ಕರ್ನಾಟಕ

ಪಶ್ಚಿಮ ಘಟ್ಟದ ನದಿಗಳಲ್ಲಿ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆ

Pinterest LinkedIn Tumblr

baraಬೆಂಗಳೂರು, ಅ. ೧೧- ಕಾವೇರಿ ಸಮಸ್ಯೆಯ ಸಿಕ್ಕಿನಲ್ಲಿ ಸಿಲುಕಿ ನಲುಗುತ್ತಿರುವ ರಾಜ್ಯ ಬರ ಪರಿಸ್ಥಿತಿಯ ಅಂಚಿಗೆ ಬಂದು ನಿಂತಿದೆ. ಮುಂಬರುವ ದಿನಗಳು ರಾಜ್ಯದ ಜನತೆಯ ಪಾಲಿಗೆ ಕಠಿಣ, ಕಠೋರ ದಿನಗಳಾಗಲಿವೆ.
ಪಶ್ಚಿಮ ಘಟ್ಟದಲ್ಲಿ ನದಿಗಳು ಈಗಾಗಲೇ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಇದೇ ಮಲೆನಾಡು ಸೇರಿದಂತೆ ಬಹುತೇಕ ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಮುಂದಿನ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಉಂಟಾಗಲಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮಘಟ್ಟ ಭಾಗದಲ್ಲಿ ಕಳೆದ 20 ವರ್ಷಗಳಿಂದ ಹವಾಮಾನ ಬದಲಾವಣೆ, ವೈಪರೀತ್ಯಗಳ ಬಗ್ಗೆ ಅಧ್ಯಯನ ನಡೆಸಿರುವ ಪರಿಸರ ತಜ್ಞರು, ಈ ಬಾರಿ ಪಶ್ಚಿಮಘಟ್ಟ ಭಾಗದ ನೇತ್ರಾವರಿ ನದಿ ಸೇರಿದಂತೆ ಬಹುತೇಕ ನದಿಗಳಲ್ಲಿ ಈಗಲೇ ನೀರಿನ ಪ್ರಮಾಣ ಕಡಿಮೆ ಇದೆ. ಸಾಮಾನ್ಯವಾಗಿ ಆಗಸ್ಟ್‌ನಿಂದ ಅಕ್ಟೋಬರ್ ತಿಂಗಳವರೆಗೂ ಪಶ್ಚಿಮಘಟ್ಟದ ನದಿಗಳು ಮೈದುಂಬಿ ಹರಿಯುತ್ತವೆ. ಇಲ್ಲಿನ ಜಲಪಾತಗಳು ರಭಸವಾಗಿ ಧುಮ್ಮಿಕುತ್ತವೆ. ಆದರೆ, ಈ ವರ್ಷ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದ್ದು, ನದಿಗಳಲ್ಲಿ ಅಲ್ಪ ಪ್ರಮಾಣದ ನೀರಿನಿಂದ ನದಿಗಳು ಒಣಗಿದಂತೆ ಭಾಸವಾಗುತ್ತಿವೆ.
ಜಲಪಾತಗಳ ಭೋರ್ಗರೆತ ಇಲ್ಲ. ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ತಜ್ಞರ ತಂಡ ಬೇಸಿಗೆಯಲ್ಲಿ ನೀರಿನ ಹಾಹಾಕಾರದ ಸಾಧ್ಯತೆಯನ್ನು ಧೃಡಪಡಿಸಿದ್ದಾರೆ.
ಬರಪೀಡಿತ ತಾಲ್ಲೂಕು ಘೋಷಣೆ
ಸತತ ಎರಡನೇ ವರ್ಷ ರಾಜ್ಯ ಬರ ಪರಿಸ್ಥಿತಿಗೆ ಒಳಗಾಗಿದ್ದು, ಈಗಾಗಲೇ ರಾಜ್ಯ ಸರ್ಕಾರ 106 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಿದೆ. ಮುಂದಿನ ದಿನಗಳಲ್ಲಿ ಈ ತಾಲ್ಲೂಕುಗಳ ಸಂಖ್ಯೆ ಏರಲಿದೆ.
ಈ ಬಾರಿ ಬಯಲುಸೀಮೆ ಇರಲಿ ಮಲೆನಾಡಿನಲ್ಲೇ ಶೇಕಡಾ 40 ರಷ್ಟು ಮಳೆ ಕಡಿಮೆ ಆಗಿದೆ.
ನದಿಗಳು ತುಂಬಿ ಹರಿಯುತ್ತಿಲ್ಲ. ಕೆರೆ, ಕುಂಟೆಗಳು ತುಂಬಿಲ್ಲ, ಇದನ್ನೆಲ್ಲಾ ನೋಡಿದರೆ ಬೇಸಿಗೆ ಜನತೆಯ ಪಾಲಿಗೆ ನಿಜಕ್ಕೂ ಕಠೋರ ಎನಿಸಲಿವೆ. ಕುಡಿಯುವ ನೀರಿಗೂ ತತ್ವಾರವಾಗಲಿದೆ.
ಮಳೆ ಕೊರತೆಗೆ ಕಾಡಿನ ಭಾಗದಲ್ಲಿ ನಡೆದಿರುವ ಅಭಿವೃದ್ಧಿ ಯೋಜನೆಗಳು ಕಾರಣ ಎನಿಸಿದರೂ. ಇದರ ಜೊತೆಗೆ ಕಾಡ್ಗಿಚ್ಚಿನಿಂದ ಹುಲ್ಲುಗಾವಲು ನಾಶವಾಗುತ್ತಿರುವುದು ಕಾರಣ. ನದಿ ಮೂಲಗಳ ಭಾಗದ ಕಾಡಿಗೆ ಬೆಂಕಿ ಬೀಳುವ ಪ್ರಕರಣಗಳು ಜಾಸ್ತಿಯಾಗಿದ್ದು, ಇದರಿಂದ ಮಣ್ಣು ನೀರು ಹಿಡಿದಿಟ್ಟುಕೊಳ್ಳಲು ಕಾರಣವಾಗುವ ಹುಲ್ಲು ಸಂಪೂರ್ಣ ನಾಶವಾಗಿರುವುದು.
ನೀರಿನ ಮೂಲಗಳು ಬತ್ತಲು ಕಾರಣವಾಗಿ ಪಶ್ಚಿಮ ಘಟ್ಟದ ನದಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ ಎಂದು ಹೇಳುವ ಪರಿಸರ ತಜ್ಞರು, ಇದರ ಜೊತೆಗೆ ಕಾಡು ಒತ್ತುವರಿಯಿಂದ ಮರಗಳ ಮಾರಣಹೋಮ ನಡೆಯುತ್ತಿದೆ. ಕಾಡನ್ನು ನಾಶಗೊಳಿಸಿ ದೊಡ್ಡ ಎಸ್ಟೇಟ್‌ಗಳ ನಿರ್ಮಾಣ, ರಬ್ಬರ್ ತೋಟಗಳಿಂದ ಹಳೇ ಮರಗಳು ಧರೆಗೆ ಉರುಳುತ್ತಿವೆ.
ಇವೆಲ್ಲಾ ಮಳೆ ಮಾರುತಗಳ ಮೇಲೆ ಪರಿಣಾಮ ಬೀರಿ ಮಳೆ ಮಾರುತಗಳಿಂದ ನಿರೀಕ್ಷಿಸಿದಷ್ಟು ಮಳೆ ತರುತ್ತಿಲ್ಲ ಎನ್ನುತ್ತಾರೆ.
ಕಾಡು ಪರಿಸರ ಸಂರಕ್ಷಣೆಗೆ ಗಮನ ನೀಡದೆ ಹೋದರೆ ಮುಂದಿನ ದಿನಗಳು ಭೀಕರವಾಗಲಿವೆ ಎಂಬುದು ಪರಿಸರ ತಜ್ಞರ ಎಚ್ಚರಿಕೆ ಮಾತುಗಳು.

Comments are closed.