ಕರ್ನಾಟಕ

ಅನೈತಿಕ ಸಂಬಂಧ…ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮುಗಿಸಿಬಿಟ್ಟ ಪತ್ನಿ

Pinterest LinkedIn Tumblr

wife

ಬೆಂಗಳೂರು: ಪ್ರಿಯಕರನ ಜತೆಗೂಡಿ ಪತಿಯನ್ನು ಕೊಲೆ ಮಾಡಿದ್ದ ಮಹಿಳೆ, ‘ಅಸಹಜ ಸಾವು’ ಎಂದು ಬಿಂಬಿಸಲು ಶವವನ್ನು ರೈಲ್ವೆ ಹಳಿ ಮೇಲೆ ಎಸೆದಿದ್ದಳು. ಆದರೆ, ಸಾವಿನ ರಹಸ್ಯ ಬಯಲು ಮಾಡುವಲ್ಲಿ ಯಶಸ್ವಿಯಾಗಿರುವ ಬಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು, ಹಂತಕಿ ಪತ್ನಿ ಹಾಗೂ ಪ್ರಿಯಕರನಿಗೆ ಜೈಲಿನ ದಾರಿ ತೋರಿಸಿದ್ದಾರೆ.

‘ಬಂಗಾರಪೇಟೆ ತಾಲ್ಲೂಕು ನಕ್ಕನಾಯಕನಹಳ್ಳಿ ಗ್ರಾಮದ ಕದೀರಮ್ಮ (42) ಹಾಗೂ ಗೋವಿಂದಪ್ಪ (36) ಎಂಬುವರನ್ನು ಬಂಧಿಸಲಾಗಿದೆ. ಜೂನ್ 2ರಂದು ವೆಂಕಟಸ್ವಾಮಿ (50) ಎಂಬುವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿಗಳು, ಅದು ‘ಅಸಹಜ ಸಾವು’ ಎಂದು ಬಿಂಬಿಸಲು ಮೃತದೇಹವನ್ನು ಮಾರಿಕುಪ್ಪಂ ಸಮೀಪದ ಬಿಸನತ್ತಂ ರೈಲು ನಿಲ್ದಾಣದ ಬಳಿಯ ಹಳಿ ಮೇಲೆ ಎಸೆದು ಹೋಗಿದ್ದರು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಡ್ಡಿಯಾಗಿದ್ದ ಪತಿ: ‘ವೆಂಕಟಸ್ವಾಮಿ ಹಾಗೂ ಕದೀರಮ್ಮ ದಂಪತಿಗೆ ಮೂವರು ಮಕ್ಕಳಿದ್ದಾರೆ. ಅವರ ಮನೆಯ ಪಕ್ಕದಲ್ಲೇ ಗೋವಿಂದಪ್ಪ ಪತ್ನಿ–ಮಕ್ಕಳ ಜತೆ ನೆಲೆಸಿದ್ದಾನೆ. ನಾಲ್ಕೈದು ವರ್ಷಗಳಿಂದ ಕದೀರಮ್ಮ–ಗೋವಿಂದಪ್ಪ ಮಧ್ಯ ಅನೈತಿಕ ಸಂಬಂಧವಿತ್ತು. ಇತ್ತೀಚೆಗೆ ಈ ವಿಚಾರ ತಿಳಿದ ವೆಂಕಟಸ್ವಾಮಿ, ಇಬ್ಬರಿಗೂ ಬೈದು ಬುದ್ಧಿ ಹೇಳಿದ್ದರು.

ಈ ವಿಚಾರವಾಗಿ ಎರಡೂ ಕುಟುಂಬಗಳ ಮಧ್ಯೆ ಜಗಳ ಕೂಡ ಆಗಿತ್ತು. ಆದರೆ, ಇವರಿಬ್ಬರೂ ಬದಲಾಗಿರಲಿಲ್ಲ’. ‘ಜೂನ್ 2ರಂದು ಕದೀರಮ್ಮ–ಗೋವಿಂದಪ್ಪ ಕೋಣೆಯಲ್ಲಿ ಒಟ್ಟಿಗೇ ಇರುವುದನ್ನು ಕಂಡ ವೆಂಕಟಸ್ವಾಮಿ, ಮತ್ತೆ ಗಲಾಟೆ ಮಾಡಿದ್ದರು. ಇದರಿಂದ ಕುಪಿತಗೊಂಡ ಅವರು, ದೊಣ್ಣೆಯಿಂದ ತಲೆಗೆ ಹೊಡೆದಿದ್ದರು. ಅಲ್ಲದೆ, ಚಾಕುವಿನಿಂದ ಹಣೆಗೆ ಇರಿದಿದ್ದರು’.

‘ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿದ ವೆಂಕಟಸ್ವಾಮಿ, ಬಿಸನತ್ತಂ ರೈಲು ನಿಲ್ದಾಣಕ್ಕೆ ಬಂದು ಕುಸಿದು ಬಿದ್ದಿದ್ದರು. ಬೆನ್ನಟ್ಟಿಯೇ ಬಂದಿದ್ದ ಆರೋಪಿಗಳು, ಟವೆಲ್‌ನಿಂದ ಉಸಿರುಗಟ್ಟಿಸಿ ಹತ್ಯೆಗೈದಿದ್ದರು. ನಂತರ ಶವವನ್ನು ಹಳಿ ಮೇಲೆ ಎಸೆದು ಪರಾರಿಯಾಗಿದ್ದರು’.

‘ರೈಲು ಹರಿದು ಹೋಗಿದ್ದರಿಂದ ಆರಂಭದಲ್ಲಿ ಅಸಹಜ ಸಾವು ಎಂದೇ ಪರಿಗಣಿಸಲಾಗಿತ್ತು. ಆದರೆ, ಮೃತರ ಅಣ್ಣ ಅಪ್ಪಯ್ಯಪ್ಪ ಅವರು ಕದೀರಮ್ಮಳ ಮೇಲೆ ಅನುಮಾನ ವ್ಯಕ್ತಪಡಿಸಿದರು. ಈ ನಡುವೆ ಆಕೆಯ ವರ್ತನೆ ಕೂಡ ಬದಲಾಗಿತ್ತು. ಪ್ರಿಯಕರ ಗೋವಿಂದಪ್ಪನೂ ಊರು ಬಿಟ್ಟಿದ್ದ. ಇಷ್ಟೆಲ್ಲ ಬೆಳವಣಿಗೆಗಳಾಗಿದ್ದರಿಂದ ಅನುಮಾನಾಸ್ಪದ ಪ್ರಕರಣವನ್ನಾಗಿ ಮಾಡಿಕೊಂಡು ತನಿಖೆ ಪ್ರಾರಂಭಿಸಿದೆವು’.

‘ಕದೀರಮ್ಮಳನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ನಡೆದ ಘಟನೆಯನ್ನು ಬಾಯ್ಬಿಟ್ಟಳು. ಆಕೆಯಿಂದಲೇ ಕರೆ ಮಾಡಿಸಿ ಗೋವಿಂದಪ್ಪನನ್ನು ಗ್ರಾಮಕ್ಕೆ ಕರೆಸಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಡಿವೈಎಸ್ಪಿ ಶಾಮಣ್ಣ, ಇನ್‌ಸ್ಪೆಕ್ಟರ್ ದಿವಾಕರ್, ಎಸ್‌ಐ ಕೃಷ್ಣಪ್ಪ ಹಾಗೂ ಸಿಬ್ಬಂದಿಯ ತಂಡ ಆರೋಪಿಗಳನ್ನು ಪತ್ತೆ ಮಾಡಿದೆ.

Comments are closed.