
ಭಟ್ಕಳ: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು ತಾಲೂಕಿನ ಇತಿಹಾಸ ಪ್ರಸಿದ್ಧ ಶಿರಾಲಿಯ ಚಿತ್ರಾಪುರ ಮಠವನ್ನು ಸಂದರ್ಶಿಸಿದರು.

ಈ ಸಂದರ್ಭದಲ್ಲಿ ಮಠದ ಮುಖ್ಯ ಅರ್ಚಕ ನಾಗೇಶ್ ಭಟ್ ಹಳದಿಪುರ, ಹಾಗೂ ಬೈಂದೂರು ಹರಿಶ್ ಭಟ್ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಠದ ಇತಿಹಾಸ, ಮಠದಲ್ಲಿ ಜರಗುವ ಆರಾಧನ ಕ್ರಮಗಳನ್ನು ವಿವರಿಸಿದರು.
ಭಟ್ಕಳ ಇತಿಹಾಸದಲ್ಲೇ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಹಿಂದೂ ದೇವಸ್ಥಾನ ಭೇಟಿ ನೀಡುತ್ತಿರುವುದು ಇದೇ ಪ್ರಥಮವಾಗಿದ್ದು ಇಂತಹ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಶಮ್ಸ್ ಶಾಲೆಯು ವಿನೂತನ ಕಾರ್ಯಕ್ರಮ ನಡೆಸಿಕೊಟ್ಟಿದೆ ಎಂದು ಮಠದ ಟ್ರಸ್ಟಿ ಶುಭಾಸ್ ಕೊಪ್ಪಿಕರ್ ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಇಸ್ಲಾಮ್ ಧರ್ಮವು ತನ್ನ ಅನುಯಾಯಿಗಳಿಗೆ ಇತರ ಧರ್ಮಿಯರು ಆರಾಧಿಸುವ ದೇವರುಗಳನ್ನು ನಿಂದಿಸದಿರುವಂತೆ ಕರೆ ನೀಡಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅನ್ಯ ಧರ್ಮಿಯರ ಆರಾಧನಾ ಸ್ಥಳಗಳನ್ನು ಭೇಟಿ ನೀಡುವುದರ ಮೂಲಕ ಅವರಲ್ಲಿ ಧಾರ್ಮಿಕ ಸಾಮಾರಸ್ಯ ಮೂಡುವಂತಾಗುತ್ತದೆ ಎಂದರು.
ಶಾಲೆಯ ಮುಖ್ಯಾಧ್ಯಾಪಕ ಎಂ.ಆರ್. ಮಾನ್ವಿ ಮಾತನಾಡಿ ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಇತರ ಧರ್ಮ ಹಾಗೂ ಆರಾಧ್ಯಗಳನ್ನು ಗೌರವಿಸುವುದು ಕಲಿತೆ ಮುಂದೆ ಸಮಾಜದಲ್ಲಿ ಮಸೀದಿ ಮಂದಿರ, ಚರ್ಚುಗಳಿಗೆ ಕಲ್ಲು ಬೀಳುವುದು ತಪ್ಪುತ್ತದೆ. ನಮ್ಮಲ್ಲಿ ಇತರರ ಧಾರ್ಮಿಕ ಆಚರಣೆಗಳನ್ನು ಗೌರವಿಸು ಮನೋಭಾವ ಬೆಳೆಯಬೇಕು ಹಿಂದೂ ವಿದ್ಯಾರ್ಥಿಗಳು ಮಸೀದಿ, ಚರ್ಚುಗಳನ್ನು ಸಂದರ್ಶಿಸಬೇಕು ಎಂದೂ ಹೇಳೀದರು.
Comments are closed.