಿದ್ದಾರೆ.

ನೀರನ್ನು ಹೊರಹಾಕುವ ಕಾರ್ಯ ಭರದಿಂದ ಸಾಗಿದ್ದು, ರಕ್ಷಣಾ ಕಾರ್ಯಗಳು ನಡೆದಿವೆ.

Comments are closed.