ಕರ್ನಾಟಕ

ಸೆಕ್ಸ್ ಗಾಗಿ ಬ್ಲ್ಯಾಕ್‌ಮೇಲ್ ಆರಂಭಿಸಿದ ಫೇಸ್‌ಬುಕ್‌ ಗೆಳೆಯನನ್ನೇ ಮುಗಿಸಿಬಿಟ್ಟ ದಂಪತಿ !

Pinterest LinkedIn Tumblr

raghavendra

ಬೆಂಗಳೂರು: ತನ್ನ ಜತೆ ತೆಗೆಸಿಕೊಂಡ ಫೋಟೊಗಳನ್ನು ಬಹಿರಂಗಪಡಿಸಿದ ಕಾರಣಕ್ಕೆ ಗಂಡ ಹಾಗೂ ಸಹಚರರ ಜತೆ ಸೇರಿ ‘ಫೇಸ್‌ಬುಕ್‌ ಗೆಳೆಯ’ನನ್ನು ಹತ್ಯೆಗೈದ ಸುಮಾ (25)ಎಂಬಾಕೆ ಈಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಳೆ.

‘ಕುಮಾರಸ್ವಾಮಿ ಲೇಔಟ್ ಸಮೀಪದ ಚಂದ್ರನಗರ ನಿವಾಸಿಯಾದ ಸುಮಾ, ಆಕೆಯ ಪತಿ ರಾಘವೇಂದ್ರ (31), ಬನಶಂಕರಿಯ ನಾಗೇಶ್ (29), ರಾಜರಾಜೇಶ್ವರಿನಗರದ ಅಂಥೋಣಿ ಅಲಿಯಾಸ್ ಕುಳ್ಳ (24) ಹಾಗೂ ಸಾರಕ್ಕಿಯ ಲತೀಶ ಅಲಿಯಾಸ್ ಸೆಲ್ವಿ (20) ಎಂಬುವರನ್ನು ಬಂಧಿಸಲಾಗಿದೆ’ ಎಂದು ತನಿಖಾಧಿಕಾರಿಗಳು ಹೇಳಿದರು.

ಟ್ರಿಪ್‌ನಿಂದ ಯಡವಟ್ಟು: ‘ಬಿ.ಎ. ಪದವೀಧರೆ ಆಗಿರುವ ಸುಮಾ, ಐದು ವರ್ಷಗಳ ಹಿಂದೆ ಬಡಗಿ ರಾಘವೇಂದ್ರನನ್ನು ವಿವಾಹವಾಗಿದ್ದಳು. ಈ ನಡುವೆ ಆಕೆಗೆ ಫೇಸ್‌ಬುಕ್‌ನಲ್ಲಿ ತಟ್ಟೆಗುಪ್ಪೆ ಗ್ರಾಮದ ಕಿರಣ್‌ ಜತೆ ಗೆಳೆತನವಾಗಿತ್ತು. ನಂತರ ನಿತ್ಯ ಸಂದೇಶ ವಿನಿಮಯ ಮಾಡಿಕೊಳ್ಳುವ ಮೂಲಕ ಇಬ್ಬರೂ ಆಪ್ತರಾಗಿದ್ದರು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಈ ಗೆಳೆತನದ ಹಿನ್ನೆಲೆಯಲ್ಲಿ ಕಿರಣ್, ಸುಮಾಳನ್ನು ಮಡಿಕೇರಿ ಪ್ರವಾಸಕ್ಕೆ ಕರೆದಿದ್ದ. ಅಂತೆಯೇ ಆಕೆ ಗಂಡನಿಗೆ ತಿಳಿಯದಂತೆ ‘ಫೇಸ್‌ಬುಕ್‌ ಗೆಳೆಯ’ನ ಜತೆ ವರ್ಷದ ಹಿಂದೆ ಎರಡು ದಿನ ಪ್ರವಾಸ ಹೋಗಿದ್ದಳು. ಅಲ್ಲಿ ಇಬ್ಬರೂ ಮೊಬೈಲ್‌ನಲ್ಲಿ ಫೋಟೊಗಳನ್ನೂ ತೆಗೆದುಕೊಂಡಿದ್ದರು’.

‘ವಾಪಸ್ ಬಂದ ಬಳಿಕ ಆರೋಪಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಸುಮಾಳಿಗೆ ಒತ್ತಾಯಿಸಲು ಆರಂಭಿಸಿದ್ದ. ಒಪ್ಪದಿದ್ದಕ್ಕೆ ಮಡಿಕೇರಿಯಲ್ಲಿ ತೆಗೆಸಿಕೊಂಡ ಫೋಟೊಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದ. ಹೀಗೆ, ಪತ್ನಿ ಬೇರೊಬ್ಬನ ಜತೆ ಪ್ರವಾಸ ಹೋಗಿದ್ದ ವಿಷಯ ತಿಳಿದು ಕೆಂಡಾಮಂಡಲನಾಗಿದ್ದ ರಾಘವೇಂದ್ರ, ಸುಮಾಳ ಜತೆ ಗಲಾಟೆ ಮಾಡಿದ್ದ. ಅಲ್ಲದೇ, ಎರಡು ತಿಂಗಳ ಹಿಂದೆ ಕಿರಣ್‌ನನ್ನು ಭೇಟಿ ಮಾಡಿ ಎಚ್ಚರಿಕೆಯನ್ನೂ ನೀಡಿದ್ದ.’

‘ಪೋಷಕರು ಹಾಗೂ ಸಂಬಂಧಿಕರು ಬುದ್ಧಿ ಹೇಳಿದರೂ ಕೇಳದ ಕಿರಣ್, ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಎಲ್ಲ ಫೋಟೊಗಳನ್ನು ಅಪ್‌ಲೋಡ್ ಮಾಡುವುದಾಗಿ ಸುಮಾಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ವಿಷಯವನ್ನು ಆಕೆ ಪತಿಯ ಬಳಿ ಹೇಳಿಕೊಂಡಿದ್ದಳು. ಆಗ ರಾಘವೇಂದ್ರ, ಕಿರಣ್‌ಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದ. ಮೇ 4ರಂದು ಸ್ನೇಹಿತರನ್ನು ಮನೆಗೆ ಕರೆಸಿಕೊಂಡ ಆತ, ಪತ್ನಿ ಮೂಲಕ ಆತನಿಗೆ ಕರೆ ಮಾಡಿಸಿದ್ದ.’

‘ಕರೆ ಬರುತ್ತಿದ್ದಂತೆಯೇ ಕಿರಣ್, ಬೈಕ್‌ನಲ್ಲಿ ಸುಮಾಳ ಮನೆಗೆ ತೆರಳಿದ್ದ. ಆಗ ಕೈ–ಕಾಲು ಕಟ್ಟಿ ಆತನನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ ಆರೋಪಿಗಳು, ಬೆಲ್ಟ್ ಹಾಗೂ ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದರು.’

‘ತೀವ್ರ ರಕ್ತಸ್ರಾವ ಉಂಟಾಗಿ ಆತ ಪ್ರಜ್ಞೆ ಕಳೆದುಕೊಂಡ ಬಳಿಕ ಗಾಬರಿಗೊಂಡ ಆರೋಪಿಗಳು, ಎರಡು ದಿನ ತಾವೇ ಆರೈಕೆ ಮಾಡಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದಾಗ, ಕಿರಣ್‌ನ ಮಾವನಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದರು.’

‘ಆತನ ಮಾವ ಸ್ಥಳಕ್ಕೆ ಬಂದು ಕಿರಣ್‌ನನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲದೆ, ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರನ್ನೂ ಕೊಟ್ಟಿದ್ದರು. ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ದಂಪತಿ ಮನೆ ಖಾಲಿ ಮಾಡಿದ್ದರು.’

ತಿಂಗಳ ಬಳಿಕ ಸಾವು: ‘ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕಿರಣ್, ಭಾನುವಾರ (ಜೂನ್5) ಕೊನೆಯುಸಿರೆಳೆದ. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮೊದಲು ಸುಮಾ ದಂಪತಿಯನ್ನು ಬಂಧಿಸಲಾಯಿತು.

ವಿಚಾರಣೆ ವೇಳೆ ಅವರು ನೀಡಿದ ಮಾಹಿತಿ ಹಾಗೂ ಮೊಬೈಲ್ ಕರೆಗಳ ವಿವರ (ಸಿಡಿಆರ್) ಆಧರಿಸಿ ಉಳಿದ ಮೂವರನ್ನು ಪತ್ತೆ ಮಾಡಲಾಯಿತು’ ಎಂದು ಮಾಹಿತಿ ನೀಡಿದರು.

ಜಾಮೀನು ತೆಗೆದುಕೊಂಡಿದ್ದರು
‘ಬಂಧನದ ಭೀತಿ ಎದುರಿಸುತ್ತಿದ್ದ ಸುಮಾ, ರಾಘವೇಂದ್ರ ಹಾಗೂ ನಾಗೇಶ್ ಅವರು ನ್ಯಾಯಾಲಯಕ್ಕೆ ಶರಣಾಗಿ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಅಂಥೋಣಿ ಮತ್ತು ಲತೀಶ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

Comments are closed.