ರಾಷ್ಟ್ರೀಯ

ಮತ್ತೆ ಸಂಸತ್ ಮೇಲೆ ದಾಳಿ ನಡೆಸಲು ಉಗ್ರರ ಸಂಚು

Pinterest LinkedIn Tumblr

31-parliament-webನವದೆಹಲಿ, ಅ. ೧೧- ಇಡೀ ದೇಶ ದಸರಾ ಆಚರಣೆ ಸಂಭ್ರಮದಲ್ಲಿ ಮುಳುಗಿರುವಾಗ ಮತ್ತೆ ದೆಹಲಿಯ ಸಂಸತ್ ಭವನದ ಮೇಲೆ ಎರಗಲು ಪಾಕಿಸ್ತಾನ ಮೂಲದ ಪಾತಕಿಗಳು ಸಂಚು ರೂಪಿಸಿದ್ದಾರೆ ಎಂಬ ವರದಿಗಳ ಹಿನ್ನಲೆಯಲ್ಲಿ ದೇಶದೆಲ್ಲೆಡೆ ಕಟ್ಟೆಚ್ಚರದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದಸರಾ ಹಬ್ಬದ ಕಡೆಯ ದಿನ ಪುರಾಣದ ಪ್ರಕಾರ ವಿಜಯದಶಮಿ ವೈರಿಗಳ ಸಂಹಾರಕ್ಕೆ ಸಂಕಲ್ಪ ತೊಟ್ಟ ದಿನ. ಇಂತಹ ಶುಭ ಸಂದರ್ಭದ ನಡುವೆ ದೇಶದ ನಾನಾ ಭಾಗಗಳ ಮೇಲೆ ಕಣ್ಣಿಟ್ಟು ವಿದ್ವಂಸಕ ಕೃತ್ಯ ಎಸಗಲು ಸುಮಾರು 250 ಮಂದಿ ಉಗ್ರರು ಭಾರತದೊಳಕ್ಕೆ ನುಗ್ಗಿದ್ದಾರೆ ಎಂಬ ವರ್ತಮಾನದಿಂದಾಗಿ ಎಲ್ಲೆಲ್ಲೂ ಸರ್ಪಕಾವಲು ಹಾಕಲಾಗಿದೆ.

ಕೇಂದ್ರ ಸರಕಾರದ ಗೂಢಚಾರ ಇಲಾಖೆ ಮೂಲಗಳ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ಒಟ್ಟು ಮೂರು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಈ ಗುಂಪುಗಳ ಸುಮಾರು 250 ಜನ ಭಯೋತ್ಪಾದಕರು ಭಾರತದ ಗಡಿಯೊಳಗೆ ನುಗ್ಗಿ ಆಯಕಟ್ಟಿನ ಭದ್ರತಾ ನೆಲೆಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದಾರೆ.

ಭಾರತವು ನಡೆಸಿರುವ ನಿಖರ ದಾಳಿಗಳಿಗೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುವುದಕ್ಕಾಗಿ ಈ ಉಗ್ರಗಾಮಿ ಪಡೆಗಳು ಸನ್ನದ್ಧವಾಗಿವೆ ಎಂದು ತಿಳಿದು ಬಂದಿದೆ. ಹೀಗೆ ಹೊಂಚು ಹಾಕಿರುವ ಸಂಘಟನೆಗಳೆಂದರೆ ಲಷ್ಕರ್-ಎ-ತೋಯ್ಬಾ, ಜೈಷ್-ಎ-ಮೊಹಮದ್ ಹಾಗೂ ಹಿಜ್‌ಬುಲ್ ಮುಜಾಹಿದ್ದೀನ್.

ನಿಖರ ದಾಳಿಗಳ ಹಿನ್ನೆಲೆಯಲ್ಲಿ ತಮ್ಮ ನೆಲೆಗಳಿಂದ ಅತಂತ್ರಗೊಂಡಿರುವ ಅಭದ್ರ ಪರಿಸ್ಥಿತಿಯಿಂದಾಗಿ ಕಂಗೆಟ್ಟಿರುವ ಭಯೋತ್ಪಾದಕರಿಗೆಲ್ಲಾ ಭಾರತದ ಭದ್ರತಾ ನೆಲೆಗಳನ್ನು ಪ್ರಮುಖವಾಗಿ ಗುರಿಯಾಗಿರಿಸಿಕೊಂಡು ದಾಳಿ ನಡೆಸುವಂತೆ ಸೂಚಿಸಲಾಗಿದೆಯಂತೆ.

ಇಂಥ ಬೆದರಿಕೆಗಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕೃತವಾಗಿ ಸೂಚನೆಗಳನ್ನು ನೀಡಲಾಗಿದೆ. ಯಾವ ಕಾರಣಕ್ಕೂ ಭಯೋತ್ಪಾದಕರು ದೇಶದ ಗಡಿ ಒಳಗೆ ನುಗ್ಗದಂತೆ ನೋಡಿಕೊಳ್ಳಬೇಕೆಂದು ಜಮ್ಮು ಹಾಗೂ ಕಾಶ್ಮೀರದ ಭದ್ರತಾ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.

ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯ ಉದ್ದಕ್ಕೂ ಕಟ್ಟೆಚ್ಚರಕ್ಕಾಗಿ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ದುರ್ಗಮ ಗುಡ್ಡ-ಬೆಟ್ಟಗಳ ಪ್ರದೇಶದಿಂದಾಗಿ ಅಲ್ಲಲ್ಲಿ ಕೆಲ ಮಟ್ಟಿಗೆ ಸೂಕ್ಷ್ಮ ಪರಿಸ್ಥಿತಿ ಇರುವುದಾಗಿ ಭದ್ರತಾ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಆದ್ದರಿಂದ ಸೇನೆ, ಗಡಿ ಭದ್ರತಾಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರೂ ಸೇರಿದಂತೆ ಉಗ್ರರ ಉಪಟಳವನ್ನು ಕೊನೆಗಾಣಿಸಲು ಸರ್ವ ಪ್ರಯತ್ನ ಮಾಡಲಾಗಿದೆ.

ಕಳೆದ ವಾರದಲ್ಲೇ, ಭಾರತದ ಗಡಿಯೊಳಗೆ ನುಸುಳಿಕೊಂಡು ಬರಲು ನೂರು ಜನ ಉಗ್ರರು ಕಾದು ಕುಳಿತಿದ್ದಾರೆಂಬ ಹಿಂದಿನ ವರದಿಗಳನ್ನು ಇಲ್ಲಿ ಸ್ಮರಿಸಬಹುದು.

ಸೇನಾ ನೆಲೆಗಳತ್ತ ನುಗ್ಗಿ ದಾಳಿ ನಡೆಸುವುದಕ್ಕಾಗಿ ಹೆಣಗುತ್ತಿದ್ದ ಸುಮಾರು 40 ಜನ ಭಯೋತ್ಪಾದಕರನ್ನೂ ಭಾರತೀಯ ಭದ್ರತಾ ಪಡೆಗಳು ಕಳೆದ ಒಂದು ತಿಂಗಳ ಅವಧಿಯಲ್ಲಿ ಹೊಡೆದುರುಳಿಸಿರುವುದನ್ನು ಇಲ್ಲಿ ಗಮನಿಸಬಹುದು.

ಹತ್ತೊಂಭತ್ತು ಜನ ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡ ಉರಿ ದಾಳಿ ಪ್ರಕರಣದ ನಂತರ ಮತ್ತೆ ಅದೇ ರೀತಿಯ ಹತ್ಯೆಗಳಿಗಾಗಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಬಾರಾಮುಲ್ಲಾ ಪಂಪೊರೆ ಹಾಗೂ ಹರಿದ್ವಾರಗಳಲ್ಲಿ ಕೂಡ ವಿಫಲ ಪ್ರಯತ್ನ ನಡೆಸಿದರು.

ಬಲ್ಲ ಮೂಲಗಳ ಪ್ರಕಾರ ಭಾರತೀಯ ಸೇನೆ ನಡೆಸಿದ ನಿಖರ ದಾಳಿ ಕಾರ್ಯಾಚರಣೆಯಲ್ಲಿ ಎಲ್.ಇ.ಟಿಗೆ ದೊಡ್ಡ ಹೊಡೆತ ಬಿದ್ದಿದೆ. ಈ ಸಂಘಟನೆಗೆ ಸೇರಿದ ಇಪ್ಪತ್ತು ಜನರು ನಿಖರ ದಾಳಿಗೆ ಆಹುತಿಯಾದರು.

ಇಂದು ಬೆಳಿಗ್ಗೆ 11.40ರ ಸುಮಾರಿಗೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಪಹರೆ ತಂಡದ ಮೇಲೆ ನಡೆದ ಗ್ರನೆಡ್ ದಾಳಿಯಲ್ಲಿ 8 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಸಿಆರ್‌ಪಿಎಫ್‌ನ ಇಬ್ಬರು ಸೇರಿದ್ದಾರೆ. ಉಳಿದವರೆಲ್ಲ ನಾಗರಿಕರು, ಗಾಯಾಳುಗಳನ್ನೆಲ್ಲ ಶೋಪಿಯಾನ್ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Comments are closed.