ಕರ್ನಾಟಕ

ಮೋಜಿನ ಜೀವನಕ್ಕಾಗಿ ಕೊಲೆ !

Pinterest LinkedIn Tumblr

murder aacu

ಬೆಂಗಳೂರು: ಬಿಇಎಂಎಲ್‌ ಲೇಔಟ್‌ ನಿವಾಸಿ ಲಕ್ಷ್ಮಿ (67) ಅವರ ಕೊಲೆ ಪ್ರಕರಣ ದಲ್ಲಿ ಬಂಧಿತರಾಗಿರುವ ಆರೋಪಿಗಳು, ಕಂಪ್ಯೂಟರ್ ರಿಪೇರಿ ಮಾಡುವವರ ಸೋಗಿನಲ್ಲಿ ಹಿಂದೆಯೂ ನಾಲ್ಕು ಮನೆಗಳಿಗೆ ನುಗ್ಗಿ ಕಳವು ಮಾಡಲು ಯತ್ನಿಸಿದ್ದರು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಹತ್ಯೆ ಪ್ರಕರಣ ಸಂಬಂಧ ಮೃತರ ಪರಿಚಿತ ಕೃಷ್ಣ ಅಲಿಯಾಸ್ ಕಿಶೋರ್ (30), ಗೋಪಿ ಅಲಿಯಾಸ್ ತಂಬಿ (21), ರಾಘವೇಂದ್ರ ಅಲಿಯಾಸ್ ರಘು (33) ಹಾಗೂ ಗುರು (31) ಎಂಬುವರನ್ನು ಸೋಮವಾರವೇ ವಶಕ್ಕೆ ಪಡೆದಿದ್ದ ಪೊಲೀಸರು, ಬಂಧನವನ್ನು ಬುಧವಾರ ಅಧಿಕೃತಗೊಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

‘ಬಂಧಿತರು ಈ ಹಿಂದೆ ಸೂಲಿಬೆಲೆ, ರಾಜರಾಜೇಶ್ವರಿನಗರದ ಬಿಇಎಂಎಲ್‌ ಲೇಔಟ್, ಕೋರಮಂಗಲದ ಸೋನಿ ವರ್ಡ್‌ ಜಂಕ್ಷನ್‌ ಹಾಗೂ ಬಾಗೇಪಲ್ಲಿಯ ಮನೆಗಳಲ್ಲಿ ಕಳವಿಗೆ ಯತ್ನಿಸಿದ್ದರು. ಮಹಿಳೆಯರು ಒಂಟಿಯಾಗಿ ನೆಲೆಸಿರುವ ಮನೆಗಳನ್ನು ಗುರುತಿಸಿಕೊಂಡಿದ್ದ ಇವರು, ಕಂಪ್ಯೂಟರ್ ರಿಪೇರಿ ಮಾಡುವವರಂತೆ ಆ ಮನೆಗಳಿಗೆ ನುಗ್ಗಿದ್ದರು. ಆದರೆ, ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿರುವುದನ್ನು ಕಂಡು ಕೃತ್ಯ ಎಸಗದೆ ವಾಪಸ್ ಬಂದಿದ್ದರು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಲಕ್ಷ್ಮಿಯ ಮನೆ ಮೇಲೆ ಕಣ್ಣು: ‘ಎಂಜಿನಿಯರಿಂಗ್ ಪದವೀಧರನಾದ ಕೃಷ್ಣ, ಕಂಪ್ಯೂಟರ್‌ಗಳನ್ನು ಸರ್ವಿಸ್ ಮಾಡುತ್ತಿದ್ದ. ಉಳಿದ ಆರೋಪಿಗಳು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮೋಜಿನ ಜೀವನಕ್ಕಾಗಿ ಕೃಷ್ಣನೇ ಈ ರೀತಿ ಉಪಾಯ ಹೆಣೆದಿದ್ದ. ಹಲವು ಸಂಚುಗಳು ವಿಫಲವಾದ ಬಳಿಕ ಆತನ ಕಣ್ಣು ಲಕ್ಷ್ಮಿ ಅವರ ಮನೆ ಮೇಲೆ ಬಿದ್ದಿತು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಲಕ್ಷ್ಮಿ ಅವರ ಪತಿ ಸತ್ಯಮೂರ್ತಿ ಹಾಗೂ ಕೃಷ್ಣನ ತಂದೆ ಮೊದಲು ಬಿಇಎಂಎಲ್ ಸಂಸ್ಥೆಯಲ್ಲೇ ಉದ್ಯೋಗಿ ಗಳಾಗಿದ್ದರು. ಹೀಗಾಗಿ ಎರಡೂ ಕುಟುಂಬಗಳ ನಡುವೆ ಅನ್ಯೋನ್ಯತೆ ಇತ್ತು. ಮೂರು ವರ್ಷಗಳ ಹಿಂದೆ ಸತ್ಯಮೂರ್ತಿ ಮೃತಪಟ್ಟಿದ್ದರಿಂದ ಲಕ್ಷ್ಮಿ ಒಂಟಿಯಾಗಿದ್ದರು. ಹೀಗಾಗಿ ಅವರು ಮನೆಯ ಕೆಲಸಗಳಿಗೆ ಕೃಷ್ಣನನ್ನೇ ಅವಲಂಬಿಸಿಕೊಂಡಿದ್ದರು’.

‘ಮೇ 31ರ ಸಂಜೆ 5 ಗಂಟೆ ಸುಮಾರಿಗೆ ಕೃಷ್ಣ, ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಲಕ್ಷ್ಮಿ ಅವರ ಮನೆಗೆ ಹೋಗಿದ್ದ. ಇದೇ ವೇಳೆ ಇತರೆ ಆರೋಪಿಗಳಿಗೂ ಕರೆ ಮಾಡಿ ಮನೆ ಹತ್ತಿರ ಬಂದು ನಿಂತಿರುವಂತೆ ಹೇಳಿದ್ದ’.

‘ಕೃಷ್ಣನ ಜತೆ ಒಂದು ತಾಸು ಮಾತನಾಡಿದ್ದ ಲಕ್ಷ್ಮಿ, ಆತನಿಗೆ ಜ್ಯೂಸ್ ಮಾಡಿಕೊಡಲು ಅಡುಗೆ ಕೋಣೆಗೆ ಹೋಗಿದ್ದರು. ಈ ಹಂತದಲ್ಲಿ ಆತ, ಸ್ನೇಹಿತರನ್ನು ಒಳಗೆ ಕರೆಸಿಕೊಂಡಿದ್ದ. ಕಿರುಚಾಡದಂತೆ ಲಕ್ಷ್ಮಿ ಅವರ ಬಾಯಿಗೆ ಬಟ್ಟೆ ತುರುಕಿದ್ದ ಆರೋಪಿಗಳು, ಮುಖಕ್ಕೆ ಟೇಪ್‌ ಸುತ್ತಿ ಉಸಿರುಗಟ್ಟಿಸಿದ್ದರು. ನಂತರ ಮೊಬೈಲ್ ಚಾರ್ಜರ್‌ನಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದರು’.

‘ಆ ಬಳಿಕ ಲಕ್ಷ್ಮಿ ಅವರ ಮೈಮೇಲಿದ್ದ ಎರಡು ಚಿನ್ನದ ಸರಗಳು, ಕಿವಿ ಓಲೆಗಳು ಹಾಗೂ ಬಳೆಗಳನ್ನು ಬಿಚ್ಚಿಕೊಂಡು ಮನೆಯಿಂದ ಹೊರ ನಡೆದಿದ್ದರು. ಜೂನ್ 1ರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನೆರೆ ಮನೆಯ ಮಹಿಳೆಯೊಬ್ಬರು ಲಕ್ಷ್ಮಿ ಅವರ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿತ್ತು’.

‘ಹಂತಕರ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಸ್ಥಳೀಯರನ್ನು ವಿಚಾರಣೆ ನಡೆಸಿ ಲಕ್ಷ್ಮಿ ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದವರ ಬಗ್ಗೆ ಮಾಹಿತಿ ಪಡೆಯಲಾಯಿತು. ಆಗ ಕೃಷ್ಣನ ಹೆಸರು ಕೇಳಿ ಬಂತು. ಮೇ 31ರ ಸಂಜೆ ಆತ ಲಕ್ಷ್ಮಿ ಅವರ ಮನೆ ಬಳಿ ಇದ್ದ ಬಗ್ಗೆ ಸ್ಥಳೀಯರು ಹೇಳಿಕೆ ಕೊಟ್ಟರು. ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಾಯ್ಬಿಟ್ಟ’ ಎಂದು ಮಾಹಿತಿ ನೀಡಿದರು.

ದಾರಿ ಬದಲಿಸಿದರು
‘ಮೇ 27ರಂದು ಲಕ್ಷ್ಮಿ ಅವರ ಮನೆ ಹತ್ತಿರ ಹೋಗಿದ್ದ ಆರೋಪಿಗಳು, ಸುತ್ತಮುತ್ತ ಎಲ್ಲೆಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳಿವೆ ಎಂಬ ಬಗ್ಗೆ ಪರಿಶೀಲಿಸಿದ್ದರು. ಅಲ್ಲಿನ ಬ್ಯಾಂಕ್‌ ಕಟ್ಟಡ ಹೊರಭಾಗದಲ್ಲಿದ್ದ ಕ್ಯಾಮೆರಾ ಅವರ ಕಣ್ಣಿಗೆ ಬಿದ್ದಿತ್ತು. ಹೀಗಾಗಿ ಮೇ 31ರ ಸಂಜೆ ಆ ಮಾರ್ಗವಾಗಿ ಬಾರದೆ, ದೇವಸ್ಥಾನದ ರಸ್ತೆ ಕಡೆಯಿಂದ ಬಂದು ಲಕ್ಷ್ಮಿ ಅವರ ಮನೆಗೆ ನುಗ್ಗಿದ್ದರು’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

** *** **
ಒಂಟಿಯಾಗಿ ನೆಲೆಸಿರುವ ಹಿರಿಯ ನಾಗರಿಕರು, ಸುರಕ್ಷತೆ ದೃಷ್ಟಿಯಿಂದ ಹತ್ತಿರದ ಠಾಣೆಗಳಿಗೆ ತೆರಳಿ ತಮ್ಮ ವಿಳಾಸ–ಮೊಬೈಲ್ ಸಂಖ್ಯೆ ಕೊಡಬೇಕು. ನಿತ್ಯ ಸಿಬ್ಬಂದಿ ತಮ್ಮ ಜತೆ ಸಂಪರ್ಕದಲ್ಲಿರುತ್ತಾರೆ.
-ಅಜಯ್ ಹಿಲೋರಿ, ಡಿಸಿಪಿ, ಪಶ್ಚಿಮ ವಿಭಾಗ

Comments are closed.