
ಮೈಸೂರು: ‘ಅಣ್ಣೋ.. ನಿಮ್ಮ ಸರ್ಕಾರ ಇನ್ನು ಇರ್ಲಿ ಅಂತ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ತಕೊಣ್ಣ ಪ್ರಸಾದ..’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಓಲೈಸಿ ಹಣ ಗಿಟ್ಟಿಸಲು ಮುಂದಾದ ಕೊಳ್ಳೇಗಾಲದ ಮಂತ್ರವಾದಿಯೊಬ್ಬ ಬರಿಗೈಯಲ್ಲಿ ಹಿಂದಿರುಗಬೇಕಾಯಿತು.
ಯದುವೀರರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಸೋಮವಾರ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾತ್ರಿ ನಗರದಲ್ಲಿಯೇ ತಂಗಿದ್ದರು. ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ತೆರಳುವ ಮುನ್ನ ಶಾರದಾದೇವಿನಗರದಲ್ಲಿರುವ ಅವರ ನಿವಾಸದ ಮುಂದೆ ಎಂದಿನಂತೆ ಜನ ಜಮಾಯಿಸಿದ್ದರು.
ಸಿದ್ದರಾಮಯ್ಯ ಅವರು ಜನರಿಂದ ಅಹವಾಲು ಸ್ವೀಕರಿಸುತ್ತಿದ್ದಾಗ ಅಲ್ಲಿಗೆ ಬಂದ ಮಹದೇವ ಎಂಬಾತ, ‘ನಾನು ಕೊಳ್ಳೇಗಾಲದಿಂದ ಬಂದಿದ್ದೇನೆ. ಪೂಜೆ ಮಾಡಿಸಿಕೊಂಡು ಬಂದಿದ್ದೇನೆ ತಕೊಣ್ಣ’ ಎಂದು ಪ್ಲಾಸ್ಟಿಕ್ ಕವರ್ನಲ್ಲಿದ್ದ ಕೆಂಪು ವಸ್ತ್ರವನ್ನು ಸಿದ್ದರಾಮಯ್ಯ ಅವರಿಗೆ ನೀಡಲು ಮುಂದಾದ. ಆದರೆ ಆ ವಸ್ತ್ರ ಪಡೆಯಲು ಹಿಂದೇಟು ಹಾಕಿದ ಮುಖ್ಯಮಂತ್ರಿಗಳು, ‘ಹೌದಾ…ಸರಿ ನಡಿ’ ಎಂದು ಮುಂದೆ ಹೋಗುವಂತೆ ಸೂಚಿಸಿದರು. ಆದರೂ ಆತ ಮುಂದೆ ಹೋಗದೆ ‘ಅಲ್ಲಿಂದ ಬಂದಿದ್ದೇನೆ. ನನಗೆ ಏನೂ ಕೊಡಲ್ವಾ. ನಮ್ಮ ಅಪ್ಪ, ಅಮ್ಮನಿಗೂ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು. ದುಡ್ಡು ಕೊಡಣ್ಣೋ’ ಅಂತ ದುಂಬಾಲು ಬಿದ್ದ.
ಇದರಿಂದ ಕೊಂಚ ಅಸಮಾಧಾನದಿಂದಲೇ ಸಿದ್ದರಾಮಯ್ಯ ಅವರು,‘ಈಗ ನಡಿ ಅಂತಾ ಹೇಳಿಲ್ಲವಾ. ನೀನು ಹಳೆ ಗಿರಾಕಿ, ನಂಗೆ ಗೊತ್ತಿಲ್ವಾ’ ಎಂದು ಹೇಳಿ ಕಾರು ಹತ್ತಿದರು. ‘ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ ಎಂದು ನೂರಾರು ರೂಪಾಯಿ ಖರ್ಚು ಮಾಡಿ ಪೂಜೆ ಮಾಡಿಸಿಕೊಂಡು ಬಂದರೆ ಏನೋ ದುರಹಂಕಾರದಲ್ಲಿ ಮಾತನಾಡುತ್ತಾರೆ. ಹೀಗೇ ಆದ್ರೆ ಉದ್ಧಾರ ಆಗೋದಿಲ್ಲ’ ಎಂದು ಸಿದ್ದರಾಮಯ್ಯ ಅವರನ್ನು ನಿಂದಿಸುತ್ತಾ ಮಹದೇವ ಅಲ್ಲಿಂದ ಕಾಲುಕಿತ್ತ.
ಅಭಿಮಾನಿಗಳು ತಂದಿದ್ದ ಭಾರಿ ಗಾತ್ರದ ಹಾರವನ್ನೂ ಹಾಕಿಸಿಕೊಳ್ಳದೆ ‘ಇಷ್ಟು ದೊಡ್ಡ ಹಾರ ಯಾಕೆ ತಂದ್ರಿ. ಭಾರ ಆಗಲ್ವಾ’ ಎಂದು ಪ್ರಶ್ನಿಸಿ ಮಾಧ್ಯಮ ಪ್ರತಿನಿಧಿಗಳಿಗೂ ಪ್ರತಿಕ್ರಿಯೆ ನೀಡದೆ ಮಂಡಕಳ್ಳಿ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
Comments are closed.